ಪ್ರತಿಯೊಬ್ಬರಿಗೂ ಕಲಿಕೆಯ ಹಸಿವಿರಬೇಕು: ನ್ಯಾ. ಟಿ.ಜಿ. ಶಿವಶಂಕರೇಗೌಡ ಸಲಹೆ

KannadaprabhaNewsNetwork | Published : May 26, 2024 1:32 AM

ಸಾರಾಂಶ

ಬಹುತೇಕ ಉನ್ನತ ಹುದ್ದೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಗ್ರಾಮಾಂತರ ಪ್ರದೇಶದವರೇ ಇದ್ದಾರೆ. ರಾಜ್ಯ ಹೈಕೋರ್ಟಿನ 50 ನ್ಯಾಯಮೂರ್ತಿಗಳ ಪೈಕಿ 46 ಮಂದಿ ಕನ್ನಡ ಹಾಗೂ ಗ್ರಾಮೀಣ ಹಿನ್ನೆಲೆವುಳ್ಳವರು. ವಿದ್ವತ್‌ ಭಾಷೆಯಿಂದ ಬರುವುದಿಲ್ಲ, ಕಲಿಕೆಯಿಂದ ಬರುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರತಿಯೊಬ್ಬರಿಗೂ ಕಲಿಕೆಯ ಹಸಿವಿರಬೇಕು ಎಂದು ರಾಜ್ಯ ಹೈಕೋರ್ಟಿನ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಹೇಳಿದರು.

ಮೈಸೂರು ವಿವಿ ಕಾನೂನು ವಿಭಾಗದ ಪ್ರಾಧ್ಯಾಪಕ ಹುದ್ದೆಯಿಂದ ವಯೋನಿವೃತ್ತಿ ಹೊಂದುತ್ತಿರುವ ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ.ಸಿ. ಬಸವರಾಜು ಅವರನ್ನು ಮಾನಸ ಗಂಗೋತ್ರಿಯ ಸೆನೆಟ್‌ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿ, ಬಡ ಕುಟುಂಬದಿಂದ ಬಂದ ಬಸವರಾಜು ಹಾಗೂ ರೈತ ಕುಟುಂಬದಿಂದ ಬಂದ ನನ್ನನ್ನು ಹಸಿವು ಇಲ್ಲಿವರೆಗೆ ತಂದು ನಿಲ್ಲಿಸಿದೆ ಎಂದರು.

ಬಹುತೇಕ ಉನ್ನತ ಹುದ್ದೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಗ್ರಾಮಾಂತರ ಪ್ರದೇಶದವರೇ ಇದ್ದಾರೆ. ರಾಜ್ಯ ಹೈಕೋರ್ಟಿನ 50 ನ್ಯಾಯಮೂರ್ತಿಗಳ ಪೈಕಿ 46 ಮಂದಿ ಕನ್ನಡ ಹಾಗೂ ಗ್ರಾಮೀಣ ಹಿನ್ನೆಲೆವುಳ್ಳವರು. ವಿದ್ವತ್‌ ಭಾಷೆಯಿಂದ ಬರುವುದಿಲ್ಲ, ಕಲಿಕೆಯಿಂದ ಬರುತ್ತದೆ. ಎಂದು ಅವರು ಹೇಳಿದರು.

ನಾನು ಕೇವಲ 375 ರು. ಶುಲ್ಕದಲ್ಲಿ ಬಿ.ಎಸ್ಸಿ, 1.500 ರು. ಶುಲ್ಕದಲ್ಲಿ ಎಂ.ಎಸ್ಸಿ, 2100 ರು. ಶುಲ್ಕದಲ್ಲಿ ಎಲ್‌ಎಲ್‌ಬಿ ಪಾಸು ಮಾಡಿದವನು. ಓದುವಾಗ ಹಣದ ತೊಂದರೆ ಇದ್ದಿದ್ದರಿಂದ ಮೈಸೂರಿನ ಇಂದ್ರಭವನ್‌ ಹೋಟೆಲ್‌ನಲ್ಲಿ 333 ರು. ವೇತನ, ಎರಡು ಹೊತ್ತು ಊಟದ ಲೆಕ್ಕ ಬರೆಯುವ ಕೆಲಸಕ್ಕೆ ಸೇರಿಕೊಂಡಿದ್ದೆ ಎಂದರು.

