ಹುಲಿಕೆರೆ ದೊಡ್ಡ ಮಠದಲ್ಲಿ ಬುಧವಾರ ನಡೆದ ಲಿಂಗೈಕ್ಯ ಶ್ರೀ ಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಪುಣ್ಯ ಸ್ಮರಣಾರಾಧನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಠ ಮಾನ್ಯಗಳು ಮತ್ತು ಮಠಾಧೀಶರ ಗಟ್ಟಿ ನಿಲುವಿನಿಂದಾಗಿ ದೇಶದಲ್ಲಿಂದು ಧರ್ಮ ಉಳಿದಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಕಡೂರು ತಾಲೂಕಿನ ಹುಲಿಕೆರೆ ದೊಡ್ಡ ಮಠದಲ್ಲಿ ಬುಧವಾರ ನಡೆದ ಲಿಂಗೈಕ್ಯ ಶ್ರೀ ಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಪುಣ್ಯ ಸ್ಮರಣಾರಾಧನೆ ಹಾಗೂ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಪ್ರಥಮ ವರ್ಷದ ಪಟ್ಟಾಧಿಕಾರ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.ನಮ್ಮ ಮಠ ಮಾನ್ಯಗಳು ಮಠಾಧೀಶರು ಸರ್ಕಾರಕ್ಕೆ ಸರಿಸಮನಾಗಿ ಶಾಲಾ ಕಾಲೇಜುಗಳನ್ನು ನಡೆಸುವ ಮೂಲಕ ವಿದ್ಯಾದಾನದ ಜೊತೆಗೆ ಅನ್ನದಾಸೋಹವನ್ನೂ ನಿರಂತರವಾಗಿ ಮಾಡುತ್ತಿವೆ, ಅದರ ಜೊತೆ ಜೊತೆಗೆ ಧರ್ಮ ಪ್ರಚಾರ ವನ್ನೂ ನಡೆಸುವ ಮೂಲಕ ನಮ್ಮ ಧರ್ಮ ಉಳಿಸುತ್ತಿವೆ ಎಂದು ತಿಳಿಸಿದರು.ಫಲಾಹಾರಸ್ವಾಮಿ ಮಠದ ಶ್ರೀ ಮುರುಗೇಂದ್ರ ಸ್ವಾಮೀಜಿ ಮಾತನಾಡಿ, ಮಠ ಮಂದಿರಗಳು ಧರ್ಮ ಬೆಳೆಸುವ ಜೊತೆಗೆ ಸಮಾಜದಲ್ಲಿ ಭಾವೈಕ್ಯತೆ ಮೂಡಿಸಿ ಜನರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಮ್ಮ ಗುರುಗಳ ಅಣತಿ ಮತ್ತು ಅಭಿಲಾಷೆಯಂತೆ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.ಶ್ರೀ ವಿರೂಪಾಕ್ಷ ಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ, ಹಾಗಾಗಿ ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಕಿವಿಮಾತು ಹೇಳಿದರು.ಸಮಾರಂಭಕ್ಕೆ ಮುನ್ನ ಕರ್ತೃ ಗದ್ದುಗೆಗೆ ಅಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.ಯಳನಾಡು ಮಠದ ಶ್ರೀ ಡಾ. ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕೆ. ಬಿದರೆ ಮಠದ ಶ್ರೀ ಪ್ರಭು ಕುಮಾರ ಶಿವಾಚಾರ್ಯ ಸ್ವಾಮೀಜಿ, ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಂಭಾಪುರಿ ಬೀರೂರು ಶಾಖಾಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿ ಮಠದ ಶ್ರೀ ರೇಣುಕ ಮಹಂತ ಶಿವಾಚಾರ್ಯ ಸ್ವಾಮೀಜಿ, ಕರಡಿ ಗವಿಮಠದ ಶ್ರೀ ಶಿವಯೋಗಿ ಶಿವಶಂಕರ ಸ್ವಾಮೀಜಿ, ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ.ಎಲ್. ಮೂರ್ತಿ, ಮಹಡಿಮನೆ ಸತೀಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ. ಲೋಕೇಶ್, ತಾಲೂಕು ಅಧ್ಯಕ್ಷ ಬಿ.ಎ. ಶಿವಶಂಕರ್, ತಾಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಎ.ಎಸ್.ಎಸ್. ಆರಾಧ್ಯ ಉಪಸ್ಥಿತರಿದ್ದರು.ಸಮಾರಂಭದ ನಡುವೆ ಅಂತಾರಾಷ್ಟ್ರೀಯ ಕಲಾವಿದರಾದ ಪಿ. ನಿತ್ಯ ಮತ್ತು ಎಸ್. ಕೃತಿ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.3 ಕೆಸಿಕೆಎಂ 4
ಕಡೂರು ತಾಲೂಕಿನ ಹುಲಿಕೆರೆ ದೊಡ್ಡ ಮಠದಲ್ಲಿ ಬುಧವಾರ ನಡೆದ ಲಿಂಗೈಕ್ಯ ಶ್ರೀ ಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಪುಣ್ಯ ಸ್ಮರಣಾರಾಧನೆ ಹಾಗೂ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಥಮ ವರ್ಷದ ಪಟ್ಟಾಧಿಕಾರ ಮಹೋತ್ಸವವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.