ಸಾರ್ವಜನಿಕರ ಸಮಸ್ಯೆಗೆ ತುರ್ತಾಗಿ ಸ್ಪಂದಿಸಿ: ಶಾಸಕ ಜೆ.ಟಿ. ಪಾಟೀಲ

KannadaprabhaNewsNetwork | Published : Jul 9, 2024 12:47 AM

ಸಾರಾಂಶ

ಬೀಳಗಿಯ ತಾಪಂ ಸಭಾಭವನದಲ್ಲಿ ಸೋಮವಾರ ಶಾಸಕ ಜೆ.ಟಿ. ಪಾಟೀಲ ಅಧ್ಯಕ್ಷತೆಯಲ್ಲಿ ತ್ರೈಮಾಮಾಸಿಕ ಕೆಡಿಪಿ ಸಭೆ ಜರುಗಿತು.

ಕನ್ನಡಪ್ರಭ ವಾರ್ತೆ ಬೀಳಗಿ

ರಾಜ್ಯ ಸರ್ಕಾರ ರೂಪಿಸಿದ ಯೋಜನೆಗಳು ಜನ ಸಮಾನ್ಯರಿಗೆ ತಲುಪಿದಾಗ ಮಾತ್ರ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಒಳ್ಳೆಯ ಹೆಸರು ಬರುತ್ತದೆ ಇದನ್ನರಿತು ತಾಲೂಕುಮಟ್ಟದ ಅನುಷ್ಠಾನ ಅಧಿಕಾರಿಗಳಿಂದ ಗ್ರಾಪಂ ಕಾರ್ಯದರ್ಶಿಯವರಿಗೆ ಎಲ್ಲರಿಗೂ ಜವಾಬ್ದಾರಿ ಇದೆ. ಸಾರ್ವಜನಿಕರ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವ ಕೆಲಸವಾಗಬೇಕು ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಸ್ಥಳೀಯ ತಾಪಂ ಸಭಾಭವನದಲ್ಲಿ ಸೋಮವಾರ ನಡೆದ ತ್ರೈಮಾಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಪ್ರತಿಯೊಬ್ಬರು ಕೆಲಸ ಮಾಡಿದರೆ ಸಾರ್ವಜನಿಕರಿಗೆ ಅನುಕೂಲ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿದೆ. ಅಲ್ಲದೇ, ಕಾರ್ಯಕ್ರಮಗಳು ಯಶಸ್ವಿಯಾಗಲಿವೆ. ಇಲ್ಲದೆ ಹೋದರೆ ಎಲ್ಲವು ಹಾಳಾಗಿ ಎಲ್ಲರಿಗೂ ಕೆಟ್ಟ ಹೆಸರು ಬರಲಿದೆ. ಅದಕ್ಕಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ಜನರು ನಮ್ಮನ್ನು ಪ್ರೀತಿಯಿಂದ ಕಾಣುತ್ತಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದರು. ಪ್ರತಿ ಇಲಾಖೆಯ ಪ್ರಗತಿ ವರದಿ ಮಾಹಿತಿ ಪಡೆಯುತ್ತಾ ಆಹಾರ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕೆವವು ರೇಶನ್ ಅಂಗಡಿಯವರು ಸರಿಯಾಗಿ ತೂಕ, ಮಾಪಣ ಇಲ್ಲದೆ ಬೇಕಾಬಿಟ್ಟಿ ಹಂಚಿಕೆ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಅಂತಹ ರೇಷನ್ ಅಂಗಡಿ ಮೇಲೆ ಯಾವ ಕ್ರಮ ಕೈಗೊಂಡಿದ್ಧೀರಿ ಎಂದು ಶಾಸಕರು ಸಭೆಯಲ್ಲಿದ್ದ ಆಹಾರ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು, ಇನಾಂ ಹನುಮನೇರಿ, ಜಲಗೇರಿ ಗ್ರಾಮಗಳಲ್ಲಿ ರೇಶನ್ ಅಂಗಡಿಯವರ ಮೇಲೆ ಕ್ರಮಕೈಗೊಂಡಿವೇಕೆ ಎಂದು ತರಾಟೆಗೆ ತಗೆದುಕೊಂಡು, ಸೂಕ್ತ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ೧೦೮ ವಾಹನ ಚಾಲಕರು ರೋಗಿಗಳನ್ನು ಕಮಿಷನ್ ಕೊಡುವ ಆಸ್ಪತ್ರೆಗಳಿಗೆ ರೋಗಿಗಳಿಗೆ ಕರೆದುಕೊಂಡು ಹೋಗುತ್ತಾರೆ ಎನ್ನುವ ದೂರು ಕೇಳಿ ಬರುತ್ತಿವೆ. ಬಡವರ ಆರೋಗ್ಯ ಕಾಳಜಿ ವಹಿಸಬೇಕಾದ ಆರೋಗ್ಯ ಇಲಾಖೆಗೆ ಆರೋಗ್ಯ ಸರಿ ಇಲ್ಲದಂತೆ ಕಾಣುತ್ತಿದೆ.ಸಾಂಕ್ರಾಮಿಕ ರೋಗಗಳು ಹೆಚ್ಚಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಂಡ ಮಾಹಿತಿ ನೀಡಿ ಜನರಲ್ಲಿ ಜಾಗತಿ ಮೂಡಿಸಬೇಕು. ಪಟ್ಟಣದಲ್ಲಿ ಎಲ್ಲಿಯೂ ಕೊಳಚೆ ನೀರು ನಿಲ್ಲದಂತೆ ನೋಡಿಕೊಂಡು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಕಾಮಗಾರಿಗಳು ಸರಿಯಾಗಿ ನಡೆಯಬೇಕು. ರಸ್ತೆ ಬದಿಯಲ್ಲಿ ಕೆಲವರು ರಸ್ತೆ ಅಗೆದು ಹಾಳು ಮಾಡುತ್ತಿದ್ದು, ಕೆಲವರು ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದರು.

