ಕಳಚೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ವರದಿ ನೀಡಲು ಡಿಸಿ ನಿರ್ದೇಶನ

KannadaprabhaNewsNetwork |  
Published : Jul 16, 2025, 12:45 AM IST
ಜಿಲ್ಲಾಧಿಕಾರಿ ಸಭೆ ನಡೆಸಿದರು  | Kannada Prabha

ಸಾರಾಂಶ

ಕಳಚೆಯಲ್ಲಿ ಈ ಹಿಂದೆ ಸಂಭವಿಸಿದ್ದ ಭೂ ಕುಸಿತದಿಂದ ಸಂತ್ರಸ್ತರಾದವರಿಗೆ ಪುರ್ನವಸತಿ ಕಲ್ಪಿಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಶೀಘ್ರದಲ್ಲಿ ವರದಿ ನೀಡುವಂತೆ ಶಿರಸಿ ಉಪ ವಿಭಾಗಾಧಿಕಾರಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.

ಕಾರವಾರ: ಕಳಚೆಯಲ್ಲಿ ಈ ಹಿಂದೆ ಸಂಭವಿಸಿದ್ದ ಭೂ ಕುಸಿತದಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಶೀಘ್ರದಲ್ಲಿ ವರದಿ ನೀಡುವಂತೆ ಶಿರಸಿ ಉಪ ವಿಭಾಗಾಧಿಕಾರಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳಚೆಯಲ್ಲಿ 2021ರಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಸಂತ್ರಸ್ತರಾದವರಿಗೆ ಸೂಕ್ತ ಪುರ್ನವಸತಿ ಕಲ್ಪಿಸುವ ಕುರಿತಂತೆ ತಹಸೀಲ್ದಾರ್ ಮೂಲಕ ಪರಿಶೀಲನೆ ನಡೆಸಿ ಸಂತ್ರಸ್ತರ ವಿವರಗಳನ್ನು ಶೀಘ್ರದಲ್ಲಿ ಸಲ್ಲಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಈ ಪ್ರದೇಶದಲ್ಲಿ ಭೂ ಕುಸಿತ ತಡೆಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಗ್ರಾಮೀಣಾಭಿವೃದ್ಧಿ ಇಲಾಖೆ, ಅರಣ್ಯ ಮತ್ತು ಕಂದಾಯ ಇಲಾಖೆಯ ಮೂಲಕ ವ್ಯಾಪಕವಾಗಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಿದರು.

ಕದ್ರಾ ಬಾಳೆಮನೆಯಲ್ಲಿ ರಸ್ತೆಯಲ್ಲಿ ಸಂಭವಿಸಿರುವ ಭೂ ಕುಸಿತದಿಂದ, ಕೆಪಿಸಿಗೆ ಇಂಧನ ಸಾಗಿಸಲು ತೊಂದರೆಯಾಗುತ್ತಿದೆ. ಇದರಿಂದ ಕೆಪಿಸಿಯ ಕಾರ್ಯ ಚಟುವಟಿಕೆಗೆ ತೊಂದರೆಯಾಗುತ್ತಿದೆ. ರಸ್ತೆ ಮೇಲೆ ಬಿದ್ದಿರುವ ಗುಡ್ಡ ತೆರವುಗೊಳಿಸುವಂತೆ ಕೋರಿದ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳ ಮನವಿ ಉತ್ತರಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಜಿಎಸ್ಐ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಲಹೆಗನುಗುಣವಾಗಿ, ತಾಂತ್ರಿಕ ತಂಡ ರಚಿಸಿಕೊಂಡು ಕೆಪಿಸಿ ವತಿಯಿಂದಲೇ ರಸ್ತೆಯ ಮೇಲೆ ಬಿದ್ದಿರುವ ಗುಡ್ಡ ತೆರವುಗೊಳಿಸುವಂತೆ ಹಾಗೂ ಯಾವುದೇ ಅನಾಹುತಗಳಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಕಾರವಾರ ನಗರಸಭೆ ವ್ಯಾಪ್ತಿಯಲ್ಲಿನ ಚರಂಡಿಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಮಳೆ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡುವಂತೆ ಹಾಗೂ ಈ ಮಾರ್ಗದಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗಿದ್ದಲ್ಲಿ ಕೂಡಲೇ ತೆರವುಗೊಳಿಸಬೇಕು. ನಗರ ವ್ಯಾಪ್ತಿಯಲ್ಲಿನ ಅಪಾಯಕಾರಿ ಮರಗಳು ಮತ್ತು ಮರದ ಕೊಂಬೆಗಳನ್ನು ತೆರವುಗೊಳಿಸುವಂತೆ ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ, ಯೋಗೇಶ್, ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಇದ್ದರು.

PREV

Latest Stories

ಏಕರೂಪ ಸಿನಿಮಾ ಟಿಕೆಟ್‌ ದರಕ್ಕೆ ಕರಡು- ಗರಿಷ್ಠ ಟಿಕೆಟ್‌ ದರ ₹200 ನಿಗದಿ
ಶಾಲೆಯಲ್ಲಿನ ಕಲುಷಿತ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥ
ರಾಷ್ಟ್ರೀಯ ಲೋಕ ಅದಾಲತ್: 58.67 ಲಕ್ಷ ಕೇಸ್ ಇತ್ಯರ್ಥ