ಪೂರ್ವ ವಲಯ ಬಡಾವಣೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

KannadaprabhaNewsNetwork | Published : Jul 16, 2024 12:35 AM

ಸಾರಾಂಶ

ಮೈಸೂರು ಪೂರ್ವ ವಲಯ ವ್ಯಾಪ್ತಿಯ 30 ಬಡಾವಣೆಗಳಲ್ಲಿ ಇನ್ನೂ ಬಗೆ ಹರಿಯದ ವಿವಿಧ ಜ್ವಲಂತ ಸಮಸ್ಯೆಗಳಿಗೆ ಈಗಾಗಲೇ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೂಲ ಸೌಕರ್ಯ ಅನುಷ್ಠಾನಕ್ಕೆ ಆಗ್ರಹಿಸಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ನೇತೃತ್ವದಲ್ಲಿ 30 ಬಡಾವಣೆಗಳ ಸಾವಿರಾರು ನಿವಾಸಿಗಳು ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.

ನಗರದ ಬನ್ನೂರು ರಸ್ತೆಯಲ್ಲಿರುವ ಮೆಗಾ ಡೇರಿ ಮುಂಭಾಗದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಟೆರೇಷಿಯನ್ ಕಾಲೇಜು ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ತಮ್ಮ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

ಈ ವೇಳೆ ಒಕ್ಕೂಟದ ಅಧ್ಯಕ್ಷ ಎ.ಎಂ. ಬಾಬು ಮಾತನಾಡಿ, ಮೈಸೂರು ಪೂರ್ವ ವಲಯ ವ್ಯಾಪ್ತಿಯ 30 ಬಡಾವಣೆಗಳಲ್ಲಿ ಇನ್ನೂ ಬಗೆ ಹರಿಯದ ವಿವಿಧ ಜ್ವಲಂತ ಸಮಸ್ಯೆಗಳಿಗೆ ಈಗಾಗಲೇ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಈವರೆಗೂ ಯಾವುದೇ ರೀತಿಯ ಆಶಾಭಾವನೆ ಕಂಡು ಬಂದಿಲ್ಲ. ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲೇ ನಮ್ಮ ವಲಯದ ಹಲವು ಬಡಾವಣೆಗಳು ಇವೆ. ಇದನ್ನು ಮನಗಂಡು ಮುಖ್ಯಮಂತ್ರಿಗಳು ಸಮಸ್ಯೆ ಬಗೆಹರಿಸುವತ್ತ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದರು.

ಎಲ್ಲಾ ಬಡಾವಣೆಗಳಿಗೆ ಕಾವೇರಿ ನೀರು ಸಂಪರ್ಕ ಕಲ್ಪಿಸಬೇಕು. ಬಡಾವಣೆಗಳಲ್ಲಿ ವ್ಯವಸ್ಥಿತ ಒಳಚರಂಡಿ ವ್ಯವಸ್ಥೆ ಮಾಡಬೇಕು. ಹೊರ ವರ್ತುಲ ರಸ್ತೆ ಪಕ್ಕದಲ್ಲಿರವ ತಿಪ್ಪಯ್ಯನ ಕೆರೆಯಲ್ಲಿ ಚರಂಡಿ ನೀರು ಸಂಗ್ರಹವಾಗಿದ್ದು, ಈ ಭಾಗದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಸುತ್ತಮುತ್ತಲಿನ ನಾಲ್ಕಾರು ಒಳಚರಂಡಿ ಮಾರ್ಗಗಳ ಕಲುಷಿತ ನೀರು ಕೆರೆಗೆ ಹರಿದು ಬಂದು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ಈ ಬಗ್ಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಬಡಾವಣೆಗಳಲ್ಲಿ ಅಲ್ಲಲ್ಲಿ ಹಾದುಹೋಗಿರುವ ರಾಜಕಾಲುವೆಯ ಅಕ್ಕಪಕ್ಕಗಳಲ್ಲಿ ಹಲವು ಕಟ್ಟಡಗಳು ನಿರ್ಮಾಣವಾಗಿದ್ದು, ಮಳೆ ನೀರು ಮತ್ತು ಕೊಳಚೆ ನೀರು ಸೇರಿ ಕೊಳವೆ ಬಾವಿಗಳಿಗೆ ನುಗ್ಗಿ ವಿವಿಧ ರೀತಿಯ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿವೆ. ಬಡಾವಣೆಗಳಲ್ಲಿ ಹದಗೆಟ್ಟ ಕಂಬಗಳು, ಪರಿವರ್ತಕ(ಡಿಟಿಸಿ) ಕೇಂದ್ರಗಳಲ್ಲಿ ಹೆಚ್ಚು ನೇತಾಡುವ ತಂತಿಗಳು ಮತ್ತು ತೆರೆದ ಫಲಕಗಳು ಮತ್ತು ಮನೆಗಳ ನಡುವಿನ ಕಂಬಗಳ ವಿವಾದಗಳಿಂದಾಗಿ ವ್ಯತ್ಯಯಗೊಂಡ ವಿದ್ಯುತ್ ಸರಬರಾಜು ಮತ್ತು ಅಪಾಯಕಾರಿ ಪ್ರಸರಣ ಮಾರ್ಗಗಳು ಮತ್ತು ಪ್ಯಾನಲ್‌ ಗಳು ಒತ್ತಡದಲ್ಲಿವೆ. ಈ ಸಮಸ್ಯೆ ನಿವಾರಿಸುವ ಮೂಲಕ ಗ್ರಾಹಕರಿಗೆ ತಡೆರಹಿತ, ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಒದಗಿಸಬೇಕು. ಹದಗೆಟ್ಟ ಕಂಬಗಳನ್ನು ಬದಲಿಸಿ, ಹೆಚ್ಚು ಜೋತು ಬಿದ್ದಿರುವ ಜಾಗಗಳಲ್ಲಿ ಮಧ್ಯಂತರ ಕಂಬಗಳನ್ನು ಒದಗಿಸಿ ವಾಹಕಗಳನ್ನು ಮುಚ್ಚಿದ ಕವರ್ ಕಂಡಕ್ಟರ್ ಬದಲಿಸಿ ಎಲ್ಲಾ ಪರಿವರ್ತಕಗಳನ್ನು ಪ್ಯಾನಲ್‌ ಗಳಿಂದ ಮುಚ್ಚಿ ಸಮಸ್ಯೆ ನಿವಾರಿಸಬೇಕು ಎಂದರು.

