ಶಿರಸಿ: ಕದಂಬ ಕನ್ನಡ ಜಿಲ್ಲೆ ಹಾಗೂ ಬನವಾಸಿ ತಾಲೂಕು ರಚನೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯಬೇಕು ಎಂದು ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್‌ನ ಪದಾಧಿಕಾರಿಗಳು ಶಾಸಕ ಭೀಮಣ್ಣ ನಾಯ್ಕ ಅವರನ್ನು ಜನಸಂಪರ್ಕ ಕಾರ್ಯಾಲಯದಲ್ಲಿ ಭೇಟಿಯಾಗಿ ವಿನಂತಿಸಿದರು.
ಜಿಲ್ಲಾ ಕೇಂದ್ರವಾಗಿರುವ ಕಾರವಾರ ಬಹುತೇಕ ತಾಲೂಕು ಜನರಿಗೆ ದೂರವಾಗಿದ್ದು, ಜಿಲ್ಲಾಸ್ಪತ್ರೆ-ಮೆಡಿಕಲ್ ಕಾಲೇಜು ಕಾರವಾರಕ್ಕೆ ಮಾತ್ರ ಸೀಮಿತಗೊಂಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ಶಿರಸಿಯಲ್ಲಿ ಮೆಡಿಕಲ್ ಕಾಲೇಜು-ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯವಿದೆ. ಈ ನಿಟ್ಟಿನಲ್ಲಿ ಘಟ್ಟದ ಮೇಲಿನ ಪ್ರದೇಶಗಳಾದ ಸಿದ್ದಾಪುರ, ಶಿರಸಿ, ಯಲ್ಲಾಪುರ, ಮುಂಡಗೋಡು, ಹಳಿಯಾಳ, ಜೋಯ್ಡಾ ಹಾಗೂ ದಾಂಡೇಲಿಯನ್ನು ಒಳಗೊಂಡು ಪ್ರತ್ಯೇಕ ಜಿಲ್ಲೆ ರಚಿಸುವುದು ಅವಶ್ಯವಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದ್ದಾರೆ. ಕದಂಬರು ಆಳಿರುವ ಪ್ರದೇಶ ಮತ್ತು ಭುವನೇಶ್ವರಿಯ ನೆಲ ಇದಾಗಿದ್ದರಿಂದ ಕದಂಬ ಕನ್ನಡ ಜಿಲ್ಲೆ ಎಂದು ನಾಮಕರಣ ಮಾಡಬೇಕು ಎನ್ನುವುದು ಈ ಭಾಗದ ಜನರ ಆಗ್ರಹವಾಗಿದೆ. ಪ್ರತ್ಯೇಕ ಜಿಲ್ಲೆಯ ಕೂಗು ಈಗಿನದ್ದಲ್ಲ. ೩೦ ವರ್ಷದ ಹಿಂದೆಯೇ ಅಭಿವೃದ್ಧಿಗಾಗಿ ಪ್ರತ್ಯೇಕ ಜಿಲ್ಲೆ ಬೇಡಿಕೆ ಇಟ್ಟಿದ್ದು, ಈಗ ಅದೇ ಧ್ವನಿ ಪ್ರಬಲವಾಗಿ ಹೊಮ್ಮುತ್ತಿದೆ. ಇದೀಗ ಜನಾಗ್ರಹ ಮತ್ತೂ ಹೆಚ್ಚಿನ ರೀತಿಯಲ್ಲಿ ಕೇಳಿಬರುತ್ತಿದೆ. ಹಳ್ಳಿ-ಪಟ್ಟಣದ ಪ್ರತಿ ಮನೆಯಿಂದ ಸಾರ್ವಜನಿಕರು ಪ್ರತ್ಯೇಕ ಜಿಲ್ಲಾ ಕೂಗಿಗೆ ಧ್ವನಿಯಾಗಿದ್ದಾರೆ. ಡಿ. ೯ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ವಿಧಾಸಭೆ ಅಧಿವೇಶನದಲ್ಲಿ ಪ್ರತ್ಯೇಕ ಜಿಲ್ಲೆ ಹಾಗೂ ಬನವಾಸಿ ತಾಲೂಕು ರಚನೆ ವಿಷಯವನ್ನು ಪ್ರಸ್ತಾಪಿಸಿ, ನಮ್ಮೆಲ್ಲರ ಆಗ್ರಹಕ್ಕೆ ವಿಧಾನಸಭೆಯಲ್ಲಿ ತಾವು ಧ್ವನಿಯಾಗಬೇಕು ಎಂದು ಭೀಮಣ್ಣ ನಾಯ್ಕ ಅವರನ್ನು ಕೋರಿದರು.ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್‌ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಪ್ರಮುಖರಾದ ಎಂ.ಎಂ. ಭಟ್ಟ, ಸಿ.ಎಫ್. ಈರೇಶ, ಜಯಶೀಲ ಗೌಡ, ವಿನಯ ಗೌಡ, ಮಾದೇವ ಚಲುವಾದಿ, ಅನಿಲ ನಾಯಕ, ಶಿವಾನಂದ ದೇಶಳ್ಳಿ, ಸಿ.ಎಂ. ಹೆಗಡೆ ಮತ್ತಿತರರು ಇದ್ದರು.
ಕೇಂದ್ರ ಸರ್ಕಾರವು ಹೊಸ ಜಿಲ್ಲೆ ರಚನೆಗೆ ಅವಕಾಶ ನೀಡುತ್ತಿಲ್ಲ. ಆದರೂ ಘಟ್ಟದ ಮೇಲಿನ ೩ ಶಾಸಕರ ಜತೆ ಸಾಧಕ-ಬಾಧಕ ಚರ್ಚಿಸಿ, ಜನರ ಆಗ್ರಹವನ್ನು ಸರ್ಕಾರದ ಗಮನ ಸೆಳೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.