ಕನ್ನಡಪ್ರಭ ವಾರ್ತೆ ಬೆಳಗಾವಿ
ನಷ್ಟದಲ್ಲಿರುವ ಹುಕ್ಕೇರಿ ತಾಲೂಕಿನ ಸಹಕಾರ ಸಂಸ್ಥೆಗಳನ್ನು ಉಳಿಸಿ, ಬೆಳೆಸಬೇಕೆಂಬ ಸಂಕಲ್ಪದೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಸೇರಿಕೊಂಡು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಸಹಕಾರ ಪರ್ವವನ್ನು ಆರಂಭಿಸಿರುವುದಾಗಿ ಚಿಕ್ಕೋಡಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಹುಕ್ಕೇರಿ ತಾಲೂಕು ವಿದ್ಯುತ್ ಸಹಕಾರ ಸಂಘದ ಚುನಾವಣೆ ನಿಮಿತ್ತ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ರೈತರ ಹಿತದೃಷ್ಟಿಯಿಂದ ನಾವೆಲ್ಲರೂ ಕೂಡಿಕೊಂಡು ಚುನಾವಣೆಯ ನೇತೃತ್ವ ವಹಿಸಿಕೊಂಡಿದ್ದು, ಇದರಲ್ಲಿ ನಾವು ಹೊರಗಿನವರು ಎಂಬುದನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ಕತ್ತಿಯವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.ಹುಕ್ಕೇರಿ ತಾಲೂಕಿನಲ್ಲಿ ಕಳೆದ 6 ತಿಂಗಳಿನಿಂದ ಸಹಕಾರ ಪರ್ವದ ಮೂಲಕ ಹೊಸ ಶಕೆ ಆರಂಭವಾಗಿದೆ. ಕಳೆದ ಮೂರು ದಶಕಗಳಿಂದ ಸಹಕಾರ ಸಂಸ್ಥೆಗಳಲ್ಲಿ ದಬ್ಬಾಳಿಕೆ ಮಾಡಿಕೊಂಡು ರೈತರನ್ನು ವಂಚಿಸುತ್ತ ಬಂದಿರುವ ವ್ಯಕ್ತಿಗಳಿಗೆ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು. ಸಹಕಾರ ಸಂಸ್ಥೆಗಳನ್ನು ಬೆಳೆಸಬೇಕಾಗಿದೆ. ರೈತರಿಗೆ ಪಾರದರ್ಶಕ ಆಡಳಿತ ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸೆ.28ರಂದು ನಡೆಯುವ ತಾಲೂಕು ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ತಮ್ಮ ನೇತೃತ್ವದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.ದಿ.ಅಪ್ಪಣ್ಣಗೌಡ ಪಾಟೀಲರ ಕನಸಿನ ಆಡಳಿತವನ್ನು ನೀಡಲು ನಾವೆಲ್ಲರೂ ಬದ್ಧರಿದ್ದೇವೆ. ತಾಲೂಕಿನ ವಿದ್ಯುತ್ ಸಂಘ, ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಪಣ ತೊಟ್ಟು ನಾವೆಲ್ಲರೂ ಪಕ್ಷಾತೀತವಾಗಿ ಶ್ರಮಿಸುತ್ತಿದ್ದೇವೆ. ವಿದ್ಯುತ್ ಸಹಕಾರ ಸಂಘವನ್ನು ಸಾಲದ ಸುಳಿಯಿಂದ ಪಾರು ಮಾಡಿ ರೈತರ ಹಿತಕ್ಕೆ ಅನುಗುಣವಾಗಿ ಕೆಲಸವನ್ನು ಮಾಡುತ್ತೇವೆ. ಕೇವಲ 24 ಗಂಟೆಯೊಳಗೆ ರೈತರಿಗೆ ಟಿಸಿ ನೀಡುತ್ತಿದ್ದೇವೆ. ಎಲೆಮುನೊಳ್ಳಿ ಗ್ರಾಮದಲ್ಲಿ ಫೈಲಟ್ ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದೇವೆ. ಸತೀಶ್ ಜಾರಕಿಹೊಳಿಯವರ ಮೂಲಕ ಈ ಸಂಸ್ಥೆಗೆ ಸರ್ಕಾರದಿಂದ ಆರ್ಥಿಕ ನೆರವು ಒದಗಿ ಬರಲಿದೆ ಎಂದರು.