ಸಮಾಜದ ಪ್ರಗತಿಗೆ ಧರ್ಮ ಸಮನ್ವಯ ಅಗತ್ಯ

KannadaprabhaNewsNetwork |  
Published : Apr 06, 2024, 12:57 AM IST
ಚಿತ್ರ 5ಬಿಡಿಆರ್2ಬೀದರ್‌ ತಾಲೂಕಿನ ಅಷ್ಟೂರ್‌ ಗ್ರಾಮದ ಶ್ರೀ ಅಲ್ಲಮಪ್ರಭುಗಳ ಜಾತ್ರೋತ್ಸವ ನಿಮಿತ್ತ ಐತಿಹಾಸಿಕ ಗುಂಬಜದಲ್ಲಿ ಶುಕ್ರವಾರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಚಾದರ್‌ ಸಮರ್ಪಿಸಿದರು. ಪ್ರಮುಖರಾದ ವಿಜಯಕುಮಾರ ಆನಂದೆ, ವಿಜಯಕುಮಾರ ಪಾಟೀಲ್‌ ಖಾಜಾಪುರ, ಸದಾನಂದ ಜೋಶಿ, ಶಶಿಧರ ಪಾಟೀಲ್‌ ಇತರರಿದ್ದರು. | Kannada Prabha

ಸಾರಾಂಶ

ಸೌಹಾರ್ದತೆ, ಧರ್ಮ ಸಮನ್ವಯಕ್ಕೆ ಹೆಸರುವಾಸಿಯಾದ ತಾಲೂಕಿನ ಅಷ್ಟೂರ್‌ ಗ್ರಾಮದ ಐದು ದಿನಗಳ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಸಂಭ್ರಮದೊಂದಿಗೆ ತೆರೆ ಬಿತ್ತು.

ಬೀದರ್: ಸೌಹಾರ್ದತೆ, ಧರ್ಮ ಸಮನ್ವಯಕ್ಕೆ ಹೆಸರುವಾಸಿಯಾದ ತಾಲೂಕಿನ ಅಷ್ಟೂರ್‌ ಗ್ರಾಮದ ಐದು ದಿನಗಳ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಸಂಭ್ರಮದೊಂದಿಗೆ ತೆರೆ ಬಿತ್ತು.

ಇಲ್ಲಿರುವ ಐತಿಹಾಸಿಕ ಗುಂಬಜ್‌ದಲ್ಲಿ ಒಂದೆಡೆ ಮುಸ್ಲಿಂ ಸಮಾಜದವರು ಸುಲ್ತಾನ್‌ ಅಹಮದ್‌ ಶಾ ಅಲಿವಲಿ ಅವರ ಜನ್ಮದಿನ, ಸಂದಲ್‌ ಕಾರ್ಯಕ್ರಮ ಸಂಭ್ರಮದಿಂದ ಮಾಡಿದರೆ, ಇನ್ನೊಂದೆಡೆ ಹಿಂದುಗಳು ಅಲ್ಲಮಪ್ರಭುಗಳ ಜಾತ್ರೆಯನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಜನರು ಜಾತ್ರೆಯಲ್ಲಿ ಪಾಲ್ಗೊಂಡು ಭಾವೈಕ್ಯತೆಯನ್ನು ಮೆರೆದರು.

ರಂಜಾನ್‌ ಮಾಸದ ಕೊನೆ ಶುಕ್ರವಾರ ಗುಂಬಜ್‌ ಪಕ್ಕದಲ್ಲಿರುವ ಅಂಗಳದಲ್ಲಿ ಕುಸ್ತಿ ಪಂದ್ಯಾವಳಿಗಳು ನಡೆದವು. ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಇಡೀ ದೇಶದಲ್ಲೇ ಅಷ್ಟೂರ್‌ ಜಾತ್ರೆ ವಿಶಿಷ್ಟವಾಗಿದೆ. ಒಂದೇ ದರ್ಗಾದಲ್ಲಿ ಹಿಂದು ಮುಸ್ಲಿಮರು ಸೇರಿ ಅಹಮದ್‌ ಶಾ ಅಲಿ ವಲಿ ಜನ್ಮ ದಿವಸ, ಅಲ್ಲಮಪ್ರಭುಗಳ ಜಾತ್ರೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ನೂರಾರು ವರ್ಷಗಳಿಂದ ಈ ಜಾತ್ರೆ ಪರಂಪರೆ ಮುಂದುವರೆದುಕೊಂಡು ಬಂದಿದ್ದು, ಸಮಾಜಕ್ಕೆ ಧರ್ಮ ಸಮನ್ವಯತೆ, ಸೌಹಾರ್ದತೆ ಸಂದೇಶ ಸಾರುತ್ತಿದೆ ಎಂದು ಬಣ್ಣಿಸಿದರು.

