ಹೊರಗುತ್ತಿಗೆ ನೇಮಕಾತಿ ಗೊಂದಲ ಸರಿಪಡಿಸಲು ಆಗ್ರಹ

KannadaprabhaNewsNetwork |  
Published : Jul 06, 2024, 12:51 AM IST
ಹೊರಗುತ್ತಿಗೆ ನೇಮಕಾತಿ ಗೊಂದಲವನ್ನು ಸರಿಪಡಿಸಲು ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಇದುವರೆಗೆ ನಡೆದಿರುವ ನೇಮಕಾತಿ ಪ್ರಕ್ರಿಯೆ ಅವಲೋಕನ ಮಾಡಿದರೆ ಜಾತಿವಾದಿ ಅಧಿಕಾರಿಗಳ ಮೀಸಲಾತಿ ವಿರೋಧಿ ದುರಾಡಳಿತಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ

ಗದಗ: ಹೊರಗುತ್ತಿಗೆ ನೇಮಕಾತಿಯಲ್ಲಿರುವ ಗೊಂದಲ ಸರಿಪಡಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ನಗರದ ಜಿಲ್ಲಾಡಳಿತದ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ದಸಂಸ ಜಿಲ್ಲಾ‌ ಸಂಚಾಲಕ ವೆಂಕಟೇಶಯ್ಯ ಮಾತನಾಡಿ, ಸರ್ಕಾರವು ಹೊರಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ನಿಯಮಗಳನ್ನು ಅನ್ವಯಿಸಿ ನೇಮಕ ಪ್ರಕ್ರಿಯೆ ನಡೆಸಲು ಆದೇಶ ನೀಡಿರುವುದನ್ನು ಸ್ವಾಗತಿಸುತ್ತೇವೆ. ಹಲವಾರು ವರ್ಷಗಳಿಂದ ಉದ್ಯೋಗ ನೇಮಕಾತಿ ಪ್ರಕ್ರಿಯೆಗಳೇ ನಡೆಯದೆ ಅಹಿಂದ ಸಮುದಾಯದ ಲಕ್ಷಾಂತರ ನಿರುದ್ಯೋಗಿ ಯುವ ಸಮೂಹವು ಅಕ್ಷರಶಃ ಬೀದಿಗೆ ಬಿದ್ದಿತ್ತು. ಇಂತಹ ನಿರಾಶದಾಯಕ ಹೊತ್ತಿನಲ್ಲಿ ಸರ್ಕಾರದ ಈ ಆದೇಶವು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪ್ರಮುಖ ಹೆಜ್ಜೆ ಆಗಲಿದೆ. ಆದರೆ, ಸುತ್ತೋಲೆಯ 1ನೇ ಮತ್ತು 6ನೇ ಷರತ್ತುಗಳು ಈ ಆದೇಶದ ಸದುದ್ದೇಶದ ಆಶಯಗಳಿಗೇ ವಿರುದ್ಧವಾಗಿವೆ. 1ನೇ ಷರತ್ತಿನಲ್ಲಿ ಹೊರಗುತ್ತಿಗೆ ಮೀಸಲಾತಿ ನೀತಿಯು 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ ಎಂದಿದೆ. ಇದು ಮೀಸಲಾತಿ ವಿರೋಧಿಗಳಿಗೆ ಅನುಕೂಲಕರವಾಗಿದ್ದು ಅದನ್ನು ರದ್ದುಪಡಿಸಿ ಎಷ್ಟೇ ಅವಧಿಯ ನೇಮಕಾತಿ ಮಾಡಿಕೊಂಡರೂ ಮೀಸಲಾತಿ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಆದೇಶಿಸಬೇಕು ಎಂದರು.

6ನೇ ಷರತ್ತಿನಲ್ಲಿ ಯಾವುದೇ ಇಲಾಖೆಯಲ್ಲಿ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿ ಜಾರಿಗೊಳಿಸತಕ್ಕದ್ದು ಎಂದಿರುವುದು ಅವೈಜ್ಞಾನಿಕ ಮತ್ತು ದುರುದ್ದೇಶಪೂರಿತವಾಗಿದೆ. ಮೀಸಲಾತಿ ವಂಚಿಸಲು ಸದಾ ಸಿದ್ದ ಇರುವವರಿಗೆ ಈ ನಿಬಂಧನೆ ಸಹಕಾರಿ ಆಗಲಿದೆ. 20ಕ್ಕೂ ಹೆಚ್ಚಿನ ಸಂಖ್ಯೆಯ ನೇಮಕಾತಿಗಳಿದ್ದಾಗ ಮಾತ್ರ ಮೀಸಲಾತಿ ನೀತಿ ಅನ್ವಯಿಸುತ್ತದೆ ಎಂದು ಸರ್ಕಾರವೇ ನಿರ್ಬಂಧ ಒಡ್ಡಿದರೆ ಎಲ್ಲ ನೇಮಕಾತಿ ಉದ್ಯೋಗಗಳನ್ನು 20ರೊಳಗೆ ನಿಗದಿ ಮಾಡುತ್ತಾ ಹೋಗುವ ಮೀಸಲಾತಿ ವಂಚಕರ ಚಾಳಿಗೆ ಇದು ರತ್ನಗಂಬಳಿ ಹಾಸಿ ರಹದಾರಿ ಕಲ್ಪಿಸಿ ಕೊಟ್ಟಂತಾಗುತ್ತದೆ.

