ಕನಿಷ್ಠ ವೇತನ ಕರಡು ಅಧಿಸೂಚನೆ ಪರಿಷ್ಕರಿಸಿ : ಬಿ.ಗೋಪಿನಾಥ್

KannadaprabhaNewsNetwork |  
Published : Apr 26, 2025, 12:50 AM ISTUpdated : Apr 26, 2025, 12:37 PM IST
ಪೋಟೋ: 25ಎಸ್ಎಂಜಿಕೆಪಿ01ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಹೊರಡಿಸಿರುವ ಕನಿಷ್ಠ ವೇತನಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆ ಪರಿಷ್ಕರಣೆ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

  ಸರ್ಕಾರವು ಸಣ್ಣ, ಅತಿ ಸಣ್ಣ, ಮಧ್ಯಮ ಕೈಗಾರಿಕೆ ವಲಯಗಳ ಅಸ್ತಿತ್ವ ಕಾಪಾಡಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಒತ್ತಾಯಿಸಿದರು.

ಶಿವಮೊಗ್ಗ: ಕಾರ್ಮಿಕ ಇಲಾಖೆ ಹೊರಡಿಸಿರುವ ಕನಿಷ್ಠ ವೇತನಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ಕೂಡಲೇ ಪರಿಷ್ಕರಿಸುವುದರ ಮೂಲಕ ಸರ್ಕಾರವು ಸಣ್ಣ, ಅತಿ ಸಣ್ಣ, ಮಧ್ಯಮ ಕೈಗಾರಿಕೆ ವಲಯಗಳ ಅಸ್ತಿತ್ವ ಕಾಪಾಡಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಒತ್ತಾಯಿಸಿದರು.ಇಲ್ಲಿನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಹೊರಡಿಸಿರುವ ಕನಿಷ್ಠ ವೇತನಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆ ಪರಿಷ್ಕರಣೆ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಕನಿಷ್ಠ ವೇತನದ ಕರಡು ಅಧಿಸೂಚನೆಯಿಂದ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೊಡೆತ ಬೀಳಲಿದೆ ಎಂದು ತಿಳಿಸಿದರು.

ಅಧಿಸೂಚನೆ ಪರಿಣಾಮ ಕೈಗಾರಿಕಾ ಉದ್ಯಮಿಗಳು ಕಾರ್ಮಿಕರ ಸಂಖ್ಯೆ ಕಡಿಮೆಗೊಳಿಸಿ ಯಂತ್ರೋಪಕರಣಗಳಿಗೆ ಹೆಚ್ಚು ಅವಲಂಬಿತರಾಗುತ್ತಾರೆ. ಅತಿ ಕಡಿಮೆ ಲಾಭದಲ್ಲಿ ಕೈಗಾರಿಕೆ ನಡೆಸುತ್ತಿದ್ದಾರೆ, ಕೈಗಾರಿಕೆಗಳು ನೆರೆ ರಾಜ್ಯಗಳಿಗೆ ವಲಸೆ ಹೋಗುವ ಅಪಾಯವೂ ಸಹ ಇದೆ. ಸರ್ಕಾರ ಎಂಎಸ್‌ಎಂಇ ಮತ್ತು ದೊಡ್ಡ ಕೈಗಾರಿಕೆಗಳಿಗೆ ಪ್ರತ್ಯೇಕವಾಗಿ ಭಿನ್ನ ಕನಿಷ್ಠ ವೇತನ ಸ್ಲಾಬ್ ಪರಿಚಯಿಸಬೇಕು ಹಾಗೂ ಕಾರ್ಮಿಕ ವೇತನ ತರ್ಕಬದ್ಧವಾಗಿ ನಿಗದಿಪಡಿಸಲು ತಜ್ಞರ ಸಮಿತಿ ನೇಮಿಸಬೇಕು ಎಂದು ಒತ್ತಾಯಿಸಿದರು.

ಕನಿಷ್ಠ ವೇತನ ಪ್ರಸ್ತಾಪದಿಂದ ರಾಜ್ಯದ ಆರೂವರೆ ಲಕ್ಷ ಅತಿ ಸಣ್ಣ, ಸಣ್ಣ ಮಧ್ಯಮ ಹಂತದ ಕೈಗಾರಿಕೆಗಳಿಗೆ ಹೊಡೆತ ಬೀಳಲಿದೆ. ಕರ್ನಾಟಕದಲ್ಲಿ ತಯಾರಾಗುವ ಉತ್ಪನ್ನದ ಮೇಲೆ ದರ ಸಹಜವಾಗಿ ಹೆಚ್ಚಾಗಲಿದೆ. ಇದರಿಂದ ನೆರೆ ರಾಜ್ಯದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಎಂಎಸ್‌ಎಂಇ ಕ್ಷೇತ್ರದ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ಹೇಳಿದರು.

