ಕನ್ನಡಪ್ರಭ ವಾರ್ತೆ ಸವದತ್ತಿ ಡಾ.ಬಿ.ಆರ್.ಅಂಬೇಡ್ಕರವರು ಬರೆದಂತ ಸಂವಿಧಾನವು ಜಗತ್ತಿಗೆ ಮಾದರಿಯಾಗಿದ್ದು, ಭಾರತೀಯರಾದ ನಾವು ನಮ್ಮ ಸಂವಿಧಾನದ ಬಗ್ಗೆ ಹೆಮ್ಮೆ ಪಡಬೇಕಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಎಸ್.ಕೆ.ಹೈಸ್ಕೂಲ ಮೈದಾನದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ಅಭಿವೃದ್ದಿಗೋಸ್ಕರ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿರುವ ₹ 40 ಕೋಟಿಗಳಲ್ಲಿ ಕ್ಷೇತ್ರದಲ್ಲಿ ಬರುವಂತ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಮಲಪ್ರಭಾನದಿಯ ನಾಲ್ಕು ಏತ ನೀರಾವರಿಗೆ ಸಂಬಂಧಿಸಿದ ಪಂಪಸೆಟ್‌ಗಳನ್ನು ಹಾಗೂ ಪೈಪ್‌ಲೈನಗಳನ್ನು ₹ 77 ಕೋಟಿಗಳಲ್ಲಿ ಪುನುರುತ್ಥಾನಗೊಳಿಸಿ ಕೂಡಲೆ ರೈತರ ಜಮೀನುಗಳಿಗೆ ನೀರೊದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.ಪಟ್ಟಣದಲ್ಲಿ ಒಳ ಚರಂಡಿ ಯೋಜನೆ ನೆನೆಗುದಿಗೆ ಬಿದ್ದಿರುವದರಿಂದ ಈಗ ₹123 ಕೋಟಿಗಳ ಅನುದಾನದಲ್ಲಿ ಈ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು. ಶ್ರೀ ಕ್ಷೇತ್ರದ ಯಲ್ಲಮ್ಮನಗುಡ್ಡವನ್ನು ₹150 ಕೋಟಿಗಳಲ್ಲಿ ಉನ್ನತ ಅಭಿವೃದ್ದಿಗೊಳಿಸಲು ವಿಶೇಷ ಯೋಜನೆ ರೂಪಿಸಲಾಗಿದೆ ಎಂದರು.
ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಸಂದೇಶವಾಚನ ಮಾಡಿದರು.ವೇದಿಕೆಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಿನಿವಿಧಾನಸೌಧದ ಮುಂದೆ ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಧ್ವಜಾರೋಹಣ ನೆವೇರಿಸಿದರು.ಈ ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಉಪಾಧ್ಯಕ್ಷ ಮಾರುತಿ ಬಸಳಿಗುಂದಿ, ತಾಪಂ ಇಓ ಯಶವಂತಕುಮಾರ, ಗ್ರೇಡ್-2 ತಹಸೀಲ್ದಾರ ಎಮ್.ವಿ.ಗುಂಡಪ್ಪಗೋಳ, ಮುಖ್ಯಾಧಿಕಾರಿ ಸಂಗಬಸಯ್ಯ ಗದಗಿಮಠ, ಶಿರಸ್ತೆದಾರ ಶಶಿರಾಜ ವನಕಿ, ಪಿಐ ಧರ್ಮಾಕರ ಧರ್ಮಟ್ಟಿ, ಟಿಎಚ್‌ಓ ಡಾ.ಶ್ರೀಪಾದ ಸಬನೀಸ, ಡಾ.ಅನೀಲ ಮರಲಿಂಗನವರ, ಬಿಇಓ ಮೋಹನ ದಂಡಿನ, ನೌಕರರ ಸಂಘದ ಅಧ್ಯಕ್ಷ ಆನಂದ ಮೂಗಬಸವ, ಕೆ.ಐ.ಕದ್ರಾಪುರ, ಕಲ್ಲಪ್ಪ ಪೂಜೇರ, ಮೈತ್ರಾದೇವಿ ವಸ್ತ್ರದ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಸ್ವಾಗತಿಸಿದರು. ಶಿವಾನಂದ ತಾರಿಹಾಳ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಬ್ಯಾಳಿ ವಂದಿಸಿದರು.