ಮಾಲೂರು ತಹಸೀಲ್ದಾರ್‌ ವಿರುದ್ಧ ಗರಂ ಆದ ಕಂದಾಯ ಸಚಿವ ಕೃಷ್ಣ ಬೈರೇಗೌಡ

KannadaprabhaNewsNetwork | Published : Nov 16, 2024 12:30 AM

ಸಾರಾಂಶ

ಮಾಲೂರಿನಲ್ಲಿ ಪ್ರಗತಿ ಪರಿಶೀಲನೆ ನಡೆಸಲು ಜಿಲ್ಲೆಯ ತಹಸೀಲ್ದಾರ್‌ ಜತೆ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಗುರುವಾರ ನಡೆಸಿದ ವಿಡಿಯೋ ಕಾನ್ಫೆರೆನ್ಸ್‌ ಸಭೆ ಹಮ್ಮಿಕೊಂಡಿದ್ದರು

ಕನ್ನಡಪ್ರಭ ವಾರ್ತೆ ಮಾಲೂರು

ಬಗರ್‌ ಹುಕುಂ ಹಾಗೂ ಭೂ ಮಂಜೂರಾತಿ ನಿರ್ವಹಣೆ ಬಗ್ಗೆ ಒಂದೂವರೆ ತಿಂಗಳಿಂದ ಪ್ರತಿ ಸಭೆಯಲ್ಲೂ ಎಚರಿಕೆ ನೀಡುತ್ತಿದ್ದರೂ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ಕೆ. ರಮೇಶ್‌ ಅವರಿಗೆ ನೋಟಿಸ್‌ ನೀಡುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.

ಇಲ್ಲಿನ ಇಲಾಖೆ ಪ್ರಗತಿ ಪರಿಶೀಲನೆ ನಡೆಸಲು ಜಿಲ್ಲೆಯ ತಹಸೀಲ್ದಾರ್‌ ಜತೆ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಗುರುವಾರ ನಡೆಸಿದ ವಿಡಿಯೋ ಕಾನ್ಫೆರೆನ್ಸ್‌ ಸಭೆ ಹಮ್ಮಿಕೊಂಡಿದ್ದರು. ಸಭೆಗೆ ಅರ್ಧ ಗಂಟೆ ತಡವಾಗಿ ಆಗಮಿಸಿದ ತಹಸೀಲ್ದಾರ್‌ ರಮೇಶ್‌ ಅವರು ಸಚಿವರು ಕೇಳಿದ ಮಾಲೂರು ತಾಲೂಕು ಕಂದಾಯ ಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಲು ತಡಬಡಸಿ ನೆಪ ಹೇಳಲು ಪ್ರಾರಂಭಿಸಿದಾಗ ಸಿಟ್ಟಿಗೆದ್ದ ಸಚಿವರು ಶಟಪ್‌ ಅಂದರಲ್ಲದೇ ಕಳೆ 3 ತಿಂಗಳಿಂದ ನಡೆಸಿದ ಪ್ರತಿ ಸಭೆಯಲ್ಲೂ ಪ್ರಗತಿ ಬಗ್ಗೆ ವರದಿ ಕೇಳಿದರೂ ಇದುವರೆಗೂ ವರದಿ ನೀಡಲು ಆಗದೆ ನೆಪ ಹೇಳುತ್ತಿದ್ದೀರಿ ಎಂದು ನೋಟಿಸ್‌ ನೀಡಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಅವರಿಗೆ ಸೂಚಿಸಿದರು.

ಅರ್ಹರು ಸಲ್ಲಿಸಿದ ಅರ್ಜಿಗಳು ವಿಲೇವಾರಿ ಆಗಿದ್ದೇಯಾ, ಎಷ್ಟು ಜನಕ್ಕೆ ಭೂ ಮಂಜೂರು ಮಾಡಲಾಗಿದೆ ಎಂಬ ಸಚಿವರ ಪ್ರಶ್ನೆಗೆ 51 ಜನರ ಅರ್ಜಿಗಳು ವಿಲೇವಾರಿಯಾಗಿದ್ದು, ವಿಎ ಜತೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಕೇವಲ 51 ಅರ್ಜಿ ವಿಲೇವಾರಿಯಾಗಿದೆ ಎಂಬ ಉತ್ತರಕ್ಕೆ ಮತ್ತಷ್ಟು ಗರಂ ಆದ ಕೃಷ್ಣಭೈರೇಗೌಡರು ಕಂದಾಯ ಇಲಾಖೆಯಲ್ಲಿದ್ದೀರಾ ಅಥವಾ ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೀರಾ. ಸಭೆಗೆ ಸರಿಯಾದ ವೇಳೆಗೆ ಹಾಜರಾಗದೆ, ಅಧಿಕ ಪ್ರಸಂಗತನ ಮಾಡುತ್ತೀರಾ ಎಂದರು.

ಕೋಲಾರಕ್ಕೆ ಬಂದಾಗ ಎಷ್ಟು ಹಾಗೂ ಏನು ಕೆಲಸ ಮುಗಿಸಬೇಕಂತ ಹೇಳಿ ಬಂದಿದ್ದೀನೆ. ಸ್ಥಳ ಪರಿಶೀಲನೆ ಬಿಟ್ಟು ಬೇರೆ ಕೆಲಸ ಆಗಿಲ್ಲ. ಒಳ್ಳೆ ಮಾತಿಗೆ ಕಿಂಚಿಂತು ಮಾರ್ಯಾದೆ ಇಲ್ಲ. ಕಳೆದ ಸಭೆಯಲ್ಲಿ ಏನು ಸೂಚನೆ ನೀಡಿದ್ದೇ ಎಂಬುಂದು ಜ್ಞಾಪಕ ಇದ್ದೇಯಾ ಎಂದು ಪ್ರಶ್ನಿಸಿದಾಗ ತಹಸೀಲ್ದಾರ್‌ ಅವರ ನಿರುತ್ತರಕ್ಕೆ ಸಚಿವರು ವಯಸ್ಸಿಗೆ ಗೌರವ ನೀಡಿದರೆ ಉಳಿಸಿಕೊಳ್ಳುವುದು ಗೊತ್ತಿಲ್ಲ. ಇಂತವರೊಡನೆ ವಿಡಿಯೋ ಕಾನ್ಫೆರೆನ್ಸ್‌ ಮಾಡಲು ನನಗೇನು ಬೇರೆ ಕೆಲಸವಿಲ್ಲವೇ ಎಂದರಲ್ಲದೆ ಈ ತಕ್ಷಣ ಅವರಿಗೆ ನೋಟಿಸ್‌ ನೀಡುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದರು.

Share this article