ಹುಕ್ಕೇರಿ ತಾಲೂಕಿನ ಸಹಕಾರ ಸಂಘಗಳ ಪ್ರಮುಖರು ನನ್ನ ಬಳಿಗೆ ಬಂದು ಸಂಸ್ಥೆಗಳನ್ನು ಉಳಿಸಿಕೊಳ್ಳುವಂತೆ ಕೋರಿಕೊಂಡರು. ಹೀಗಾಗಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಗೆ ಆರ್ಥಿಕ ನೆರವು ನೀಡಿದೇವು. ಇದರಿಂದ ಕಾರ್ಮಿಕರು, ರೈತರಿಗೆ ಒಳ್ಳೆಯದು ಆಗಲಿದೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯನ್ನು ಆರ್ಥಿಕವಾಗಿ ಬಲಾಢ್ಯ ಮಾಡಿ ಅಪ್ಪಣ್ಣಗೌಡರ ಕಾಲದಲ್ಲಿದ್ದ ಗತ ವೈಭವವನ್ನು ತರುವ ಕಾರ್ಯವನ್ನು ಮಾಡುತ್ತಿರುವುದಾಗಿ ತಿಳಿಸಿದರು.ಕಾರ್ಖಾನೆಯ ಪ್ರಗತಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕಬ್ಬು ಪೂರೈಕೆ ಮಾಡುವ ರೈತರಿಗೆ ಕೇವಲ 15 ದಿನದೊಳಗೆ ಬಿಲ್ ಸಂದಾಯ ಮಾಡುತ್ತೇವೆ. ಕಾರ್ಮಿಕರ ಮತ್ತು ರೈತರ ಹಿತ ಕಾಪಾಡುವ ಕೆಲಸವು ನಮ್ಮದಾಗಿದೆ. ಮೂವತ್ತು ವರ್ಷಗಳಿಂದ ಕಪಿಮುಷ್ಟಿಯಲ್ಲಿರುವ ಜನರಿಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟು, ನೆಮ್ಮದಿ ಆಡಳಿತವನ್ನು ನೀಡುತ್ತೇವೆ. ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಪ್ರಮುಖ ಪ್ರಾಶಸ್ತ್ಯ ನೀಡಲಿದ್ದು, ವಿದ್ಯುತ್ ಸಂಸ್ಥೆಯ ಚುನಾವಣೆಯಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಆರಿಸಿ ತಂದು ರೈತರ ಸೇವೆಗೆ ಅವಕಾಶ ನೀಡುವಂತೆ ಕೋರಿದರು.ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಸೆ.28 ರಂದು ನಡೆಯಲಿರುವ ಹುಕ್ಕೇರಿ ತಾಲೂಕಿನ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಂಸತ್ ಸದಸ್ಯ ಅಣ್ಣಾಸಾಹೇಬ್ ಜೊಲ್ಲೆ ನೇತೃತ್ವದಲ್ಲಿ ದಿ.ಅಪ್ಪಣ್ಣಗೌಡ ಪಾಟೀಲರ ಹೆಸರಿನಲ್ಲಿ ಪೆನಲ್ ರಚಿಸಲಾಗಿದೆ. ಪ್ರಬುದ್ಧ ಮತದಾರರು ದಕ್ಷ ಆಡಳಿತಕ್ಕಾಗಿ ನಮ್ಮ ಪೆನಲ್‌ನ ಎಲ್ಲ ಅಭ್ಯರ್ಥಿಗಳಿಗೆ ಅಮೂಲ್ಯವಾದ ಮತಗಳನ್ನು ನೀಡಿ ಆಶೀರ್ವಾದ ಮಾಡಬೇಕು. ರೈತರ ಸೇವೆಗಾಗಿ ನಾವು ಕಟಿಬದ್ದರಾಗಿದ್ದೇವೆ. ರೈತರ ಬೆಂಬಲ, ಪ್ರೋತ್ಸಾಹ ನಮಗೆ ಮುಖ್ಯವಾಗಿದೆ ಎಂದು ತಿಳಿಸಿದರು.ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಸಹಕಾರ ಸಂಘಗಳ ಚುನಾವಣೆಯಲ್ಲಿ ನಮ್ಮ ವಿರೋಧಿ ಬಣವು ಪ್ರತಿ ಗ್ರಾಮಗಳಲ್ಲಿ ಮತದಾರರಿಂದ ಸಾಮೂಹಿಕ ಪ್ರತಿಜ್ಞೆ ಮಾಡಿಸುತ್ತಿರುವುದು ಸರಿಯಲ್ಲ. ಉತ್ತಮ ಆಡಳಿತಕ್ಕಾಗಿ, ಈ ಹಿಂದಿನ ಸರ್ವಾಧಿಕಾರಿ ಆಡಳಿತವನ್ನು ಕೊನೆ ಮಾಡಿ ನಮ್ಮ ಪೆನಲ್‌ನ್ನು ಹರಿಸುವಂತೆ ಕೋರಿದರು.ವೇದಿಕೆಯಲ್ಲಿ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಹೀರಾ ಶುಗರ್ ಅಧ್ಯಕ್ಷ ಅಜ್ಜಪ್ಪ ಕಲ್ಲಟ್ಟಿ, ಅಶೋಕ ಅಂಕಲಿ, ಅಶೋಕ ಪಟ್ಟಣಶೆಟ್ಟಿ, ಪರಗೌಡ ಪಾಟೀಲ, ರವಿ ಹಿಡಕಲ್, ಬಸವರಾಜ ಪಾಟೀಲ, ಶಿವನಾಯಿಕ ನಾಯಿಕ, ಬಸವರಾಜ ಮಟಗಾರ, ವಿದ್ಯುತ್ ಸಹಕಾರ ಸಂಘ ಮತ್ತು ಹೀರಾ ಶುಗರ್ಸ್ ನಿರ್ದೇಶಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.