ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧಿಸಲು ನಿವೃತ್ತ ಜಿಲ್ಲಾಧಿಕಾರಿ ಶ್ರೀರಂಗಯ್ಯ ಸಿದ್ಧತೆ

KannadaprabhaNewsNetwork | Published : Feb 29, 2024 2:01 AM

ಸಾರಾಂಶ

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸ್ಪರ್ಧೆಯ ಬಗ್ಗೆ ಹಿಂಜರಿಕೆ ವ್ಯಕ್ತಪಡಿಸಿದ ನಂತರ ಚಿತ್ರದುರ್ಗದಲ್ಲೀಗ ಆಕಾಂಕ್ಷಿಗಳ ಪಟ್ಟಿ ಮತ್ತಷ್ಟು ಉದ್ದವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ಬಿಜೆಪಿಯಲ್ಲಿಯೂ ತೀವ್ರ ಪೈಪೋಟಿ ಆರಂಭವಾಗಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸ್ಪರ್ಧೆಯ ಬಗ್ಗೆ ಹಿಂಜರಿಕೆ ಮನೋಭಾವ ವ್ಯಕ್ತಪಡಿಸಿದ ನಂತರ ಆಕಾಂಕ್ಷಿಗಳ ಪಟ್ಟಿ ಮತ್ತಷ್ಟು ಉದ್ದವಾಗುತ್ತಿದೆ. ಇದೀಗ ನಿವೃತ್ತ ಜಿಲ್ಲಾಧಿಕಾರಿ ಶ್ರೀರಂಗಯ್ಯ ಬಿಜೆಪಿಯಿಂದ ಕಣಕ್ಕಿಳಿಯುವ ಉತ್ಸುಕತೆ ತೋರಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾವಿನ್ನು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿಲ್ಲ. ಬಿಜೆಪಿ ಕೆಲ ಮುಖಂಡರೊಂದಿಗೆ ಚರ್ಚಿಸಿದ್ದೇನೆ. ಟಿಕೆಟ್ ನೀಡುವಂತೆ ಬಿಜೆಪಿ ನಾಯಕರ ಭೇಟಿಯಾಗಿ ಮನವಿ ಮಾಡಿಕೊಳ್ಳಲಾಗುವುದೆಂದರು.

2015ರಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿಕಾರ್ಯನಿರ್ವಹಿಸಿದ್ದೇನೆ. ಹಾಗಾಗಿ ಜಿಲ್ಲೆಯ ಜನ ಸಮುದಾಯದೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದೇನೆ. ಈ ಪ್ರದೇಶದ ಅಭಿವೃದ್ಧಿಗೆ ನನ್ನದೆ ಆದ ದೃಷ್ಟಿ ಹೊಂದಿದ್ದೇನೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸ್ಪರ್ಧೆಯಿಂದ ಹಿಂದೆ ಸರಿಯುವ ಇಂಗಿತ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ರಾಜಕೀಯ ಪ್ರವೇಶಕ್ಕೆ ನಿರ್ಧರಿಸಿದ್ದೇನೆ. ಹಾಗೊಂದು ವೇಳೆ ಟಿಕೆಟ್ ಅಂತಿಮವಾದಲ್ಲಿ ಮತದಾರರ ಭೇಟಿಯಾಗುವುದಾಗಿ ಶ್ರೀರಂಗಯ್ಯ ಹೇಳಿದರು.

ಕಳೆದ ವಿಧಾನಸಭೆ ಚುನಾವಣೆ ವೇಳೆ ಹೊಳಲ್ಕೆರೆ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯುವ ಆಸೆ ಹೊಂದಿದ್ದೆ. ಅಲ್ಲಿಯೂ ಕೂಡಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈವರೆಗೆ ಬಿಜೆಪಿ‌ ಸೇರಿಲ್ಲ, ಪಕ್ಷದ ನಾಯಕರೊಂದಿಗೆ ಚರ್ಚಿಸಿ‌ ತೀರ್ಮಾನ ಕೈಗೊಳ್ಳುವೆ. ಟಿಕೆಟ್ ಸಿಗದಿದ್ದರೆ ಪಾರ್ಟಿ ಸೂಚಿಸಿದಂತೆ ನಡೆಯುವುದಾಗಿ ಶ್ರೀರಂಗಯ್ಯ ಹೇಳಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ 8 ಕ್ಷೇತ್ರಗಳ ಪರಿಚಯವಿದ್ದು, ಇಲ್ಲಿನ ಆಗು ಹೋಗುಗಳನ್ನು ತುಂಬಾ ಹತ್ತಿರದಿಂದ ತಿಳಿದಿದ್ದೇನೆ. ಕ್ಷೇತ್ರದಲ್ಲಿ ಮಾದಿಗ (ಎಡಗೈ) ಸಮುದಾಯದ ಸುಮಾರು 4 ರಿಂದ 5 ಲಕ್ಷ ಮತದಾರರಿದ್ದಾರೆ. ಈಗಾಗಲೇ ಒಂದು ಬಾರಿ ಕ್ಷೇತ್ರದ ನಾಯಕರನ್ನು ಭೇಟಿ ಮಾಡಿದ್ದೇನೆ. ಮುಂದಿನ ದಿನದಲ್ಲಿ ಅವರನ್ನು ಭೇಟಿ ಮಾಡುವುದರ ಮೂಲಕ ಜಿಲ್ಲಾಧಿಕಾರಿಯಾಗಿದ್ದಾಗ ನಾನು ಮಾಡಿದ ವಿವಿಧ ರೀತಿಯ ಕೆಲಸಗಳನ್ನು ಅವರಿಗೆ ತಿಳಿಸಿಕೊಡಲಾಗುವುದು ಎಂದು ಶ್ರೀರಂಗಯ್ಯ ತಿಳಿಸಿದರು.

ನಾನು ಸ್ಥಳಿಯನಾಗಿದ್ದೇನೆ. ಹೊರಗಿನಿಂದ ಬಂದವನಲ್ಲ. ಗಡಿ ಪ್ರದೇಶದಲ್ಲಿ ನಮ್ಮ ಪರಿವಾರ ಇದೆ ಎಂದು ಪ್ರಶ್ನೆಯೊಂದಕ್ಕೆ ಶ್ರೀರಂಗಯ್ಯ ಉತ್ತರಿಸಿದರು. ತಾಲೂಕು ಪಂಚಾಯಿ ಮಾಜಿ ಸದಸ್ಯ ಮೋಹನ್, ಗ್ರಾಮ ಪಂಚಾಯಿತಿ ಸದಸ್ಯ ರಂಗಯ್ಯ ಉಪಸ್ಥಿತರಿದ್ದರು.

Share this article