ಮಾನವೀಯ ಆಧಾರದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿ

KannadaprabhaNewsNetwork | Updated : Dec 31 2023, 01:31 AM IST

ಸಾರಾಂಶ

ಕಚೇರಿಗೆ ಬರುವವರು ನಿಮ್ಮನ್ನು ಹರಿಸಿದರೇ ಅಂತಹ ಪುಣ್ಯ ಮತ್ತೊಂದಿಲ್ಲ, ಶಪಿಸಿದರೆ ಅದರಂತ ಪಾಪ ಮತ್ತೊಂದಿಲ್ಲ ಎಂದು ಹೇಳಿದರು.ಕಚೇರಿ ಖಾಲಿ ಇದ್ದರೆ ಕೆಲಸ ಚೆನ್ನಾಗಿ ಆಗುತ್ತಿದೆ ಎಂದರ್ಥ,

ಹಿರೇಕೆರೂರು: ಜನಸಾಮಾನ್ಯರು ಸಮಸ್ಯೆಗಳನ್ನು ಹಿಡಿದು ಅಧಿಕಾರಿಗಳನ್ನು ಕಾಣಲು ಕಚೇರಿಗೆ ಬಂದರೆ, ಅವರ ಸಮಸ್ಯೆ ಸಮಚಿತ್ತದಿಂದ ಆಲಿಸಿ, ತ್ವರಿತವಾಗಿ ಸಮಸ್ಯೆ ಪರಿಹರಿಸುವ ಕೆಲಸವಾಗಬೇಕು. ಕೇವಲ ನಿಯಮ ಪಾಲನೆ ಮಾಡದೇ ಮಾನವೀಯತೆ ಆಧಾರದ ಮೇಲೆ ಕೆಲಸ ಮಾಡಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಹಿರೇಕೆರೂರು ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾರಿಗೂ ನೋವಾಗದಂತೆ ಹಾಗೂ ಯಾವುದೇ ತೊಂದಯಾಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಜನರ ಹಾಗೂ ಸರ್ಕಾರದ ಸೇತುವೆಯಾಗಿ ಕೆಲಸ ಮಾಡಬೇಕು. ಕಚೇರಿಗೆ ಬರುವವರು ನಿಮ್ಮನ್ನು ಹರಿಸಿದರೇ ಅಂತಹ ಪುಣ್ಯ ಮತ್ತೊಂದಿಲ್ಲ, ಶಪಿಸಿದರೆ ಅದರಂತ ಪಾಪ ಮತ್ತೊಂದಿಲ್ಲ ಎಂದು ಹೇಳಿದರು.

ಕಚೇರಿ ಖಾಲಿ ಇದ್ದರೆ ಕೆಲಸ ಚೆನ್ನಾಗಿ ಆಗುತ್ತಿದೆ ಎಂದರ್ಥ,ಆದರೆ ಕಚೇರಿಗಳು ಜನರಿಂದ ತುಂಬಿದ್ದರೆ ಕೆಲಸವಾಗುತ್ತಿಲ್ಲ ಎಂದರ್ಥ. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜಾರಿಗೆ ತರಲು ಅಧಿಕಾರಿಗಳ ಕೆಲಸ ಮಹತ್ತರವಾಗಿದೆ.ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದತೆ. ಇಬ್ಬರು ಸರಿಯಾಗಿ ಕಾರ್ಯ ನಿರ್ವಹಿಸಿದರೆ ರಾಮರಾಜ್ಯ ಸಾಧ್ಯ ಎಂದರು.