ಹೊಸ ಸಂಪರ್ಕ ರಸ್ತೆಗಳು ಮತ್ತು ಬೈಪಾಸ್ ರಸ್ತೆಗಳನ್ನು ಸುಧಾರಿಸುವುದು. ಅಗತ್ಯ ರಸ್ತೆಗಳ ರಚನೆ, ರಿಪೇರಿ ಮತ್ತು ಡಾಂಬರೀಕರಣದ ಕೆಲಸ ಮಾಡಬೇಕಿದೆ. ಉದ್ಯಾನವನಗಳಲ್ಲಿ ಮಕ್ಕಳ ಸ್ನೇಹಿ ಆಟಿಕೆ ಸಾಮಗ್ರಿಗಳ ನಿರ್ಮಾಣ, ಆಟದ ಮೈದಾನ, ಜಿಮ್ ಉಪಕರಣಗಳು, ಸಾರ್ವಜನಿಕ ಉದ್ಯಾನವನಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಅವರು ತಿಳಿಸಿದರು.

ಬಡಾವಣೆಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಒಡ್ಡುಗಳನ್ನು ನಿರ್ಮಿಸುವ ಮೂಲಕ ಸಾಮಾಜಿಕ ಅರಣ್ಯ ಹೆಚ್ಚಿಸಲು ವಿವಿಧ ಸಸಿಗಳನ್ನು ನೆಟ್ಟು ಬಡಾವಣೆಯನ್ನು ಹಸಿರೀಕರಣ ಮಾಡಬೇಕು. ಮಳೆ ನೀರು ಕೊಯ್ಲು ವ್ಯವಸ್ಥೆ ಕಡ್ಡಾಯ ಮಾಡಬೇಕು. ಬಡಾವಣೆಗಳಲ್ಲಿ ಸಿಗ್ನಲ್ ಲೈಟ್ಸ್, ಸ್ಪೀಡ್ ಬ್ರೇಕ್ ಮತ್ತು ಝಿಗ್ ಝಾಗ್ ಸಿಗ್ನಲ್ ಒದಗಿಸಬೇಕು. ಕಳ್ಳತನ, ದರೋಡೆ ಮತ್ತು ಮಾದಕ ದ್ಯವ್ಯ ಸೇವನೆ ಪ್ರಕರಣಗಳಂತಹ ಕಾನೂನುಬಾಹಿರ ಚಟುವಟಿಕೆ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಹೊರ ವರ್ತುಲ ರಸ್ತೆ ಮತ್ತು ಆಂತರಿಕ ಬಡಾವಣೆಗಳಲ್ಲಿ ಕೆಎಸ್ಆರ್ ಟಿಸಿ ಬಸ್ ಸೌಲಭ್ಯ ಒದಗಿಸುವುದು. ಆಯ್ದ ಬಡಾವಣೆಗಳಿಗೆ ಸ್ಮಶಾನಗಳ ಗುರುತಿಸುವಿಕೆ ಮತ್ತು ನಿರ್ಮಾಣ ಹಾಗೂ ವಿದ್ಯುತ್ ಚಿತಾಗಾರ ವ್ಯವಸ್ಥೆ ಕಲ್ಪಿಸಬೇಕು. ಬಡಾವಣೆಗಳ ಸಂಗಮ ಸ್ಥಳಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.

ಒಕ್ಕೂಟದ ಉಪಾಧ್ಯಕ್ಷ ಎಂ.ಎಚ್. ಚೆಲುವೇಗೌಡ, ಕಾರ್ಯದರ್ಶಿ ಎಲ್. ಪ್ರಕಾಶ್, ಸಹ ಕಾರ್ಯದರ್ಶಿ ಎಂ.ಎಲ್. ಅರುಣ್, ಸಂಘಟನಾ ಕಾರ್ಯದರ್ಶಿ ಬೊಮ್ಮೇಗೌಡ, ಸಹ ಸಂಘಟನಾ ಕಾರ್ಯದರ್ಶಿ ಡಿ. ಕೃಷ್ಣೇಗೌಡ, ಖಜಾಂಚಿ ನರಸಿಂಹೇಗೌಡ, ಮಾಧ್ಯಮ‌ ಕಾರ್ಯದರ್ಶಿ ಎಚ್.ಎಸ್. ‌ರಾಘವೇಂದ್ರ ಭಟ್ ಹಾಗೂ ನಿರ್ದೇಶಕರು, 30 ಖಾಸಗಿ ಬಡಾವಣೆಗಳ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನಿವಾಸಿಗಳು ಇದ್ದರು.

Share this article