ಕನ್ನಡಪ್ರಭ ವಾರ್ತೆ ಹಾವೇರಿ
ಹಾವೇರಿ ಬಸ್ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪ ಹೆಸರು ನಾಮಕರಣ ಮಾಡಲು ಹಾಗೂ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ವತಿಯಿಂದ ಭಾನುವಾರ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.ಎಸ್‌ಎಫ್‌ಐ ಹೋರಾಟದ ಪ್ರತಿಫಲವಾಗಿ ಕಾನೂನು ಮಹಾವಿದ್ಯಾಲಯ ಮಂಜೂರಾಗಿದ್ದು ಶಂಕುಸ್ಥಾಪನೆ ಮಾಡುತ್ತಿರುವುದು ಸಂತೋಷಕರ. ಪ್ರಸಕ್ತ ವರ್ಷದಿಂದಲೇ 3 ಮತ್ತು 5ನೇ ವರ್ಷದ ಕೋರ್ಸ್‌ನ ತರಗತಿಗಳನ್ನು ಪ್ರಾರಂಭಿಸಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ಹಾವೇರಿಯ ಬಸ್ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪ ಹಾಗೂ ವೀರಮ್ಮ ದಂಪತಿಗಳ ಹೆಸರಿನಲ್ಲಿ ನಾಮಕರಣ ಮಾಡಬೇಕು. ಸಂಗೂರು ಕರಿಯಪ್ಪ ಹಾಗೂ ವೀರಮ್ಮ ಅವರ ಜೀವನ ಗಾಥೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ನೈಜ ಚರಿತ್ರೆ ತಿಳಿಸಬೇಕು. ಜನ್ಮ ದಾಖಲಾತಿ ಇಲ್ಲದ ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಮಾಡಿಸಲು ಅವಕಾಶ ಕಲ್ಪಿಸಬೇಕು, ರಾಣಿಬೆನ್ನೂರು ಬಸ್ ನಿಲ್ದಾಣವನ್ನು ಹೈಟೆಕ್ ಮಾದರಿಯಲ್ಲಿ ಸ್ಥಳಾಂತರ ಮಾಡಬೇಕು ಮತ್ತು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು. ಹಾವೇರಿ ವಿಶ್ವವಿದ್ಯಾಲಯಕ್ಕೆ ಅನುದಾನ ಕಲ್ಪಿಸಿ ಬಲಪಡಿಸಬೇಕು ಹಾಗೂ ವಿವಿಗಳಲ್ಲಿನ ಭ್ರಷ್ಟಾಚಾರಗಳ ಸೂಕ್ತ ತನಿಖೆಗೆ ನಡೆಸಬೇಕು. ಐಟಿಐ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು. ಕಾನೂನು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಇ-ಗ್ರಂಥಾಲಯ, ಗ್ರಂಥಾಲಯಗಳಲ್ಲಿ ಪುಸ್ತಕಗಳು, ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ಸರ್ಕಾರಿ ಸೀಟ್ ಸಿಗದೇ ಇರುವ ನರ್ಸೀಂಗ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಸರ್ಕಾರಿ ಶಾಲಾ-ಕಾಲೇಜ್‌ಗಳಲ್ಲಿ ಸ್ವಚ್ಛತಾ ಸಿಬ್ಬಂದಿ ನೇಮಕ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್., ಸಾಮಾಜಿಕ ಪರಿವರ್ತನಾ ಜನಾಂದೋಲನ ಕಾರ್ಯಕರ್ತೆ ಹಸೀನಾ ಹೆಡಿಯಾಲ, ಎಸ್‌ಎಫ್‌ಐ ಮುಖಂಡರಾದ ಪುನೀತ್ ಆರ್., ವಸಂತ ವಿ., ಪ್ರದೀಪ್ ಹೊಂಬರಡಿ ಮತ್ತಿತರರು ಇದ್ದರು.