ಬಿಜೆಪಿಗೆ ಮರಳಿದ್ದು ತವರು ಮನೆಗೆ ಬಂದಷ್ಟೇ ಸಂತೋಷವಾಗಿದೆ: ಲಕ್ಷ್ಮಿ ಅರುಣಾ

KannadaprabhaNewsNetwork | Published : Apr 5, 2024 1:02 AM

ಸಾರಾಂಶ

ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಮಂತ್ರಿಯಾಗಬೇಕು. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕಾಗಿದೆ.

ಬಳ್ಳಾರಿ: ಬಿಜೆಪಿಗೆ ಮರಳಿ ಬಂದಿರುವುದು ನನ್ನ ತವರು ಮನೆಗೆ ಬಂದಷ್ಟೇ ಸಂತೋಷವಾಗಿದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಹೇಳಿದರು.

ನಗರದ ವಾಜಪೇಯಿ ಬಡಾವಣೆಯಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಸೋಲಿನ ಬಗ್ಗೆ ನಾನು ಮಾತನಾಡುವುದಿಲ್ಲ. ಅದೊಂದು ರಾಜಕೀಯ ಕಹಿ ಘಟನೆಯಾಗಿದೆ. ಈ ಹಿಂದಿನದನ್ನು ಮರೆತು ಪಕ್ಷವನ್ನು ಸಂಘಟಿಸುವ ಕೆಲಸ ಮಾಡುವೆ. ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರನ್ನು ಗೆಲ್ಲಿಸಲು ಶ್ರಮಿಸುವೆ ಎಂದರು.

ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಮಂತ್ರಿಯಾಗಬೇಕು. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಹಾಗೂ ಪಕ್ಷದ ಅಭ್ಯರ್ಥಿಯನ್ನು ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸುವುದು ಬಹಳ ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಶ್ರಮಿಸೋಣ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ಮಾತನಾಡಿದರು.

ಪಕ್ಷದ ಮುಖಂಡರಾದ ಶ್ರೀನಿವಾಸ ರೆಡ್ಡಿ, ಎಸ್‌.ಗುರುಲಿಂಗನಗೌಡ, ಗೋನಾಳ್ ರಾಜಶೇಖರಗೌಡ, ಮುರಹರಗೌಡ ಗೋನಾಳ್, ದಮ್ಮೂರು ಶೇಖರ್, ಗುತ್ತಿಗನೂರು ವಿರುಪಾಕ್ಷಗೌಡ, ವಿಜಯಲಕ್ಷ್ಮಿ, ಶಿವಕೃಷ್ಣ, ಜೆಡಿಎಸ್‌ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೆಆರ್‌ಪಿಪಿ ಪಕ್ಷ ಬಿಜೆಪಿಯೊಂದಿಗೆ ವಿಲೀನದ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಆಗಮಿಸಿದ ಲಕ್ಷ್ಮಿ ಅರುಣಾ ಅವರನ್ನು ಪಕ್ಷದ ಮುಖಂಡರು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಆರತಿ ಬೆಳಗಿ ಸ್ವಾಗತಿಸಿಕೊಂಡರು.

ಪಕ್ಷ ಗೆಲ್ಲಿಸುವುದಷ್ಟೇ ಮುಖ್ಯ:

ಈ ಹಿಂದೆ ಪಕ್ಷ ಸ್ಥಾಪಿಸಿದ್ದು ಸೇರಿದಂತೆ ಯಾವುದೇ ವಿಚಾರಗಳನ್ನು ಮಾತನಾಡಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಷ್ಟೇ ಮುಖ್ಯವಾಗಿದ್ದು ಪಕ್ಷ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದು ಲಕ್ಷ್ಮಿ ಅರುಣಾ ಹೇಳಿದರು.

ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರ ಜೊತೆ ಭಿನ್ನಾಭಿಪ್ರಾಯ ಕುರಿತು ಕೇಳಿದ ಪ್ರಶ್ನೆಗೆ, ಭಿನ್ನಾಭಿಪ್ರಾಯ ಇದೆ ಎಂದು ಹೇಳಿದವರು ಯಾರು ? ಎಂದು ಮರು ಪ್ರಶ್ನಿಸಿದರು.

Share this article