ಕೈಗಾರಿಕೆಗಳು ಕಾರ್ಮಿಕರಿಗೆ ಸರಿಯಾದ ವೇತನ ಪಾವತಿಸಲು ಬದ್ಧವಾಗಿವೆ. ಕೇಂದ್ರ ಸರ್ಕಾರವು ಸಹ ಏಕಪ್ರಕಾರದ ಕನಿಷ್ಠ ವೇತನವನ್ನು ದೇಶದಲ್ಲಿ ಜಾರಿಗೆ ತರಬೇಕು. ಎಂಎಸ್‌ಎಂಇಗಳಿಗೆ ಸಬ್ಸಿಡಿಗಳನ್ನು, ಸರಳಿಕೃತ ಕಾಯ್ದೆಗಳನ್ನು ಜಾರಿಗೊಳಿಸಬೇಕು ಎಂದರು.

ಎಫ್‌ಕೆಸಿಸಿಐ ಕಾರ್ಮಿಕ ಕಾನೂನು ಸಮಿತಿ ಮುಖ್ಯಸ್ಥ ಪಿ.ಸಿ.ರಾವ್ ಮಾತನಾಡಿ, ಕರಡು ಅಧಿಸೂಚನೆ ಜಾರಿಯಿಂದ ವಾಣಿಜ್ಯ ಮತ್ತು ಕೈಗಾರಿಕೆಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ವಿವರಿಸಿ, ಸರ್ಕಾರಕ್ಕೆ ಅಹವಾಲು ತಲುಪಿಸಲು ಕಾನೂನು ಹೋರಾಟ ಮಾಡುವ ಬಗ್ಗೆ ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಉದ್ಯಮಿಯಾಗಿ ವೇತನ ಹೆಚ್ಚಳದ ಕರಡು ಅಧಿಸೂಚನೆಯ ಸಾಧ್ಯತೆಗಳನ್ನು ಅರಿತಿದ್ದು, ಕೈಗಾರಿಕಾ ಸಂಘದ ನ್ಯಾಯೋಚಿತ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ್, ಮಾಜಿ ಅಧ್ಯಕ್ಷ ಎನ್.ಗೋಪಿನಾಥ್, ಡಿ.ಎಂ.ಶಂಕರಪ್ಪ, ನಿರ್ದೇಶಕರಾದ ಗಣೇಶ ಎಂ.ಅಂಗಡಿ, ವಸಂತ್ ಹೋಬಳಿದಾರ್, ಜಿ.ವಿ.ಕಿರಣ್ ಕುಮಾರ್, ಎಚ್.ಎಸ್.ನರೇಂದ್ರ, ಎಸ್‌.ಪಿ.ಶಂಕರ್, ವಿ.ಕೆ.ಜೈನ್, ಲಕ್ಷ್ಮೀದೇವಿ ಗೋಪಿನಾಥ್, ಸಹನಾ ಸುಭಾಷ್, ಪ್ರದೀಪ್ ಎಲಿ, ಶರತ್, ಕೆ.ವಿನೋದ್, ಕಾರ್ಯಕಾರಿ ಕಾರ್ಯದರ್ಶಿ ಎಚ್.ಎಚ್.ಕಮಲಾಕ್ಷರಪ್ಪ, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಜಿಲ್ಲಾ ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಶ್ವೇಶರಾಯ, ಜಿಲ್ಲಾ ಔಷಧ ವ್ಯಾಪಾರ ಸಂಘದ ಅಧ್ಯಕ್ಷ ಮಧಕರ್ ಶೆಟ್ಟಿ, ವಿತರಕರ ಸಂಘದ ಅಧ್ಯಕ್ಷ ದೇವರಾಜ್, ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಎಫ್‌ಕೆಸಿಸಿಐ ಡೈರೆಕ್ಟರ್ ವೀರೇಂದ್ರ ಕಾಮತ್ ಮತ್ತಿತರರು ಇದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