ಜಾತಿ ಗಣತಿ ಸಮೀಕ್ಷೆಗೆ ಬಂದಾಗ ಛಲವಾದಿ ಎಂದು ನಮೂದಿಸಲು ಮನವಿ

KannadaprabhaNewsNetwork |  
Published : May 18, 2025, 02:33 AM ISTUpdated : May 18, 2025, 12:20 PM IST
ಫೋಟೋ 17ಪಿವಿಡಿ5ಪಾವಗಡ,ತಾಲೂಕು ಛಲವಾದಿ ಸಮುದಾಯದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಭಾನುಪ್ರಕಾಶ್‌ ಹಾಗೂ ಕೆ.ಟಿ.ನಾಗರಾಜ್‌ ಇತರೆ ಮುಖಂಡರು ಮಾತನಾಡಿದರು. | Kannada Prabha

ಸಾರಾಂಶ

ಸಮಾಜ ಸೇವಕ ಹಾಗೂ ತಾಲೂಕು ಛಲವಾದಿ ಸಮದಾಯದ ಹಿರಿಯ ಮುಖಂಡರಾದ ಕೆ.ರಾಮಪುರದ ನರಸಿಂಹಮೂರ್ತಿ ಜಾತಿ ಗಣತಿಯಿಂದ ಆಗುವ ಪ್ರಯೋಜನಗಳ ಕುರಿತು ವಿವರಿಸಿ ಛಲವಾದಿ ಎಂದು ನಮೂದಿಸುವಂತೆ ಕರೆ ನೀಡಿದರು.

 ಪಾವಗಡ : ಛಲವಾದಿ ಸಮುದಾಯದ ಪ್ರತಿಯೊಬ್ಬರೂ ಜಾತಿ ಗಣತಿಯಲ್ಲಿ ಪಾಲ್ಗೊಂಡು ಛಲವಾದಿ ಅಥವಾ ಹೊಲಯ ಎಂದು ಜಾತಿ ಹೆಸರು ನಮೂದಿಸುವಂತೆ ಛಲವಾದಿ ಮಹಾ ಸಭಾ ಜಿಲ್ಲಾಧ್ಯಕ್ಷ ಭಾನುಪ್ರಕಾಶ್ ಕರೆ ನೀಡಿದರು.

ರಾಜ್ಯ ಸರ್ಕಾರದಿಂದ ಜಾತಿ ಗಣತಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಛಲವಾದಿ ಮಹಾಸಭಾದ ವತಿಯಿಂದ ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸರ್ಕಾರ ಸೌಲಭ್ಯ ಸರಿಯಾಗಿ ಹಂಚಿಕೆ ವಿಚಾರವಾಗಿ ರಾಜ್ಯ ಸರ್ಕಾರ ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ರಾಜ್ಯಾದ್ಯಂತ ಜಾತಿವಾರು ಗಣತಿ ಸಮೀಕ್ಷೆ ಕಾರ್ಯ ಹಮ್ಮಿಕೊಂಡಿದೆ. ಸರಿಯಾದ ಅಂಕಿ- ಅಂಶ ಸಂಗ್ರಹಿಸುವ ಸಲುವಾಗಿ ಮೇ 25ರವರೆಗೂ ಜಾತಿ ಗಣತಿ ಸಮೀಕ್ಷೆ ಕಾರ್ಯ ವಿಸ್ತರಿಸಿದೆ. ಛಲವಾದಿ ಕುಲಬಾಂಧವರ ಮನೆಗಳ ಬಳಿ ಗಣತಿದಾರರು ಬಂದಾಗ ತಮ್ಮ ಜಾತಿ ಹೆಸರು ಛಲವಾದಿ ಎಂದು ಸ್ಪಷ್ಟವಾಗಿ ನಮೂದಿಸಿ, ಒಂದು ವೇಳೆ ನೋಂದಾಯಿಸದಿದ್ದರೆ ಭವಿಷ್ಯದ ಪೀಳಿಗೆಗೆ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗುವ ಸಂಭವವಿರುತ್ತದೆ. ಹೀಗಾಗಿ ಛಲವಾದಿ ಅಥವಾ ಹೊಲಯ ಎಂದು ಗಣತಿ ದಾರರಿಗೆ ಮಾಹಿತಿ ನೀಡಿ ಜಾತಿ ಕಲಂ ಭರ್ತಿ ಮಾಡಿಸುವಂತೆ ಸಲಹೆ ನೀಡಿದರು.

