ಕಾರ್ಗಿಲ್ ಯುದ್ಧದಲ್ಲಿ ಮಡಿದ ಕೊಡಗಿನ ವೀರ ಯೋಧರ ಸ್ಮರಣೆ

KannadaprabhaNewsNetwork |  
Published : Jul 26, 2024, 01:45 AM IST
ಚಿತ್ರ : ಪೆಮ್ಮಂಡ ಕಾವೇರಪ್ಪ  | Kannada Prabha

ಸಾರಾಂಶ

1999ರ ಮೇ ತಿಂಗಳಿಂದ ಜುಲೈ 26ರ ವರೆಗೆ ಕಾರ್ಗಿಲ್‌ ಯುದ್ಧ ನಡೆದಿತ್ತು. ಯುದ್ಧದಲ್ಲಿ ಸಾವಿರಾರು ಮಂದಿ ಯೋಧರು ಹೋರಾಡಿದ್ದಾರೆ. ಅಂತಹ ವೀರ ಸೈನಿಕರಲ್ಲಿ ಕೊಡಗಿನ ವಿರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದ ಪೆಮ್ಮಂಡ ಡಿ. ಕಾವೇರಪ್ಪ ಹಾಗೂ ಸೋಮವಾರಪೇಟೆ ತಾಲೂಕಿನ ಕಿರಂಗಂದೂರಿನ ಮರಾಠಾ ಲೈಟ್ ಇನ್‌ಫೆಂಟ್ರಿ ಎಸ್‌.ಕೆ. ಮೇದಪ್ಪ, ವಿರಾಜಪೇಟೆಯ ಮೈತಾಡಿ ಗ್ರಾಮದ ವಿ.ಎಲ್ ಗಣೇಶ್ ಪ್ರಮುಖರು.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತ-ಪಾಕಿಸ್ತಾನ ನಡುವೆ 25 ವರ್ಷಗಳ ಹಿಂದೆ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಕೊಡಗಿನ ವೀರ ಯೋಧರು ಕೂಡ ಹೋರಾಡಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜು.26ರಂದು 25ನೇ ಕಾರ್ಗಿಲ್‌ ವಿಜಯ್‌ ದಿವಸದಂದು ವೀರ ಯೋಧರ ಸ್ಮರಣೆ ಮಾಡಲಾಗುತ್ತಿದೆ.

ಅಂದು 60 ದಿನಗಳ ಕಾಲ ದೇಶಕ್ಕಾಗಿ ಕಾದಾಡಿದ ಭಾರತೀಯ ಯೋಧರು 1999ರ ಜುಲೈ 26ರಂದು ಪಾಕಿಸ್ತಾನ ಪಡೆಗಳನ್ನು ದೇಶದ ಗಡಿದಾಟಿಸಿ ಅಟ್ಟುವುದರಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಯುದ್ಧದಲ್ಲಿ ನಮ್ಮ ಸೇನಾಪಡೆಯ 527 ಯೋಧರು ಹುತಾತ್ಮರಾದರು. ಸಾವಿರಾರು ಜನರು ಗಾಯಗೊಂಡಿದ್ದರು. ದೇಶ ರಕ್ಷಣೆ ವಿಚಾರ ಬಂದಾಗ ಸದಾ ಒಂದು ಹೆಜ್ಜೆ ಮುಂದೆ ಇರುವ ಕರ್ನಾಟಕದ ಹಲವು ಯೋಧರು ಈ ಯುದ್ಧದಲ್ಲಿ ವೀರಸ್ವರ್ಗ ಸೇರಿದ್ದಾರೆ.

ಕೊಡಗು ಪುಟ್ಟ ಜಿಲ್ಲೆಯಾದರೂ ಸೇನಾ ಕ್ಷೇತ್ರಕ್ಕೆ ತನ್ನದೇ ಆದ ವಿಶೇಷ ಕೊಡುಗೆ ನೀಡಿದೆ. ಹಲವಾರು ಪ್ರಮುಖ ಯುದ್ಧಗಳಲ್ಲಿ ಕೊಡಗಿನ ಯೋಧರು ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ಅದರಂತೆ ಕಾರ್ಗಿಲ್‌ ಯುದ್ಧವೂ ಒಂದು.