ಸರ್ಕಾರ ಒಂದಿಲ್ಲೊಂದು ಜನಪರ ಯೋಜನೆ ಜಾರಿಗೊಳಿಸುತ್ತಿದೆ. ಚುನಾವಣೆ ಸಮಯದಲ್ಲಿ ನೀಡಿದ ಭರವಸೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಂತ್ಯ ಸಮರ್ಪಕವಾಗಿ ಜಾರಿಗೆ ತಂದಿದೆ. ಜನರ ಸಮಸ್ಯೆ, ನೋವು ಪರಿಹರಿಸಲು ಹಾಗೂ ಕಚೇರಿಗಳಿಗೆ ಜನರ ಅಲೆದಾಟ ಕಡಿಮೆಗೊಳಿಸಲು ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಜಿಲ್ಲಾಡಳಿತ ನಿಮ್ಮ ಬಳಿಗೆ ಬಂದಿದೆ. ಜನರ ಸಮಸ್ಯೆಗಳಗೆ ಪರಿಹಾರ ನೀಡುವ ಕೆಲಸವಾಗಲಿದೆ. ಪ್ರತಿ ಇಲಾಖೆ ಸಮಸ್ಯೆ ಪರಿಹರಿಸುವ ಕಾರ್ಯವಾಗಲಿದೆ.ವೈಯಕ್ತಿಕ ಅಥವಾ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಮಾತನಾಡಿ, ಗ್ರಾಮಗಳಲ್ಲಿ ಇ-ಸ್ವತ್ತು ಸಮಸ್ಯೆ ಹೆಚ್ಚಾಗಿ ಕೇಳಿ ಬರುತ್ತಿದ್ದು, ಗಾಂವಠಾಣಾ ವ್ಯಾಪ್ತಿಯಲ್ಲಿ ಮನೆ ನಿರ್ಮಾಣವಾಗಿದ್ದರೆ ಗ್ರಾಪಂನಲ್ಲಿ ಇ-ಸ್ವತ್ತು ಮಾಡಲು ಅವಕಾಶವಿದೆ. ಗಾಂವಠಾಣಾ ವ್ಯಾಪ್ತಿಯಿಂದ ಹೊರಗೆ ನಿರ್ಮಾಣವಾದ ಮನೆಗಳಿಗೆ ಇ-ಸ್ವತ್ತು ಮಾಡಲು ಅವಕಾಶವಿಲ್ಲ. ಸರ್ಕಾರ ಹಂತದಲ್ಲಿ ಇದು ತೀರ್ಮಾನವಾಗಬೇಕು. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಈ ಕುರಿತು ತೀರ್ಮಾನವಾಗುವ ನಿರೀಕ್ಷೆ ಇದೆ.ಗ್ರಾಮ ನಕಾಶೆಯಲ್ಲಿರುವ ಸರ್ಕಾರಿ ದಾರಿ ಮುಚ್ಚುವ ಹಾಗಿಲ್ಲ.ಯಾರಾದರೂ ಈ ದಾರಿ ಮುಚ್ಚಿದರೆ ತೆರವುಗೊಳಿಸಬಹುದು.ಆದರೆ ಜಮೀನಿಗೆ ತೆರಳುವ ರೂಢಿಗತ ದಾರಿಗಳ ಸಮಸ್ಯೆಗೆ ೨೦ ರಿಂದ ಒಂದು ತಿಂಗಳಕಾಲ ತಾತ್ಕಾಲಿಕವಾಗಿ ದಾರಿ ಮಾಡಿಕೊಡಲು ಅವಕಾಶವಿದೆ. ಶಾಶ್ವತವಾಗಿ ದಾರಿ ಮಾಡಿಕೊಡಲು ಆಗುವುದಿಲ್ಲ. ರಸ್ತೆಯಿಂದ ಹಿಂದಿನ ಭಾಗದಲ್ಲಿ ಜಮೀನು ಇರುವ ರೈತರು ೩೦೦ ರಿಂದ ೪೦೦ ಮೀಟರ್ ಜಮೀನು ರಸ್ತೆಗೆ ಸರ್ಕಾರಕ್ಕೆ ಬಿಟ್ಟುಕೊಟ್ಟರೆ ಕ್ರಮ ವಹಿಸಬಹುದು. ಹಾಗಾಗಿ ಸಂಬಂಧಪಟ್ಟ ರೈತರು ಈ ಕುರಿತು ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಅಥವಾ ಸಿವಿಲ್ ಕೋರ್ಟಲ್ಲಿ ಈ ಕುರಿತಂತೆ ರೈತರು ಕೇಸ್ ಹಾಕಬಹುದು ಎಂದರು.