ಗಣತಿದಾರರು ಸಮೀಕ್ಷೆ ತೆಗೆದುಕೊಂಡ ಬಳಿಕ ಸಮೀಕ್ಷೆಯ ಮಾಹಿತಿಯನ್ನು ಒಟಿಪಿ ಮೂಲಕ ಮಾಹಿತಿ ಜನರ ಮೊಬೈಲ್ ಗೆ ಬರುವಂತೆ ವ್ಯವಸ್ಥೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ರಾಜ್ಯ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಕೆ.ಟಿ.ನಾಗರಾಜ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿನ ಛಲವಾದಿ ಸಮುದಾಯದ ಯುವಕರು ಜಾಗೃತಿ ಮೂಡಿಸಬೇಕು. ಸಮೀಕ್ಷೆಗೆ ಮನೆಗಳ ಬಳಿ ಅಧಿಕಾರಿಗಳು ಬಂದ ವೇಳೆ ಸ್ಪಷ್ಟವಾಗಿ ಛಲವಾದಿ ಜಾತಿ ಎಂದು ನೋಂದಣಿ ಮಾಡಿಸಲು ಮುಂದಾಗುವಂತೆ ಸಮುದಾಯದವರಲ್ಲಿ ಮನವಿ ಮಾಡಿದರು.

ರಾಜ್ಯ ಛಲವಾದಿ ಮಹಾಸಭಾ ಸದಸ್ಯರಾದ ಡಿ.ರಾಜೇಂದ್ರ, ಜಾತಿ ಗಣತಿ ಸಮೀಕ್ಷೆಯ ಪ್ರಯೋಜನಗಳ ಕುರಿತು ಭವಿಷ್ಯದ ಹಿತದೃಷ್ಟಿಯಿಂದ ಜಾತಿಯ ಹೆಸರು ಸರಿಯಾಗಿ ನಮೂದಿಸುವಂತೆ ಕರೆ ನೀಡಿದರು.

ಸಮಾಜ ಸೇವಕ ಹಾಗೂ ತಾಲೂಕು ಛಲವಾದಿ ಸಮದಾಯದ ಹಿರಿಯ ಮುಖಂಡರಾದ ಕೆ.ರಾಮಪುರದ ನರಸಿಂಹಮೂರ್ತಿ ಜಾತಿ ಗಣತಿಯಿಂದ ಆಗುವ ಪ್ರಯೋಜನಗಳ ಕುರಿತು ವಿವರಿಸಿ ಛಲವಾದಿ ಎಂದು ನಮೂದಿಸುವಂತೆ ಕರೆ ನೀಡಿದರು.

ಛಲವಾದಿ ಮಹಾ ಸಭಾದ ಜಿಲ್ಲಾ ಸದಸ್ಯರಾದ ಕೃಷ್ಣಪ್ಪ ಹೆಗ್ಗೆರೆ, ಹಿರಿಯ ಮುಖಂಡರಾದ ಸಿದ್ದಲಿಂಗಪ್ಪ ಹಾಗೂ ಸ್ಥಳೀಯ ಮುಖಂಡರಾದ ಕೆ.ರಾಮಪುರ ಆದಿನಾರಾಯಣ, ಚಿರಂಜೀವಿ, ಚಿಕ್ಕಹಳ್ಳಿ ರಮೇಶ್, ಕೃಷ್ಣಪ್ಪ, ಸಿದ್ದಲಿಂಗಪ್ಪ ಕೆ.ರಾಮಪುರ, ವೆಂಕಟಾಪುರ ಶ್ರೀನಿವಾಸ್‌, ಗ್ರಾಪಂ ಮಾಜಿ ಅಧ್ಯಕ್ಷ ಎನ್‌.ದೇವೇಂದ್ರಪ್ಪ, ಈಶ್ವರಪ್ಪ, ಸೂಲನಾಯಕನಹಳ್ಳಿ ನಾಗರಾಜ್‌, ಗುಮ್ಮಘಟ್ಟ ನರಸಿಂಹಪ್ಪ ಹಾಗೂ ಇತರೆ ಅನೇಕ ಮಂದಿ ಗಣ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

PREV
Read more Articles on

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