ಒಂದು ಕಾಲಕ್ಕೆ ಭಾರತದಿಂದ ಪ್ರತಿಭಾ ಪಲಾಯನವಾಯಿತು.ಈಗ ಅಮೆರಿಕಾ, ಲಂಡನ್‌ ಮೊದಲಾದ ಕಡೆ ಇರುವ ಎರಡು- ಮೂರನೇ ತಲೆಮಾರಿನವರು ವಾಪಸ್‌ ಭಾರತಕ್ಕೆ ಬರಲು ಬಯಸುತ್ತಿದ್ದಾರೆ. ಯಾರೇ ಆಗಲಿ ನಾವು ಬಂದ ಮೂಲವನ್ನು ಮರೆಯಬಾರದು ಎಂದರು.

ಅಂಬೇಡ್ಕರ್‌ ಅವರ ಸಂವಿಧಾನದಿಂದಾಗಿ ಮೀಸಲಾತಿ ಸಿಕ್ಕಿದೆ. ಆದ್ದರಿಂದಲೇ ನಾನು ಜಾತಿ ಪ್ರಮಾಣಪತ್ರ ನೀಡಲು ಎಂ.ಎಸ್ಸಿ ಓದಲು ಸಹಾಯವಾಯಿತು. ಹೀಗಾಗಿ ಅಂಬೇಡ್ಕರ್‌ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ಭವಿಷ್ಯದ ಬಗ್ಗೆ ತುಂಬಾ ಆಲೋಚನೆ ಮಾಡಿ, ಸಂವಿಧಾನದಲ್ಲಿ ಎಲ್ಲಾ ಅಂಶಗಳನ್ನು ಸೇರಿಸಿದ್ದಾರೆ. ಹೀಗಾಗಿ ಅವರೊಬ್ಬ ಆಧುನಿಕ ನಾಸ್ಟರ್ ಡಾಮ್‌ ಎನ್ನಬಹುದು ಎಂದರು.

ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಮಾತನಾಡಿ, ಬಡತನದಲ್ಲೂ ಪ್ರತಿಭೆ ಅರಳುತ್ತದೆ ಎಂಬುದಕ್ಕೆ ಎರಡು ಬಾರಿ ನೊಬೆಲ್‌ ಪ್ರಶಸ್ತಿ ಪಡೆದ ಮೇಡಂ ಕ್ಯೂರಿ ನಿದರ್ಶನ ಎಂದರು.

ಪ್ರೊ.ಸಿ. ಬಸವರಾಜು ಅವರು ನಾನು ಕುಲಪತಿಯಾಗಿದ್ದಾಗ ಕುಲಸಚಿವರಾಗಿ ಮೈವಿವಿ ಶತಮಾನತ್ಸವ ಯಶಸ್ಸಿಗೆ ಹೆಗಲುಕೊಟ್ಟು ದುಡಿದರು. ಕಾನೂನು ವಿಭಾಗ ಟೂರಿಂಗ್‌ ಟಾಕೀಸ್‌ನಂತೆ ಇತ್ತು. ನಾನು ಹೇಳಿದ ನಂತರ ಗಂಗೋತ್ರಿಯಲ್ಲಿ ಪ್ರತ್ಯೇಕ ಕಾನೂನು ಶಾಲೆ ಆರಂಭಕ್ಕೆ ಕ್ರಮ ವಹಿಸಿದರು ಎಂದು ಅವರು ಶ್ಲಾಘಿಸಿದರು.