1999ರ ಮೇ ತಿಂಗಳಿಂದ ಜುಲೈ 26ರ ವರೆಗೆ ಕಾರ್ಗಿಲ್‌ ಯುದ್ಧ ನಡೆದಿತ್ತು. ಯುದ್ಧದಲ್ಲಿ ಸಾವಿರಾರು ಮಂದಿ ಯೋಧರು ಹೋರಾಡಿದ್ದಾರೆ.

ಅಂತಹ ವೀರ ಸೈನಿಕರಲ್ಲಿ ಕೊಡಗಿನ ವಿರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದ ಪೆಮ್ಮಂಡ ಡಿ. ಕಾವೇರಪ್ಪ ಹಾಗೂ ಸೋಮವಾರಪೇಟೆ ತಾಲೂಕಿನ ಕಿರಂಗಂದೂರಿನ ಮರಾಠಾ ಲೈಟ್ ಇನ್‌ಫೆಂಟ್ರಿ ಎಸ್‌.ಕೆ. ಮೇದಪ್ಪ, ವಿರಾಜಪೇಟೆಯ ಮೈತಾಡಿ ಗ್ರಾಮದ ವಿ.ಎಲ್ ಗಣೇಶ್ ಪ್ರಮುಖರು.

ಪೆಮ್ಮಂಡ ಡಿ. ಕಾವೇರಪ್ಪ ವಿರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದವರು. ಪೆಮ್ಮಂಡ ದೇವಯ್ಯ- ಬೊಳ್ಳಮ್ಮ ದಂಪತಿ ಪುತ್ರರಾಗಿ ಜು.6 1966ರಲ್ಲಿ ಜನಿಸಿದರು. ಮೈತಾಡಿಯ ಸರ್ಕಾರಿ ಶಾಲೆಯಲ್ಲಿ ಓದಿ, ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಗಲೇ ಅವರಿಗೆ ಸೇನೆ ಸೇರುವ ಅವಕಾಶ ದೊರಕಿತು.

1985ರಲ್ಲಿ ಸೇನೆಯಲ್ಲಿ ತೊಡಗಿಸಿಕೊಂಡ ಅವರು 25ನೇ ವಯಸ್ಸಿನಲ್ಲಿ ಶೋಭಾ ಅವರನ್ನು ಬಾಳ ಸಂಗಾತಿಯಾಗಿ ಪಡೆದರು. 1997ರಲ್ಲಿ ನಾಯಕ್‌ ಆಗಿ ಸೇನೆಯಲ್ಲಿ ಮಿಂಚಿದರು. ಕಾವೇರಪ್ಪ ಅವರು ಅಸ್ಸಾಂ, ಪಂಜಾಬ್‌, ಉದಂಪುರ, ಬಾರಮುಲ್ಲಾಗಳಲ್ಲಿ ಸೇನೆಯಲ್ಲಿ ಕೆಲಸ ಮಾಡಿದ್ದಾರೆ. 1999ರ ಜುಲೈ ತಿಂಗಳಲ್ಲಿ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಎಂಟು ದಿನಗಳ ಕಾಲ ನಡೆದ ಹೋರಾಟದಲ್ಲಿ ಉಗ್ರರನ್ನು ಹೊಡೆದುರುಳಿಸಿದರು. ಪಾಕ್‌ ಸೈನಿಕರ ಶೇಲ್‌ ದಾಳಿಗೆ ಎದೆಯೊಡ್ಡಿ ಹುತಾತ್ಮರಾದರು.

