ಮಂಗಳೂರು : ಮಂಗಳೂರು ಜಂಕ್ಷನ್‌ನಿಂದ ಬೆಂಗಳೂರು ಹಾಗೂ ಮುಂಬೈ ಕಡೆಗೆ ಹೋಗುವ ರೈಲುಗಳನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸಬೇಕು. ಯಶವಂತಪುರ-ಮಂಗಳೂರು ಜಂಕ್ಷನ್ ಗೊಮಟೇಶ್ವರ ಎಕ್ಸ್‌ಪ್ರೆಸ್‌ನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸಬೇಕು. ಚೆನ್ನೈ ಎಗ್ಮೋರ್ - ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಜಂಕ್ಷನ್‌ಗೆ ಮತ್ತು ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್‌ನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವಂತೆ ರೈಲ್ವೆ ಉನ್ನತಾಧಿಕಾರಿಗಳಿಗೆ ರೈಲ್ವೆ ಸಂಘಟನೆಗಳು ಮನವಿ ಸಲ್ಲಿಸಿವೆ.
ರೈಲ್ವೆ ಫಾಲ್ಘಾಟ್ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಮಧುಕರ್ ಅವರು ಗುರುವಾರದಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈಲ್ವೆ ಸಂಘಟನೆಗಳ ಮನವಿ ಸ್ವೀಕರಿಸಿದರು.
ಈ ವೇಳೆ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯ ಹನುಮಂತ ಕಾಮತ್ ಹಾಗೂ ರೈಲ್ವೆ ಹೋರಾಟಗಾರ ಜಿ.ಕೆ. ಭಟ್ ಅವರು ಭೇಟಿಯಾಗಿ ಹಲವು ಬೇಡಿಕೆಯನ್ನು ಒಳನ್ನೊಳಗೊಂಡ ಮನವಿಯನ್ನು ಅವರಿಗೆ ಸಲ್ಲಿಸಿದರು. ಪಾಂಡೇಶ್ವರದಲ್ಲಿ ಓವರ್ ಬ್ರಿಡ್ಜ್ ನಿರ್ಮಿಸಬೇಕು. ಕರ್ನಾಟಕದತ್ತ ಸಂಚರಿಸುವ ರೈಲುಗಳನ್ನು ಮಂಗಳೂರು ಜಂಕ್ಷನ್‌ನಲ್ಲಿ ನಿರ್ಬಂಧಿಸಬಾರದು. ಕೇರಳ ಕಡೆಯಿಂದ ಬರುವ ರೈಲುಗಳ ಅಂತಿಮ ನಿಲ್ದಾಣವನ್ನು ಮಂಗಳೂರು ಸೆಂಟ್ರಲ್‌ನಿಂದ ಜಂಕ್ಷನ್‌ಗೆ ಸ್ಥಳಾಂತರಿಸಬೇಕು. ಮಂಗಳೂರು ಸೆಂಟ್ರಲ್ - ಕತ್ರಾ ನವಯುಗ ಎಕ್ಸ್‌ಪ್ರೆಸ್ ರೈಲನ್ನು ಹಾಸನ-ಅರಸೀಕೆರೆ-ಮಿರಜ್-ಪುಣೆ-ದೆಹಲಿ ಮಾರ್ಗವಾಗಿ ಪುನರಾರಂಭಿಸಬೇಕು ಮತ್ತಿತರ ಬೇಡಿಕೆಗಳನ್ನು ಸಲ್ಲಿಸಲಾಯಿತು.
ಮಂಗಳೂರು-ಚೆನ್ನೈ ವಿಶೇಷ ರೈಲು ಓಡಿಸಿ: ಮಂಗಳೂರು ಸೆಂಟ್ರಲ್ - ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲಿಗೆ ಮೆಮು ರೇಕ್ ಒದಗಿಸಬೇಕು. ಮಂಗಳೂರಿನಿಂದ ಚೆನ್ನೈನತ್ತ ಹಾಸನ-ಬೆಂಗಳೂರು ಮಾರ್ಗವಾಗಿ ಗಣೇಶೋತ್ಸವ, ದಸರಾ ಮತ್ತು ಕ್ರಿಸ್ಮಸ್ ಹಬ್ಬದ ಸಂದರ್ಭಗಳಲ್ಲಿ ವಿಶೇಷ ರೈಲು ಸಂಚಾರ ಏರ್ಪಡಿಸಬೇಕು. ಮಂಗಳೂರು ಸೆಂಟ್ರಲ್‌ನಲ್ಲಿನ ಬೇ ನಿಲ್ದಾಣದ ಉತ್ತರ ಭಾಗದ ಫ್ಲ್ಯಾಟ್‌ಫಾರ್ಮ್ ಉದ್ದವನ್ನು 14 ಕೋಚ್‌ಗಳ ರೈಲುಗಳಿಗೆ ಅನುಕೂಲವಾಗುವಂತೆ ವಿಸ್ತರಿಸಬೇಕು.
ಮಂಗಳೂರು ಜಂಕ್ಷನ್ - ಸಿಎಸ್‌ಟಿಎಂ ಮುಂಬೈ ಎಕ್ಸ್‌ಪ್ರೆಸ್(ನಂ. 12133/34) ರೈಲನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸಬೇಕು. ಮಂಗಳೂರು ಸೆಂಟ್ರಲ್ ಫ್ಲ್ಯಾಟ್‌ಫಾರ್ಮ್ ಸಂಖ್ಯೆ 4/5 (ಪೂರ್ವಭಾಗ)ದಲ್ಲಿ ಇನ್ನೊಂದು ಪ್ರಿಪೇಯ್ಡ್ ಆಟೋ ಕೌಂಟರ್ ಒದಗಿಸಬೇಕು. ಮುಂಬೈಯಿಂದ ಬರುವಾಗ ಮತ್ಸ್ಯಗಂಧ ಎಕ್ಸ್‌ಪ್ರೆಸ್ (ನಂ. 12619/20)ಯನ್ನು ಮಂಗಳೂರು ಜಂಕ್ಷನ್‌ನಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡಬೇಕು. ಆಗ ಧರ್ಮಸ್ಥಳ, ಸುಬ್ರಹ್ಮಣ್ಯ, ಬಂಟ್ವಾಳ ಕಡೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈಗಾಗಲೇ ರೈಲ್ವೆ ಬೋರ್ಡ್ ಅನುಮತಿಸಿರುವ ಮಂಗಳೂರು- ಭಾವನಗರ ಎಕ್ಸ್‌ಪ್ರೆಸ್, ಮಂಗಳೂರು- ಪಾಲಕ್ಕಾಡ್- ಮಧುರೈ-ರಾಮೇಶ್ವರಂ ಎಕ್ಸ್‌ಪ್ರೆಸ್ ಹಾಗೂ ಮಂಗಳೂರು-ಬಾಂದ್ರಾ ಟರ್ಮಿನಸ್ ಮಾರ್ಗದಲ್ಲಿ ಹೊಸ ರೈಲುಗಳನ್ನು ಆರಂಭಿಸಬೇಕು ಎಂದು ಮನವಿ ಸಲ್ಲಿಸಲಾಯಿತು.