250 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕಿದ್ದ ತೊಡಕು ನಿವಾರಣೆ

KannadaprabhaNewsNetwork |  
Published : Oct 19, 2025, 01:00 AM IST
250 ಹಾಸಿಗೆ  ಆಸ್ಪತ್ರೆ ನಿಮಾ೯ಣಕ್ಕಿದ್ದ ತೊಡಕು ನಿವಾರಣೆ | Kannada Prabha

ಸಾರಾಂಶ

ಪಟ್ಟಣದಲ್ಲಿ ಬಡ ರೋಗಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸರ್ಕಾರ ಮುಡಿಗುಂಡ ಸಮೀಪದಲ್ಲಿರುವ ರೇಷ್ಮೆ ಇಲಾಖೆಯ ಐದು ಎಕರೆ ಜಾಗದಲ್ಲೆ 250 ಹಾಸಿಗೆಗಳ ಕಟ್ಟಡ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಆಸ್ಪತ್ರೆ ನಿರ್ಮಾಣಕ್ಕಿದ್ದ ತೊಡಕು ನಿವಾರಣೆಯಾಗಿದೆ.

ಕನ್ನಡಪ್ರಭ ವಾತೆ೯, ಕೊಳ್ಳೇಗಾಲ

ಪಟ್ಟಣದಲ್ಲಿ ಬಡ ರೋಗಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸರ್ಕಾರ ಮುಡಿಗುಂಡ ಸಮೀಪದಲ್ಲಿರುವ ರೇಷ್ಮೆ ಇಲಾಖೆಯ ಐದು ಎಕರೆ ಜಾಗದಲ್ಲೆ 250 ಹಾಸಿಗೆಗಳ ಕಟ್ಟಡ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಆಸ್ಪತ್ರೆ ನಿರ್ಮಾಣಕ್ಕಿದ್ದ ತೊಡಕು ನಿವಾರಣೆಯಾಗಿದೆ.

250 ಹಾಸಿಗೆಗಳ ಆಸ್ಪತ್ರೆಯನ್ನು ಈಗಿರುವ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಮೇಲಿನ ಭಾಗದಲ್ಲಿ ಇಲ್ಲವೇ, ಹಾಲಿ ಕಟ್ಟಡ ಕೆಡವಿ ನಿರ್ಮಾಣ ಮಾಡುವ ಸಂಬಂಧ ಹಿರಿಯ ಅಧಿಕಾರಿಗಳು ವಿಚಾರ ಮಂಡಿಸಿದ್ದರು. ಹಾಲಿ ಕಟ್ಟಡ ಕೆಡವಿದರೆ ಸಮಸ್ಯೆ ಆಗುತ್ತೆ, ಹಾಗಾಗಿ ಹೊಸ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಶಾಸಕ ಎ. ಆರ್‌. ಕೃಷ್ಣಮೂರ್ತಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ಗೆ ಮನವರಿಕೆ ಮಾಡಿಕೊಟ್ಟರು.

ಕೊಳ್ಳೇಗಾಲ ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಾಲಿ ಕಟ್ಟಡ ಕೆಡವಿ ಇಲ್ಲೆ 250 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಿದರೆ ತೊಂದರೆಯಾಗಲಿದೆ. ಜಾಗದ, ಪಾರ್ಕಿಂಗ್ ಕೊರತೆ ಎದುರಾಗಲಿದೆ. ಹಾಲಿ ರೇಷ್ಮೆ ಇಲಾಖೆಯಿಂದ ಆಸ್ಪತ್ರೆಗೆ ನೀಡಿರುವ 5 ಎಕರೆ ಜಾಗದಲ್ಲೆ ಕಟ್ಟಡ ನಿರ್ಮಿಸಲು ಮುಂದಾಗಬೇಕು ಎಂದು ಮನವರಿಕೆ ಮಾಡಿಕೊಟ್ಟ ಹಿನ್ನೆಲೆ ಸಚಿವರು ಸಮ್ಮತಿ ಸೂಚಿಸಿದರು. 48 ಕೋಟಿ ರು. ಲಭ್ಯತೆ ಅನುದಾನದಲ್ಲಿ ಅಗತ್ಯ ಕ್ರಮದ ಬಳಿಕ ಕಾಮಗಾರಿ ಪ್ರಾರಂಭಿಸುವ ನಿರ್ಣಯ ಕೈಗೊಳ್ಳಲಾಯಿತು.ಪಟ್ಟಣದಲ್ಲಿ 2 ದಶಕಗಳಿಂದ ನಿರ್ಮಾಣ ಹಂತದಲ್ಲಿರುವ ಡಾ. ಬಿ. ಆರ್‌. ಅಂಬೇಡ್ಕರ್ ಭವನ, ಶಾದಿಮಹಲ್ ಅನ್ನು ಉದ್ಘಾಟಿಸಲು ಹಾಗೂ 250 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರನ್ನು ಕರೆತರುವ ಕುರಿತು ಶಾಸಕರು ಚಿಂತಿಸಿದ್ದಾರೆ. ಆಸ್ಪತ್ರೆ ನಿರ್ಮಾಣ ಕಾಮಾಗಾರಿ ಟೆಂಡರ್ ಪ್ರಕ್ರಿಯೆ ಆಗುತ್ತಿದ್ದಂತೆ ಈ ಎಲ್ಲಾ ಕಟ್ಟಡಗಳ ಲೋಕಾರ್ಪಣೆಗೂ ದಿನಾಂಕ ನಿಗದಿಗೊಳಿಸುವ ಉತ್ಸುಕತೆಯಲ್ಲಿ ಶಾಸಕರಿದ್ದಾರೆ.

