ಕನ್ನಡಪ್ರಭ ವಾರ್ತೆ ಪಾಂಡವಪುರ
ಐಎಎಸ್ ಅಧಿಕಾರಿಯಾಗಿ ಸರ್ಕಾರ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿರಾದ ತಾಲೂಕಿನ ಸುಪುತ್ರ ಸೀತಾಪುರ ಗ್ರಾಮದ ಎಸ್.ಆರ್.ಉಮಾಶಂಕರ್ ಅವರಿಗೆ ಮೇ 27ರಂದು ತಾಲೂಕಿನ ನಾಗರಿಕರ ಪರ ಪಾಂಡವ ಬಳಗದ ವತಿಯಿಂದ ತವರಿನ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಎಂ.ಎಸ್.ಮರಿಸ್ವಾಮೀಗೌಡ ತಿಳಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಆರ್.ಉಮಾಶಂಕರ್ ಅವರು ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಕಾರ್ಯವದರ್ಶಿ, ಅಪರ ಮುಖ್ಯಕಾರ್ಯರ್ಶಿಗಳಾಗಿ ತಮ್ಮ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕಿ ಇಲ್ಲದಂತೆ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.
ತಾಲೂಕಿನವರಾದ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿಯಾದ ಇ.ಎಸ್.ವೆಂಕಟರಾಮಯ್ಯ, ನಾಗರಾತ್ನ, ಇಂದರೇಶ್, ಸುಂಕಾತೊಣ್ಣೂರು ಗ್ರಾಮದ ಕಾಳೇಗೌಡರು ಸೇರಿದಂತೆ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಅಂತಹ ಮಹಾನ್ ನಾಯಕರ ಸಾಲಿಗೆ ಎಸ್.ಆರ್.ಉಮಾಶಂಕರ್ ಅವರು ಸೇರ್ಪಡೆಗೊಂಡಿದ್ದಾರೆ ಎಂದರು.ಇಂತಹ ಪ್ರಾಮಾಣಿಕ, ದಕ್ಷ ಅಧಿಕಾರಿ ಎಸ್.ಆರ್.ಉಮಾಶಂಕರ್ ಅವರಿಗೆ ತವರಿನ ಸನ್ಮಾನ ಮಾಡುವ ಮೂಲಕ ಗೌರವಿಸಬೇಕೆಂದು ತೀರ್ಮಾನಿಸಿ ತಾಲೂಕಿನ ಎಲ್ಲಾ ನಾಗರಿಕರ ಪರ ಉತ್ತಮ ಪಾಂಡವ ಉಮಾಶಂಕರ್ ಎಂಬ ಬಿರುದಿನೊಂದಿಗೆ ಮೇ 27ರ ಸಂಜೆ ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಸನ್ಮಾನಿಸಲು ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸಮಾರಂಭಕ್ಕೂ ಮುನ್ನ ಸನ್ಮಾನಿತರನ್ನು ಪಟ್ಟಣದ ಐದು ದೀಪವೃತ್ತದಿಂದ ಅದ್ಧೂರಿ ಮೆರವಣಿಗೆ ಮೂಲಕ ಕರೆತಂದು ಅಭಿನಂಧಿಸಲಾಗುವುದು. ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪ್ರಾಸ್ತಾವಿಕ ನುಡಿಯಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ವಹಿಸಲಿದ್ದಾರೆ. ಅಭಿನಂದಿತರ ಕುರಿತು ಪ್ರೊ.ಎಂ.ಕೃಷ್ಣೇಗೌಡ ಮಾತನಾಡುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರೊ.ಎಚ್.ಆರ್.ತಿಮ್ಮೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸ್ವಾಮಿ, ಎಸ್.ನಾರಾಯಣಗೌಡ, ಹಿರೇಮರಳಿ ರಮೇಶ್, ಬಿ.ಎಸ್.ಜಯರಾಮು, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಚಂದ್ರಶೇಖರಯ್ಯ, ಬಿಜೆಪಿ ಧನಂಜಯ್, ಎಸ್.ಆರ್.ರಮೇಶ್, ಗುಣಶೇಖರ, ಎಚ್.ಆರ್.ಧನ್ಯಕುಮಾರ್, ಎಚ್.ಎನ್.ಮಂಜುನಾಥ್ ಸೇರಿದಂತೆ ಹಲವರು ಇದ್ದರು.