ಧಾರವಾಡ: ಹಾವುಗಳನ್ನು ಗೌರವಿಸಿ, ಗಾಬರಿ ಪಡಬೇಡಿ: ನಿಸರ್ಗದ ಮೌನ ರಕ್ಷಕರನ್ನು ಕಾಪಾಡಿ ಎಂಬುದು 2025ನೇ ಸಾಲಿನ ವಿಶ್ವ ಉರಗಗಳ ದಿನಾಚರಣೆ ಧ್ಯೇಯ. ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ -1972ರ ಅಡಿ ಹಾವುಗಳು, ಕಾನೂನಿನಡಿ ಸಂರಕ್ಷಿತ ಪ್ರಾಣಿ. ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಅವುಗಳಿಗೆ ತೊಂದರೆ ಉಂಟುಮಾಡುವುದು ಶಿಕ್ಷಾರ್ಹ ಅಪರಾಧ ಎಂದು ವನ್ಯಜೀವಿ ಕ್ಷೇಮಪಾಲಕ ಪ್ರೊ. ಗಂಗಾಧರ ಕಲ್ಲೂರ ಹೇಳಿದರು.
ಹಾವುಗಳು ಮನೆಗಳಲ್ಲಿ ಕಂಡುಬಂದಲ್ಲಿ ವಿಷಕಾರಿಯೋ ಅಥವಾ ಅಲ್ಲವೋ ಎಂಬುದನ್ನು ಗುರುತಿಸುವ ಸಾಮಾನ್ಯ ತಿಳಿವಳಿಕೆ ಪ್ರತಿಯೊಬ್ಬರೂ ಹೊಂದಬೇಕು. ಇತ್ತೀಚೆಗೆ ಹಾವುಗಳ ಆವಾಸ ಸ್ಥಳದ ಅತಿಕ್ರಮಣ, ರಾತ್ರಿಯೂ ಹಗಲಿನಷ್ಟೇ ಮನುಷ್ಯರ ಚಟುವಟಿಕೆ, ಕಣ್ಣು ಕೋರೈಸುವಷ್ಟು ಬೆಳಕು, ಭೂಮಿಗೇ ಜ್ವರ ಬಂದಂತೆ ಕಾವು, ವಾಣಿಜ್ಯಿಕ ಬೆಳೆಗಳ ದೆಸೆಯಿಂದ ಆಹಾರದ ಅಲಭ್ಯತೆ, ರೈತನ ಮಿತ್ರನಾದ ಹಾವಿಗೆ ಆಹಾರ ಬೆಳೆಗಳ ತಾಕು ಕ್ಷೀಣಿಸಿ, ಬೆಳೆ ಪೀಡೆಗಳಾದ ಇಲಿ, ಹೆಗ್ಗಣ, ಮೊಲಗಳ ಸಂಖ್ಯೆಯಲ್ಲಿ ಇಳಿಮುಖವಾಗಿ ಆಹಾರ ಸರಪಳಿ ತುಂಡಾಗಿದ್ದೂ ಕಾರಣ ಎಂದು, ಪ್ರೊ. ಕಲ್ಲೂರ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಗೋವಿಂದರೆಡ್ಡಿ, ಸ್ಥಳೀಯ ಆಡಳಿತ ಮಂಡಳಿ ಸದಸ್ಯ ವಿಷ್ಣು ಹುಕ್ಕೇರಿ, ಉರಗ ರಕ್ಷಕರಾದ ಮಂಜುನಾಥ, ಸೌರಭ ಸಬನೀಸ್, ಸಮೀರ ಕುಲಕರ್ಣಿ ಹಾಗೂ ಹರ್ಷವರ್ಧನ ಶೀಲವಂತ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡರು.ಹಾವು ಏಕೆ ಕಚ್ಚುತ್ತದೆ?: ಮಕ್ಕಳು ಹಾವುಗಳನ್ನು ಮುಟ್ಟಿ ನೋಡಿ, ಕುತೂಹಲ ತಾಳದೇ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರೊ. ಗಂಗಾಧರ ಕಲ್ಲೂರ, ಹಾವುಗಳಲ್ಲಿರುವ ವಿಷ ಮನುಷ್ಯರನ್ನು ಕಚ್ಚಲು ಅಲ್ಲ. ಬೇಟೆಯನ್ನು ಪ್ರಜ್ಞೆ ತಪ್ಪಿಸಲು, ಇಡಿಯಾಗಿ ನುಂಗಿದ ಆಹಾರ ಅರಗಿಸಿಕೊಳ್ಳಲು ಬಳಕೆಯಾಗುತ್ತದೆ. ಈ ವಿಷವೂ ತುರ್ತು ಸಂದರ್ಭದಲ್ಲಿ ಮನುಷ್ಯರಿಗೆ ಜೀವರಕ್ಷಕ ಔಷಧಿ! ಅನಗತ್ಯವಾಗಿ ಹಾವುಗಳು ಯಾರ ಮೇಲೂ, ಸೇಡಿನ ದಾಳಿ ಅಥವಾ ಬೆನ್ನಟ್ಟಿ ಕಚ್ಚುವುದಿಲ್ಲ! ಅವು ಭಯಗೊಂಡಾಗ, ಪ್ರಾಣರಕ್ಷಣೆಯ ಕೊನೆ ಅಸ್ತ್ರವಾಗಿ ಕಚ್ಚುವುದು! ಹೀಗಾಗಿ, ಸುರಕ್ಷಿತ ಅಂತರ ನಮ್ಮ ಹೊಣೆ ಎಂದರು.
----
ಮಾಳಮಡ್ಡಿಯ, ಕೆ.ಇ. ಬೋರ್ಡ್ ಸಂಸ್ಥೆಯಲ್ಲಿ ಬುಧವಾರ ವಿಶ್ವ ಹಾವುಗಳ ದಿನಾಚರಣೆ ಹಿನ್ನೆಲೆಯಲ್ಲಿ ಪ್ರೊ. ಗಂಗಾಧರ ಕಲ್ಲೂರ ಮಾತನಾಡಿದರು.
16ಡಿಡಬ್ಲೂಡಿ8