ಅಭಿನಂದನಾ ಭಾಷಣ ಮಾಡಿದ ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ, ಕುಲಪತಿ ಹುದ್ದೆಯಿಂದ ಪ್ರೊ.ಸಿ. ಬಸವರಾಜು ನಿವೃತ್ತಿ ಆಗುವ ವೇಳೆಗೆ ಅವರ ಸಾಧನೆಯನ್ನು ದಾಖಲಿಸುವ ಅಭಿಂದನಾ ಗ್ರಂಥ ಹೊರತರುವಂತೆ ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಮಾತನಾಡಿ, ಕುಲಸಚಿವರಾಗಿ ಪ್ರೊ.ಬಿ. ಬಸವರಾಜು ಉತ್ತಮವಾಗಿ ಕೆಲಸ ಮಾಡಿದರು. ಪ್ರೌಢಶಾಲಾ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಉತ್ತೇಜನ ನೀಡಿದರು ಎಂದರು.

ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಪ್ರೊ.ಸಿ. ಬಸವರಾಜು ಮಾತನಾಡಿ, ತಳ ಸಮುದಾಯದಿಂದ ಬಂದ ನನಗೆ ನೋವು- ಹಸಿವು ಶಿಕ್ಷಣ ಮುಖ್ಯ ಎಂಬುದನ್ನು ಕಲಿಸಿತು. ಡಾ.ಬಿ.ಆರ್. ಅಂಬೇಡ್ಕರ್‌ ಹಾಗೂ ಬಸವಣ್ಣ ಇಬ್ಬರೂ ಸಮ ಸಮಾಜ ನಿರ್ಮಾಣಕ್ಕೆ ಹೋರಾಟ ಮಾಡಿದವರು. ಬಸವಣ್ಣನವರ ವಚನಗಳು ತಮ್ಮ ಮೇಲೆ ಅಪಾರ ಪ್ರಭಾವ ಬೀರಿವೆ ಎಂದರು.

ಅಂಬೇಡ್ಕರ್‌ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂದು ಕರೆ ನೀಡಿದರು. ಎಲ್ಲರೂ ಪರಿಪೂರ್ಣ ಶಿಕ್ಷಣ ಪಡೆದರು ಸಂಘಙಟನೆ ಹಾಗೂ ಹೋರಾಟದ ಅಗತ್ಯಬಾರದು ಎನಿಸುತ್ತದೆ. ವಿದ್ಯೆಯ ಜೊತೆಗೆ ಸಂಸ್ಕೃತಿಯನ್ನು ಕಲಿಯಬೇಕು. ವಿಧೇಯತೆ, ವಿನಮ್ರತೆ, ಸಹಬಾಳ್ವೆ ಸಮಸಮಾಜದ ಬಯಕೆ ಇರಬೇಕು. ದ್ವೇಷ. ತಾರತಮ್ಯ ಬಿಡಬೇಕು. ಈವೆರಡರು ಇರುವ ಕಡೆ ಪ್ರಗತಿ ಇರುವುದಿಲ್ಲ ಎಂದು ಅವರು ಹೇಳಿದರು.

ನಾನು ಎಷ್ಟೇ ನೋವು ಬಂದರೂ ವಿಚಲಿತನಾಗಲಿಲ್ಲ. ವಿದ್ಯೆ ಹಾಗೂ ವೃತ್ತಿಯ ಕಹಿ ಘಟನೆಗಳನ್ನು ಆಶೀರ್ವಾದ ಎಂದು ತಿಳಿದು ಓದುವ ಹಸಿವಿನಿಂದಾಗಿ ಇಲ್ಲಿಯವರೆಗೆ ಬಂದಿದ್ದೇನೆ ಎಂದು ಭಾವುಕರಾದರು.