ಮಧ್ಯಂತರ ಬೆಳೆ ಪರಿಹಾರ ಪಡೆದ ಜಿಲ್ಲೆಗಳ ಪೈಕಿ ರಾಜ್ಯದಲ್ಲೇ ಹಾವೇರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಗೆ ₹೧೨೬ ಕೋಟಿ ಮಧ್ಯಂತರ ಬೆಳೆವಿಮೆ ಪರಿಹಾರ ಬಿಡುಗಡೆಯಾಗಿದೆ. ಬೆಳೆ ಪರಿಹಾರ ಪಡೆಯಲು ಸರ್ಕಾರದ ನಿಯಮದಂತೆ ಕಡ್ಡಾಯವಾಗಿ ರೈತರು ಫ್ರ‍್ರೂಟ್ ಐಡಿಯಲ್ಲಿ ತಮ್ಮ ಜಮೀನಿನ ವಿಸ್ತೀರ್ಣ ದಾಖಲಿಸಬೇಕು. ಈವರೆಗೆ ಜಿಲ್ಲೆಯಲ್ಲಿ ಶೇ. ೮೫ರಷ್ಟು ರೈತರು ಫ್ರೂಟ್ ಐಡಿಯಲ್ಲಿ ನೋಂದಣಿ ಮಾಡಲಾಗಿದೆ. ಬಾಕಿ ಶೇ.೧೫ರಷ್ಟು ರೈತರು ಕೂಡಲೇ ಫ್ರೂಟ್ ಐಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಸರ್ಕಾರ ಬರ ಪರಿಹಾರ ಹಣ ಬಿಡುಗಡೆ ಮಾಡಿದರೆ ರೈತರ ಖಾತೆಗೆ ಹಣ ವರ್ಗಾವಣೆಗೆ ಮಾಡಲು ಸಹಾಯವಾಗಲಿದೆ ಎಂದು ಹೇಳಿದರು.

ಪಾರದರ್ಶಕ: ಜಿಲ್ಲೆಯ ಕಂದಾಯ ಕೋರ್ಟಗಳಲ್ಲಿರುವ ಪ್ರಕರಣಗಳ ತ್ವರಿತವಾಗಿ ವಿಲೇ ಮಾಡಲಾಗುತ್ತಿದೆ.ಮೂರು ತಿಂಗಳಿಗಿಂತ ಹೆಚ್ಚು ಅವಧಿಯ ಬಹುಪಾಲು ಪ್ರಕರಣಗಳನ್ನು ತಹಸೀಲ್ದಾರ್‌,ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕಳೆದ ಆರು ತಿಂಗಳಿಂದ ಸತತವಾಗಿ ಪ್ರಕರಣ ಇತ್ಯರ್ಥಪಡಿಸಲಾಗಿದೆ. ಇ-ಆಡಳಿತ ವ್ಯವಸ್ಥೆ ಜಾರಿಗೆ ತರಲಾಗಿದೆ.ಮುಂದಿನ ದಿನಗಳಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳನ್ನು ಮೂರು ದಿನದೊಳಗೆ ಉತ್ತರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಮುಂದಾಗಲಿದೆ ಎಂದರು.

೧೫ ದಿನಗಳಲ್ಲಿ ಇತ್ಯರ್ಥ: ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳನ್ನು ೧೫ ದಿನದೊಳಗಾಗಿ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಗಡುವು ನೀಡಿದರು. ಕಾಲಮಿತಿಯೊಳಗೆ ಜನತಾ ದರ್ಶನದ ಅರ್ಜಿ ವಿಲೇವಾರಿ ಮಾಡಿದರೆ ನಿಜವಾದ ಅರ್ಥದಲ್ಲಿ ಜನತಾದರ್ಶನ ಯಶಸ್ವಿಯಾದ ಹಾಗೆ. ಇಂದಿನ ಜನತಾದರ್ಶನ ಕಾರ್ಯಕ್ರಮದಲ್ಲಿ ಬಹಳಷ್ಟು ಪ್ರಕರಣಗಳು ಇ-ಸ್ವತ್ತು, ಹೊಲದ ದಾರಿ ಸಮಸ್ಯೆ ಕುರಿತು ರೈತರು ಅರ್ಜಿ ಸಲ್ಲಿಸಿದ್ದಾರೆ. ವಿವಿಧ ಇಲಾಖೆಗೆ ಸಂಬಂಧಪಟ್ಟಂತೆ ೨೬೪ ಅರ್ಜಿ ಸ್ವೀಕರಿಸಲಾಗಿದೆ. ಮಾಶಾಸನಕ್ಕೆ ಸಂಬಂಧಪಟ್ಟ ಅರ್ಜಿ ವಿಲೇವಾರಿ ಮಾಡಿ ಇಂದಿನ ಜನತಾದರ್ಶನದಲ್ಲೇ ಆದೇಶ ಪತ್ರ ನೀಡಲಾಗಿದೆ ಎಂದರು.

ಜನತಾ ದರ್ಶನದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಪಂ ಉಪ ಕಾರ್ಯದರ್ಶಿ ಎಸ್.ಜಿ. ಮುಳ್ಳಳ್ಳಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ್, ಉಪ ವಿಭಾಗಾಧಿಕಾರಿ ಚೆನ್ನಪ್ಪ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

Share this article