ಧಾರವಾಡ:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರೈತರ ಹಾಗೂ ಸಾಮಾನ್ಯ ಜನರ ಕೂಗು ಕೇಳುತ್ತಿಲ್ಲ. ಹೀಗಾಗಿ ಚುನಾವಣೆಯ ಈ ಸಮಯದಲ್ಲಿ ಮತ ಕೇಳಲು ಬರುವ ರಾಜಕಾರಣಿಗಳಿಗೆ ಛೀಮಾರಿ ಸ್ವಾಗತ ಮಾಡಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ ಹೇಳಿದರು.ಇಲ್ಲಿಯ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಉತ್ತರ ಕರ್ನಾಟಕ ಜಿಲ್ಲೆಗಳ ರೈತ ಮುಖಂಡರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಹಾಗೂ ಸಾಲಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಆಗ್ರಹಿಸಿದ್ದಾರೆ. ದೆಹಲಿ ಗಡಿಯಲ್ಲಿ ರೈತರು ಸಹ ಪ್ರತಿಭಟಿಸುತ್ತಿದ್ದಾರೆ. ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುವಲ್ಲಿ ಉತ್ಸುಕವಾದ ಬಿಜೆಪಿ ಸರ್ಕಾರ ರೈತರನ್ನು ಅನಾಥರನ್ನಾಗಿಸಿದೆ. ಕೇಂದ್ರ ಸರ್ಕಾರ ರೈತರಿಗೆ ಎಂದಿಗೂ ಗೌರವ ನೀಡಿಲ್ಲ. ರೈತರ ಬೇಡಿಕೆ ಈಡೇರಿಸುವ ಪ್ರಯತ್ನ ಸಹ ಮಾಡಿಲ್ಲ ಎಂದು ಕಿಡಿಕಾರಿದರು.
ಇನ್ನು, ಕಾಂಗ್ರೆಸ್ ಸರ್ಕಾರವು ಅದೇ ನಡೆಯಲಿದ್ದರೂ ಚುನಾವಣಾ ಘೋಷಣೆಯಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ. ಆದ್ದರಿಂದ ಇನ್ನೊಂದು ವಾರ ಕಾಲ ಕಾಯುತ್ತೇವೆ. ಕೇಂದ್ರದ ಬಿಜೆಪಿ ಸರ್ಕಾರ ಸಹ ರೈತರ ಬೇಡಿಕೆಗಳ ಬಗ್ಗೆ ಘೋಷಣೆ ಮಾಡದೇ ಇದ್ದಲ್ಲಿ ರೈತರು ಚುನಾವಣೆಯಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ರಾಷ್ಟ್ರದ ಎಲ್ಲ ರೈತ ಸಂಘಟನೆಗಳು ಕೂಡಿ ತೀರ್ಮಾನಿಸುತ್ತೇವೆ ಎಂದರು.ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸದೇ ಯಾವುದೇ ಕಾರಣಕ್ಕೂ ರಾಜಕಾರಣಿಗಳು ಮತ ಕೇಳಲು ರೈತರ ಬಳಿ ಬರುವಂತಿಲ್ಲ. ಅವರಿಗೆ ಮತ ಕೇಳಲು ನೈತಿಕ ಹಕ್ಕಿಲ್ಲ. ರೈತರನ್ನು ಕಡೆಗಣಿಸಿದ ರಾಜಕಾರಣಿಗಳಿಗೆ ಪಾಠ ಕಲಿಸುವ ಸಮಯ ಬಂದಿದೆ. ರೈತರು, ಸಾಮಾನ್ಯ ಜನರು ಈಗಾಲಾದರೂ ಸ್ವಾಭಿಮಾನದ ಹೆಜ್ಜೆ ಇಡಬೇಕಿದೆ ಎಂದ ಅವರು, ಮಹಾದಾಯಿ ಸೇರಿದಂತೆ ರೈತರಿಗೆ ಅನುಕೂಲಕರ ಯಾವುದೇ ಯೋಜನೆ ಜಾರಿ ಮಾಡಲು ದಶಕಗಳೇ ಉರುಳಿ ಹೋಗಿದೆ. ಈ ಭಾಗದ ಪ್ರಭಾವಿ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ರೈತ ವರ್ಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಕುರಬೂರು ಶಾಂತಕುಮಾರ ಪ್ರಶ್ನಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರ ನಿರ್ವಹಣೆಗೆ ಸಂಪೂರ್ಣ ವಿಫಲವಾಗಿದೆ. ಗ್ರಾಮೀಣದಲ್ಲಿ ಕುಡಿಯುವ ನೀರು, ಮೇವಿಗೆ ಹಾಹಾಕಾರ ಶುರುವಾಗಿದೆ. ರಾಜ್ಯ ಸರ್ಕಾರ ಕೋಟಿ ಕೋಟಿ ವೆಚ್ಚದಲ್ಲಿ ಗ್ಯಾರಂಟಿ ಸಮಾವೇಶ ಮಾಡಿದ್ದು ತಪ್ಪು. ಅಧಿಕಾರಿಗಳು ಚುನಾವಣೆ ಹೆಸರಿನಲ್ಲಿ ತಮ್ಮ ಕಾರ್ಯ ಮರೆತಿದ್ದಾರೆ. ಲಕ್ಷ್ಮಿ ಹೆಬ್ಬಾಳಕರ, ಶಿವರಾಮ ಹೆಬ್ಬಾರ, ಮುರುಗೇಶ ನಿರಾಣಿ ಸೇರಿದಂತೆ ಹಲವು ರಾಜಕಾರಣಿಗಳು ರೈತರಿಗೆ ಕಬ್ಬು ಖರೀದಿಸಿ ಇನ್ನೂ ಬಾಕಿ ಹಣ ನೀಡಿಲ್ಲ. ಇವರಿಂದ ಜನರ ಉದ್ಧಾರ ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಚುನಾವಣೆಯಲ್ಲಿ ಇಂತಹ ರಾಜಕಾರಣಿಗಳಿಗೆ ಛೀಮಾರಿ ಹಾಕುವ ನಿರ್ಧಾರವನ್ನು ಜನರು ತೆಗೆದುಕೊಳ್ಳಬೇಕೆಂದರು.ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ವೀರನಗೌಡ ಪಾಟೀಲ, ಎಂ.ವಿ. ಗಾಡಿ, ಎನ್.ಎಚ್. ದೇವಕುಮಾರ, ಹತ್ತಳ್ಳಿ ದೇವರಾಜ, ಉಳುವಪ್ಪ ಬಳಗೇರಾ, ಪರಶುರಾಮ ಎತ್ತಿನಗುಡ್ಡ, ನಿಜಗುಣ ಕೆಲಗೇರಿ, ಮಹೇಶ ಬೆಳಗಾವಕರ, ವಾಸು ದಾಖಪ್ಪನವರ, ಗುರುಸಿದ್ದಪ್ಪ ಕೊಟಗಿ ಮತ್ತಿತರರು ಇದ್ದರು.