ಕಾರ್ಯಕ್ರಮುದ ಸಾನ್ನಿಧ್ಯ ವಹಿಸಿದ್ದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿಭಾವಂತರಲ್ಲಿ ಗ್ರಾಮೀಣ ಪ್ರದೇಶದಿಂದ ಬಂದವರೇ ಹೆಚ್ಚು ಇರುತ್ತಾರೆ. ಶ್ರದ್ಧೆ, ಪ್ರಾಮಾಣಿಕತೆ, ವಿಶ್ವಾಸದಿಂದ ಕೆಲಸ ಮಾಡಿದರೆ ಅತ್ಯುನ್ನತ ಸ್ಥಾನ ತಲಪಲು ಸಾಧ್ಯ ಎಂದರು.

ಸಮಸ್ಯೆಗಳು ಬರುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸುವ ಗುಣ ಬೆಳೆಸಿಕೊಂಡರೆ ಜೀವನ ವಿಕಾಸವಾಗುತ್ತದೆ ಎಂದ ಅವರು ಹೇಳಿದರು.

ಪ್ರತಿಯೊಬ್ಬರಿಗೂ ಜ್ಞಾನದ ಹಸಿವು ಇರಬೇಕು. ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ ಎಂದ ಅವರು, ಮೈವಿವಿಯಲ್ಲಿ ಪ್ರೊ.ಕೆ.ಎಸ್‌. ರಂಗಪ್ಪ- ಪ್ರೊ.ಸಿ. ಬಸವರಾಜು ಕುಲಪತಿ- ಕುಲಸಚಿವರಾಗಿ ಶತಮಾನೋತ್ಸವ ಸಂದರ್ಭದಲ್ಲಿ ಅತ್ಯುತ್ತಮವಾಗ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಪ್ರತಿಯೊಬ್ಬರೂ ಕಾನೂನು ಅಧ್ಯಯನ ಮಾಡುವುದು ಮುಖ್ಯ. ಕಾನೂನು ಬಗ್ಗೆ ತಿಳಿದುಕೊಳ್ಳಬೇಕು. ಏಕೆಂದರೆ ವಕೀಲರು, ನ್ಯಾಯಾಧೀಶರು ಒಳ್ಳೆಯ ತೀರ್ಮಾನಗಳನ್ನು ನೀಡಿದರೆ ಜನರಿಗೂ ಕೂಡ ಒಳ್ಳೆಯವಾಗುತ್ತದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸಮಾಜ ಸೇವಕ ಮ. ವೆಂಕಟರಾಮ್‌, ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಆರ್‌. ವೇಣುಗೋಪಾಲ್‌, ಭೋಪಾಲ್‌ ರಾಷ್ಟ್ರೀಯ ಕಾನೂನು ವಿವಿಯ ವಿಶ್ರಾಂತ ಕುಲಪತಿ ಪ್ರೊ.ವಿ. ವಿಜಯಕುಮಾರ್‌ ಮಾತನಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಇದ್ದರು.

ಕಾನೂನ ವಿದ್ಯಾರ್ಥಮಿ ದಿವ್ಯಶ್ರೀ ಪ್ರಾರ್ಥಿಸಿದರು. ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರಾದ ಬೆಂಗಳೂರು ವಿವೇಕಾನಂದ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಬಿ. ಕೆಂಪೇಗೌಡ ಸ್ವಾಗತಿಸಿದರು. ಅಧ್ಯಕ್ಷರಾದ ಮೈವಿವಿ ಕಾನೂನು ನಿಕಾಯದ ಡೀನ್‌ ಪ್ರೊ.ಎಂ.ಎಸ್‌. ಬೆಂಜಮಿನ್‌ ಸನ್ಮಾನಿತರನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿಯಾದ ಬೆಂಗಳೂರು ವಿವಿ ಕಾನೂನು ಕಾಲೇಜಿನ ಪ್ರಾಧ್ಯಾಪಕ ಡಾ.ಎನ್‌. ಸತೀಶ್‌ ಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ.ಜೆ.ಲೋಹಿತ್‌ ಕಾರ್ಯಕ್ರಮ ನಿರೂಪಿಸಿದರು. ಶಿವಮೊಗ್ಗ ಸಿಬಿಆರ್‌ ನ್ಯಾಷನಲ್‌ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಿ.ಸಿ. ಬಸಪ್ಪ ವಂದಿಸಿದರು.---

ಬಾಕ್ಸ್‌..