ಶಾಸಕ ಎ. ಆರ್. ಕೃಷ್ಣಮೂರ್ತಿ ಮಾತನಾಡಿ, 250 ಹಾಸಿಗೆ ನಿರ್ಮಾಣಕ್ಕಿದ್ದ ತೊಡಕನ್ನು ಆರೋಗ್ಯ ಸಚಿವರು, ಅಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿದಿದೆ. ಹಾಲಿ ಆಸ್ಪತ್ರೆ ಕಟ್ಟಡ ಕೆಡವಿ ಅದೇ ಜಾಗದಲ್ಲಿ ನಿರ್ಮಿಸಬೇಕೆಂಬ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದ್ದರು. ಆದರೆ 250 ಹಾಸಿಗೆಗಳ ಕಟ್ಟಡ ನಿರ್ಮಾಣಕ್ಕೆ ಈಗಿರುವ ಜಾಗ ಸಾಕಾಗಲ್ಲ, ಅನೇಕ ಸಮಸ್ಯೆಗಳು ಉಂಟಾಗಲಿವೆ. ಹೆದ್ದಾರಿ ಹಾದು ಹೋಗಿರುವ ಹಿನ್ನೆಲೆ ಜನದಟ್ಟಣೆ ಸೇರಿದಂತೆ ಅನೇಕ ವಿಚಾರವನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆ ತೊಡಕು ನಿವಾರಣೆಯಾಗಿದೆ ಎಂದು ತಿಳಿಸಿದರು.

5 ಎಕರೆ ಜಾಗ ಆಸ್ಪತ್ರೆ ನಿರ್ಮಾಣಕ್ಕೆ ಸಾಕಾಗಲ್ಲ ಎಂಬುದನ್ನು ನನ್ನ ಗಮನಕ್ಕೆ ತಂದಿದ್ದು ಈ ಹಿನ್ನೆಲೆ ಉಸ್ತುವಾರಿ ಸಚಿವರ ಜೊತೆಯೂ ಚರ್ಚಿಸಲಾಗುವುದು. ಸದ್ಯ ರೇಷ್ಮೆ ಸಚಿವ ವೆಂಕಟೇಶ್ 5 ಎಕರೆ ಜಾಗ ಆಸ್ಪತ್ರೆಗೆ ಮಂಜೂರು ಮಾಡಿಸಿಕೊಡುವ ಮೂಲಕ ಆಸ್ಪತ್ರೆ ನಿರ್ಮಾಣಕ್ಕೆ ಸಹಕರಿಸಿದ್ದಾರೆ, ಆರೋಗ್ಯ ಸಚಿವರು ಸ್ಪಂದಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮ್ಯಯ್ಯ, ಸಚಿವ ವೆಂಕಟೇಶ್, ದಿನೇಶ್ ಗುಂಡೂರಾವ್ ಅವರನ್ನು ಅಭಿನಂದಿಸುತ್ತೇನೆ. 48 ಕೋಟಿ ರು. ಅನುದಾನದಲ್ಲಿ ಡಿಪಿಆರ್ ತಯಾರಾಗಲಿದೆ, ಸರ್ಕಾರ ಈ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ನನಗಿದೆ ಎಂದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