ಸಮಾಜ ಕಲ್ಯಾಣ, ಬಿಸಿಎಂ, ಹೆಸ್ಕಾಂ, ಕಷಿ, ತೋಟಗಾರಿಕೆ, ಜಿಲ್ಲಾ ಪಂಚಾಯತಿ ಹಾಗೂ ಇನ್ನೂ ಹಲವಾರು ಇಲಾಖೆಯ ಮಾಹಿತಿಯನ್ನು ಪಡೆದು ಸರಿಯಾದ ರೀತಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದೂ ಸೂಚನೆ ನೀಡಿದರು.

ಸಭೆಯಲ್ಲಿ ಜಮಖಂಡಿ ಎಸಿ ಸಂತೋಷ ಕಾಮಗೌಡ ಹಾಗೂ ಬಾಗಲಕೋಟೆ ಎಸಿ ಸಂತೋಷ ಜಗಲಾಸರ್, ಬೀಳಗಿ ತಹಸೀಲ್ದಾರ್‌ ಸುಹಾಸ ಇಂಗಳೆ, ಬಾಗಲಕೋಟೆ ತಹಸೀಲ್ದಾರ್‌ ಅಮರೇಶ ಪಮ್ಮಾರ, ಬದಾಮಿ ತಹಸೀಲ್ದಾರ್ ಜೆ.ಬಿ. ಮಜಗ್ಗಿ, ತಾಪಂ ಆಡಳಿತಾಧಿಕಾರಿ ಸಾಜಿದ್ ಮುಲ್ಲಾ, ತಾಪಂ ಇಒ ಅಭಯ ಮರಬ, ಬಾಗಲಕೋಟೆ ಇಒ ಪಿ. ಹೇಮಾವತಿ, ಬದಾಮಿ ಇಒ ಮಲ್ಲಿಕಾರ್ಜುನ ಬಡಿಗೇರ ಇದ್ದರು. ಕೆಲ ಗ್ರಾಮದಲ್ಲಿ ಗ್ರಾಮ ಒನ್‌ ಕೇಂದ್ರದವರು ಸರ್ಕಾರದ ಸೌಲಭ್ಯಕ್ಕೆ ಆನ್‌ಲೈನ್ ಮೂಲಕ ಅರ್ಜಿ ಹಾಕಲು ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ನಿಗದಿಪಡಿಸಿದ ಹಣ ಮಾತ್ರ ಪಡೆಯಬೇಕೆಂದು ನಿರ್ದೇಶನ ನೀಡಿ ಎಂದು ಸೂಚಿಸಿದ ಅವರು ಹೆಚ್ಚಿನ ಹಣ ಪಡೆದರೆ ಅಂತಹ ಕೇಂದ್ರಗಳ ವಿರುದ್ಧ ಕ್ರಮ ಜರುಗಿಸಿ. ಮುಂಬರುವ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪ ಮಾಡುತ್ತೇನೆ.

-ಜಿ.ಟಿ. ಪಾಟೀಲ ಶಾಸಕರು

Share this article