ಇದುವರೆಗೆ ನಡೆದಿರುವ ನೇಮಕಾತಿ ಪ್ರಕ್ರಿಯೆ ಅವಲೋಕನ ಮಾಡಿದರೆ ಜಾತಿವಾದಿ ಅಧಿಕಾರಿಗಳ ಮೀಸಲಾತಿ ವಿರೋಧಿ ದುರಾಡಳಿತಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಸಮಾಜದಲ್ಲಿ ಮೀಸಲಾತಿ ಬಗ್ಗೆ ಅಸಹನೆ ತುಂಬಿ ತುಳುಕುತ್ತಿರುವ ಹೊತ್ತಿನಲ್ಲಿ ಇಂತಹ ಷರತ್ತು ಬದ್ಧ ಆದೇಶವು ನೇಮಕಾತಿ ಮಾಡುವ ವೇಳೆ ಪಕ್ಷಪಾತ ಮಾಡುವ ಜಾತಿವಾದಿ ಅಧಿಕಾರಿಗಳಿಗೆ ಕಾನೂನು ಬದ್ಧ ಪ್ರೋತ್ಸಾಹ ನೀಡಿದಂತಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗಾಗಿ ಸದರಿ 1 ಮತ್ತು 6ನೇ ಷರತ್ತನ್ನು ರದ್ದು ಪಡಿಸಲು ಸಾಮಾಜಿಕ ನ್ಯಾಯಕ್ಕೆ ಬದ್ಧತೆ ಹೊಂದಿರುವ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹುದ್ದೆಗಳ ಸಂಖ್ಯೆ ಎಷ್ಟೇ ಇರಲಿ ಮತ್ತು ಎಷ್ಟೇ ಅವಧಿಯದ್ದಾಗಿರಲಿ ಅಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ರೋಸ್ಟರ್ ನಿಯಮಗಳ ಅನುಸಾರವಾಗಿ ನೇಮಕಾತಿ ಪ್ರಕ್ರಿಯೆಗಳು ಕಡ್ಡಾಯವಾಗಿ ಇರಲೇಬೇಕು ಎಂದು ಸರ್ಕಾರ ಈ ಆದೇಶವನ್ನು ಮಾರ್ಪಾಡು ಮಾಡಿ ಮರು ಸುತ್ತೋಲೆ ಹೊರಡಿಸಲು ಜರೂರು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಒಂದು ವೇಳೆ ಸರ್ಕಾರ ಈ ಸಂಬಂಧವಾಗಿ ಯಾವುದೇ ತುರ್ತು ಕ್ರಮ ಕೈಗೊಳ್ಳದೇ ಇದ್ದಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ದಲಿತ ನಾಯಕರಾದ ಶರೀಫ್ ಬಿಳೆಯಲಿ, ಎಚ್.ಎಸ್. ಜೋಗಣ್ಣವರ, ಮೌನೇಶ ಹಾದಿಮನಿ, ಯಲ್ಲಪ್ಪ ರಾಮಗಿರಿ, ವಾಸು ಹುಣಶಿಮರದ, ಪರಶುರಾಮ‌, ಪರಮೇಶ ಕಾಳೆ, ಹೊನ್ನಪ್ಪ ಸಾಕಿ, ನಾಗರಾಜ ಗೋಕಾವಿ, ಬಾಲರಾಜ ಅರಬರ, ಭಜಂತ್ರಿ, ಆನಂದ ಶಿಂಗಾಡಿ, ಮುತ್ತು ಬಿಳೆಯಲಿ, ಪರಶು ಕಾಳೆ, ಅನಿಲ್‌ ಕಾಳೆ, ಬಸು ಬಿಳೆಯಲಿ, ಫಕಿರೇಶ ರಾಮಗಿರಿ, ಮುತ್ತಣ್ಣ ಭಜಂತ್ರಿ, ಕೆಂಚಪ್ಪ ಮ್ಯಾಗೇರಿ, ಉಮರ್ ನಾಗಾವಿ ಹಾಗೂ ಮಾರುತಿ ಭಜಂತ್ರಿ ಇದ್ದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