ವಿಜಯನಗರದಲ್ಲಿ ಗಣರಾಜ್ಯೋತ್ಸವದ ಸಂಭ್ರಮ

KannadaprabhaNewsNetwork | Published : Jan 27, 2024 1:22 AM

ಸಾರಾಂಶ

ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಅಶ್ವದಳ, ವಿವಿಧ ತುಕಡಿಗಳು ಹಾಗೂ ಶಾಲಾ- ಕಾಲೇಜುಗಳ ವಿವಿಧ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದ್ದವು.

ಹೊಸಪೇಟೆ: ಗಣರಾಜ್ಯೋತ್ಸವ ನಿಮಿತ್ತ ಜಿಲ್ಲಾಡಳಿತದಿಂದ ನಗರ ಜಿಲ್ಲಾ ಕ್ರೀಡಾಂಗಣದಲ್ಲಿ ೪೦೫ ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್‌ ಖಾನ್ ಅವರು ಶುಕ್ರವಾರ ಧ್ವಜಾರೋಹಣ ನೆರವೇರಿಸಿದರು.

ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಪೊಲೀಸರಿಂದ ಧ್ವಜವಂದನೆ ಸ್ವೀಕರಿಸಿದರು. ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಅಶ್ವದಳ, ವಿವಿಧ ತುಕಡಿಗಳು ಹಾಗೂ ಶಾಲಾ- ಕಾಲೇಜುಗಳ ವಿವಿಧ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದ್ದವು.

ನಂತರ ಮಾತನಾಡಿದ ಅವರು, ದೇಶದ ಇತಿಹಾಸದಲ್ಲೇ ಜ. ೨೬ ಅತ್ಯಂತ ಮಹತ್ವದ ದಿನವಾಗಿದೆ. ದೇಶಕ್ಕೆ ಪ್ರಜಾಪ್ರಭುತ್ವದ ಆಡಳಿತ ಪದ್ಧತಿಯನ್ನು ಅಳವಡಿಸಿಕೊಂಡ ಈ ಸಂಭ್ರಮದ ಐತಿಹಾಸಿಕ ದಿನದಂದು ಗಣತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಪ್ರಜಾರಾಜ್ಯೋತ್ಸವವನ್ನು ಎತ್ತಿಹಿಡಿದ ಶುಭ ದಿನವಾಗಿದೆ ಎಂದರು.

ಸಂವಿಧಾನದ ಮೂಲ ಆಶಯ ಸಾಮಾಜಿಕ ನ್ಯಾಯ. ನಾವೆಲ್ಲರೂ ಸಂವಿಧಾನದ ಆಶಯ ಈಡೇರಿಸಲು ಪ್ರಾಮಾಣಿಕವಾಗಿ ನಡೆಯುವ ಮೂಲಕ ಅಂಬೇಡ್ಕರ್ ಅವರ ಕನಸು ನನಸು ಮಾಡಬೇಕಾಗಿದೆ. ಸಂವಿಧಾನ ಜಾಗೃತಿ ಮಾಡಬೇಕಿದೆ. ಸರ್ಕಾರದ ಯೋಜನೆಗಳ ಮೂಲಕ ಪ್ರಗತಿಯತ್ತ ಸಾಗಲು ತಾವೆಲ್ಲರೂ ನಮ್ಮೊಂದಿಗೆ ಕೈಜೋಡಿಸಿ. ಈ ಜಿಲ್ಲೆಯನ್ನು ಅಭಿವೃದ್ದಿಯತ್ತ ಕೊಂಡ್ಯೊಯಲು ಸಂಕಲ್ಪ ಮಾಡೋಣ ಎಂದರು.

ಸರ್ಕಾರ ಬಡವರ ಪರ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಐದು ಗ್ಯಾರಂಟಿಗಳನ್ನು ಈಗಾಗಲೇ ಈಡೇರಿಸಿದೆ. ಈಗ ಆರನೇ ಗ್ಯಾರಂಟಿಯಾಗಿ ಸೂರಿಲ್ಲದವರಿಗೆ ಮನೆಗಳನ್ನು ನಿರ್ಮಿಸಿ ಕೊಡಲು ವಸತಿ ಇಲಾಖೆಯಡಿ ಸ್ಲಂ ಬೋರ್ಡ್‌ ಹಾಗೂ ರಾಜೀವ್‌ ಗಾಂಧಿ ನಿಗಮದಡಿ ರಾಜ್ಯದಲ್ಲಿ 2,38 ಲಕ್ಷ ಮನೆಗಳ ನಿರ್ಮಾಣಕ್ಕೆ ಸರ್ಕಾರ ₹8400 ಕೋಟಿ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ₹500 ಕೋಟಿ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಬಡವರಿಗೆ ಸೂರು ಒದಗಿಸಲಾಗುವುದು. ಈ ಯೋಜನೆಯಡಿ ವಿಜಯನಗರ ಜಿಲ್ಲೆಯಲ್ಲೂ ಮನೆಗಳನ್ನು ನಿರ್ಮಿಸಲಾಗುವುದು. ಬಡವರ ಕಲ್ಯಾಣಕ್ಕಾಗಿ ಸರ್ಕಾರ ಬದ್ಧವಾಗಿದೆ ಎಂದರು.

ಬಳಿಕ ವಿವಿಧ ಶಾಲಾ, ಕಾಲೇಜುಗಳ ತಂಡಗಳಿಂದ ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ನಡೆಯಿತು. ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಎಸ್ಪಿ ಬಿ.ಎಲ್. ದಿವಾಕರ, ಜಿಪಂ ಸಿಇಒ ಸದಾಶಿವ ಪಿ. ಪ್ರಭು, ಎಡಿಸಿ ಅನುರಾಧ, ಪದ್ಮಶ್ರೀ ಮಂಜಮ್ಮ ಜೋಗತಿ, ತಹಸೀಲ್ದಾರ್ ವಿಶ್ವಜಿತ್ ಮೆಹತಾ ಇತರರಿದ್ದರು.

Share this article