ಸಮಾಜದ ಸಮಗ್ರ ಅಭಿವೃದ್ಧಿಗೆ ಇಂದು ಧರ್ಮ ಸಮನ್ವಯತೆ ತೀರ ಅಗತ್ಯವಾಗಿದೆ. ನಾವೆಲ್ಲರೂ ಭಾರತೀಯರು ಎಂಬ ಭಾವ, ರಾಷ್ಟ್ರ ಮೊದಲು (ನೇಷನ್‌ ಫಸ್ಟ್‌) ಎಂಬ ಭಾವನೆ ಮೈಗೂಡಿಸಿಕೊಳ್ಳಬೇಕಾಗಿದೆ. ಎಲ್ಲ ಜಾತಿ, ಜನಾಂಗದವರು ಒಟ್ಟಾಗಿ ಧರ್ಮ ಸಮನ್ವಯ ಚಿಂತನೆಯಿಂದ ಸಾಗಿದಾಗ ಸಮಾಜ ಸಮೃದ್ಧ, ಶಾಂತ ಹಾಗೂ ನೆಮ್ಮದಿಯಿಂದ ಇರಲು ಸಾಧ್ಯ. ಪರಸ್ಪರ ಜಾತಿ, ಧರ್ಮದ ಮತಭೇದ ಇರದಿದ್ದಾಗ ಕೋಮುಭಾವನೆ ಮೂಡುವ, ಕೋಮುದ್ವೇಷ ನಿರ್ಮಾಣವಾಗುವ ಪ್ರಶ್ನೆಯೇ ಬರುವುದಿಲ್ಲ. ರಾಷ್ಟ್ರದ ಪ್ರಗತಿಗಾಗಿ ಎಲ್ಲರೂ ಒಗ್ಗಟ್ಟಾಗಿ ಸಾಗುವ ಸಂಕಲ್ಪ ಮಾಡಬೇಕು. ಇದಕ್ಕೆ ಅಷ್ಟೂರಿನಂಥ ಜಾತ್ರೋತ್ಸವವೇ ಪ್ರೇರಣೆಯಾಗಬೇಕು ಎಂದು ಕರೆ ನೀಡಿದರು.

ಬೀದರ್‌ ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯಕುಮಾರ ಆನಂದೆ ಗಾದಗಿ, ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಜೋಶಿ, ಪ್ರಮುಖರಾದ ಇರ್ಷಾದ್‌ ಅಲಿ ಪೈಲ್ವಾನ್‌, ವಿಜಯಕುಮಾರ ಪಾಟೀಲ್‌ ಖಾಜಾಪುರ, ಶರಣಪ್ಪ ಓತಿ, ಶಶಿಧರ ಪಾಟೀಲ್‌, ಅರ್ಜುನರಾವ್‌ ಕಾಳಗೊಂಡ, ಶಿವಕುಮಾರ ನಾಗಲಗಿದ್ದಿ, ವಿನೋದ ಪಸರ್ಗಿ, ಸಂಗಮೇಶ ಹಳ್ಳಿ, ರಾಜಕುಮಾರ ನಾಗಲಗಿದ್ದಿ, ಬಾಬುರಾವ್‌ ನಾಗಲಗಿದ್ದಿ, ರಾಹುಲ್‌ ಮೋರೆ, ಧನರಾಜ ಭಾಲ್ಕೆ, ಪ್ರಭು ಪಸರ್ಗಿ, ಲೋಕೇಶ ಜ್ಯಾಂತೆ, ಸಂಜು ಶರಣಪ್ಪನೋರ ಹಾಗೂ ಸಂಜುಕುಮಾರ ಕೋಳಿ ಸೇರಿದಂತೆ ಇತರರಿದ್ದರು.

ನಂತರ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಗುಂಬಜದಲ್ಲಿರುವ ಅಹಮದ್‌ ಷಾ ಅಲಿ ವಲಿ ಸಮಾಧಿಗೆ ಚಾದರ್‌ ಸಮರ್ಪಿಸಿ, ಪುಷ್ಪ ನಮನ ಸಲ್ಲಿಸಿದರು. ಅಲ್ಲಮಪ್ರಭುಗಳನ್ನು ಪೂಜಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