ಮೂವರು ಗುರುಗಳಿಗೆ ಮೊದಲು ಸನ್ಮಾನ

25 ಎಂವೈಎಸ್ 15

ಪ್ರೊ.ವಸುಧಾ, ಪ್ರೊ.ಕೆ.ಸಿ. ಬೆಳ್ಳಿಯಪ್ಪ, ಪ್ರೊ.ಟಿ. ರಾಮಕೃಷ್ಣ ಅವರಿಗೆ ಸನ್ಮಾನ.

---

ಕರ್ನಾಟಕ ಕಾನೂನು ವಿವಿ ಕುಲಪತಿ ಪ್ರೊ.ಸಿ. ಬಸವರಾಜು ಅವರು ತಮಗೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸುವುದಕ್ಕಿಂತ ಮೊದಲು ತಾವು ಈ ಹಂತಕ್ಕೆ ಬರಲು ಕಾರಣರಾದ ಮೂವರು ಗುರುಗಳನ್ನು ಗೌರವಿಸಿದ್ದು ವಿಶೇಷ.

ಮಾನಸ ಗಂಗೋತ್ರಿ ಇಂಗ್ಲಿಷ್‌ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ, ರಾಜೀವ್‌ ಗಾಂಧಿ ಕೇಂದ್ರೀಯ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಸಿ. ಬೆಳ್ಳಿಯಪ್ಪ, ಶಾರದಾವಿಲಾಸ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ.ವಸುಧಾ ಹಾಗೂ ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯ ನಿವೃತ್ತ ಪ್ರಾಧ್ಯಾಪಕ ಡಾ.ಟಿ. ರಾಮಕೃಷ್ಣ ಸನ್ಮಾನಿತರಾದ ಗುರುಗಳು.

ಪ್ರೊ.ಸಿ. ಬಸವರಾಜು ಅವರು ಇಂಗ್ಲಿಷ್‌ ಎಂಎ ಓದಿ ಪ್ರಾಧ್ಯಾಪಕರಾಗ ಬಯಸಿದ್ದರು. ಆದರೆ ಶಾರದಾವಿಲಾಸ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, ಮೈವಿವಿಯಿಂದ ಎಲ್‌ಎಂಎಲ್‌ಎಂ, ಪಿಎಚ್‌.ಡಿ ಪಡೆದರು. ನಂತರ ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆ, ಕರ್ನಾಟಕ ವಿವಿ ನಂತರ ಮೈಸೂರು ವಿವಿಯಲ್ಲಿ ಕಾನೂನು ಉಪನ್ಯಾಸ, ಪ್ರವಾಚಕ, ಪ್ರಾಧ್ಯಾಪಕರಾದರು. ನಂತರ ಕಾನೂನು ನಿಕಾಯದ ಡೀನ್‌, ಸಂಗೀತ ವಿವಿ ಪರೀಕ್ಷಾಂಗ ಕುಲಸಚಿವ , ಮೈಸೂರು ವಿವಿ ಕುಲಸಚಿವ, ಪ್ರಭಾರ ಕುಲಪತಿಯಾದರು. ಪ್ರಸ್ತುತ ಕರ್ನಾಟಕ ಕಾನೂನು ವಿವಿಯ ಕುಲಪತಿಯಾಗಿದ್ದಾರೆ.ಇನ್ನೂ ಎರಡು ಕಾಲು ವರ್ಷ ಸೇವಾವಧಿ ಇದೆ.