1999ರಲ್ಲಿ ಕಾವೇರಪ್ಪ ಅವರು ಸೇನೆಗೆ ಸೇರಿ 14 ವರ್ಷವಾಗಿತ್ತು. ಈ ಸಂದರ್ಭ ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಹೀಗೆ ಎರಡು ದೇಶಗಳ ನಡುವೆ ಯುದ್ಧ ಘೋಷಣೆಯಾಯಿತು. ಕಾಶ್ಮೀರದ ದ್ರಾಸ್‌ ಎಂಬಲ್ಲಿ ಕಾವೇರಪ್ಪ ಮತ್ತು ಅವರ ತಂಡ ಹೋರಾಟಕ್ಕಿಳಿಯಿತು. ಹೀಗೆ ಪಾಕ್‌ ಸೈನಿಕರ ವಿರುದ್ಧ ಭಾರತದ ಸೈನಿಕರು ಹೋರಾಟ ನಡೆಸಿದರು.

ಹಲವಾರು ದಿನ ಕಾವೇರಪ್ಪ ಅವರು ಅನ್ನ ನೀರಿನಲ್ಲದೆ ದೇಶ ರಕ್ಷಣೆಯಲ್ಲಿ ತೊಡಗಿದ್ದರು. ಜು.6 1999ರಂದು ಪಾಕಿಸ್ತಾನ ಸೈನಿಕರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಕಾವೇರಪ್ಪ ಅವರ ದೇಹಕ್ಕೆ ಗುಂಡು ತಾಗಿತ್ತು. ಹೀಗೆ ದೇಶಕ್ಕಾಗಿ ಹೋರಾಡಿದ ಕೊಡಗಿನ ಸುಪುತ್ರ ಇಹಲೋಕ ತ್ಯಜಿಸಿದರು. ಕಾವೇರಪ್ಪ ಅವರ ನೆನಪಿಗಾಗಿ ಹುಟ್ಟೂರು ಮೈತಾಡಿಯಲ್ಲಿ ಸಮಾಧಿ ನಿರ್ಮಿಸಲಾಗಿದೆ. ಪ್ರತಿ ವರ್ಷ ಕಾರ್ಗಿಲ್‌ ವಿಜಯೋತ್ಸವದಂದು ಕುಟುಂಬಸ್ಥರು ಹಾಗೂ ಮಾಜಿ ಸೈನಿಕರು ಅಲ್ಲಿ ನೆನಪು ಮಾಡಿಕೊಳ್ಳುತ್ತಾರೆ.

ಹಾವು ಕಡಿದು ಮೃತಪಟ್ಟಿದ್ದ ಯೋಧ:

ಕಾರ್ಗಿಲ್ ಸಮರದಲ್ಲಿ ಪಾಲ್ಗೊಂಡಿದ್ದ ಕೊಡಗಿನ ಮೈತಾಡಿ ಗ್ರಾಮದ ವಿ.ಎಲ್. ಗಣೇಶ್ ಹಾವು ಕಡಿದು ಮೃತಪಟ್ಟಿದ್ದರು. 1999 ಜು.16ರಂದು ಕಾರ್ಗಿಲ್ ನ ಪಿಂಡಿ ಪ್ರದೇಶದಲ್ಲಿ ಗಣೇಶ್ ತನ್ನ ಕರ್ತವ್ಯದ ಸಂದರ್ಭದಲ್ಲಿ ವಿಷಪೂರಿತ ಹಾವು ಕಡಿದು ಮೃತಪಟ್ಟರು.

ಗಡಿ ಭದ್ರತಾ ಪಡೆಯಲ್ಲಿ ಸುಮಾರು 14 ವರ್ಷ ಸೇವೆ ಸಲ್ಲಿಸಿದ್ದರು. ಅವರ ಪಾರ್ಥೀವ ಶರೀರ ಜು.18ರಂದು ಮೈತಾಡಿಗೆ ಆಗಮಿಸಿತ್ತು. ಜಡಿ ಮಳೆಯಲ್ಲೂ ಯೋಧನ ಅಂತಿಮ ದರ್ಶನ ಪಡೆದು ಸಾರ್ವಜನಿಕರು ಗೌರವ ಸಲ್ಲಿಸಿದ್ದರು. ಎಂ.ಸಿ. ನಾಣಯ್ಯ ಅಂದು ಉಸ್ತುವಾರಿ ಸಚಿವರಾಗಿ ಯೋಧನಿಗೆ ಗೌರವ ಸಲ್ಲಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