---

ಮೈವಿವಿಯಲ್ಲಿ ಚಿನ್ನದ ಪದಕ ಸ್ಥಾಪನೆ

ಫೋಟೋ 25 ಎಂವೈಎಸ್ 13

ಸಂವಿಧಾನದ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಘಟಿಕೋತ್ಸವ ಸಂದರ್ಭದಲ್ಲಿ ಪ್ರೊ.ಸಿ. ಬಸವರಾಜು ಅವರ ಹೆಸರಿನಲ್ಲಿ ಚಿನ್ನದ ಪದಕ ಪ್ರದಾನ ಮಾಡಲು ಅಭಿನಂದನಾ ಸಮಿತಿಯ 1.05 ಲಕ್ಷ ರು.ಚೆಕ್‌ ಅನ್ನು ಮೈಸೂರು ವಿವಿಗೆ ಹಸ್ತಾಂತರಿಸಿತು.

ಅಭಿನಂದನಾ ಸಮಿತಿಯಲ್ಲಿ ಡಾ.ಎಂ.ಎಸ್‌. ಬೆಂಜಮಿನ್‌, ಡಾ.ಕೆ.ಬಿ. ಕೆಂಪೇಗೌಡ, ಡಾ.ಎನ್‌. ಸತೀಶ್‌ ಗೌಡ, ಡಾ.ಎಂ.ಎಸ್‌. ಸುಧಾದೇವಿ, ಡಾ.ಜಿ.ಎಸ್. ಯತೀಶ್‌, ಡಾ.ಎಸ್.ಎಸ್‌. ಜಾಹ್ನವಿ, ಪ್ರೊ.ಕೆ.ಎಸ್‌. ರಘುನಾಥ್‌, ಡಾ.ಬಿ.ಸಿ. ಬಸಪ್ಪ, ಪ್ರೊ.ಕೆ.ಎನ್‌. ವಿಶ್ವನಾಥ್‌, ಡಾ.ಎನ್.ಎಸ್‌. ಅಂಬೇಡ್ಕರ್‌, ಡಾ.ಎನ್‌.ಡಿ. ಗೌಡ, ಡಾ.ಜಿ.ಎಸ್‌. ಸಂಜೀವೇಗೌಡ, ಡಾ.ಬಿ.ಪಿ. ಮಹೇಶ್‌, ಎಂ. ಮಹದೇವಯ್ಯ, ಎನ್.ಆರ್. ಲೋಕೇಶ್‌, ಪ್ರೊ.ಶಿವಾನಂದ ಸಿಂಧನಕೇರಿ, ಜಿ.ಕೆ. ಕೃಷ್ಣಪ್ಪ, ಡಾ.ಕೆ.ಸಿ. ಮಹದೇಶ್‌, ಡಾ.ಎಸ್‌. ದಿನೇಶ್‌, ಡಾ.ವಿ. ಶ್ರೀನಿವಾಸ, ಡಾ.ಎಚ್.ಎಲ್. ಯೋಗಮಾಲಾ, ಪ್ರೊ.ಉಮಾ ಮಹೇಶ್‌ ಸತ್ಯನಾರಾಯಣ, ಡಾ.ಎನ್‌. ವಾಣಿಶ್ರೀ, ಡಾ.ಆರ್‌. ಗಿರೀಶ್‌ ಕುಮಾರ್‌, ಐ.ಬಿ. ಬಿರಾದಾರ, ಡಾ.ಪಿ. ದೀಪು, ಡಾ.ಕೆ.ಸಿ. ಗಿರೀಶ್, ಕೆ. ಸೌಮ್ಯಾ, ಉಮಾ ಸಂಧ್ಯಾ, ಕೆ.ಎಸ್‌. ಜಯಕುಮಾರ್‌, ಡಾ.ಎಸ್‌.ಕೆ. ಮಮತಾ, ಡಾ.ಎ.ಎನ್‌. ವಿಜಯ್‌, ಡಾ.ಸಿ. ಸಂದೀಪ್‌, ಡಾ.ಎಂ. ಪಾರ್ವತಿ, ಆರ್‌. ಮೋಹನ್‌, ಕೆ.ಎಸ್‌. ಪುಷ್ಪಾ ಇದ್ದರು.

Share this article