ರಾಜ್ಯಾದ್ಯಂತ 667 ಹಿಂದೂ ರುದ್ರಭೂಮಿಗಳ ಪುನಶ್ಚೇತನ: ಡಾ.ಎಲ್.ಎಚ್. ಮಂಜುನಾಥ

KannadaprabhaNewsNetwork | Published : Mar 10, 2024 1:48 AM

ಸಾರಾಂಶ

ಸ್ಥಳೀಯರು ಶ್ರಮದಾನ, ಆರ್ಥಿಕ ನೆರವು, ಸಮಯ ದಾನದಿಂದ ರುದ್ರಭೂಮಿ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಾರೆ. ಕ್ಷೇತ್ರದಿಂದ ಅಗತ್ಯ ಪರಿಕರಗಳಾದ ಶವದಹನ ಛೇಂಬರ್ ಮತ್ತು ಇತರ ಉಪಕರಣಗಳನ್ನು ಅಳವಡಿಸಿಕೊಳ್ಳಲು 2.50 ಲಕ್ಷ ರು. ವರೆಗೆ ನೆರವನ್ನು ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರಾರಂಭಿಸಲಾಗಿರುವ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾರ್ಯಕ್ರಮದನ್ವಯ ಇದುವರೆಗೆ ರಾಜ್ಯಾದ್ಯಂತ 667 ಹಿಂದೂ ರುದ್ರಭೂಮಿಗಳನ್ನು ಪುನಶ್ಚೇತನಗೊಳಿಸಲಾಗಿದೆ ಎಂದು ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧೀಕಾರಿ ಡಾ.ಎಲ್.ಎಚ್. ಮಂಜುನಾಥ ಹೇಳಿದ್ದಾರೆ.ಗ್ರಾಮಗಳಲ್ಲಿ ಶವ ಸಂಸ್ಕಾರಕ್ಕಾಗಿ ಪ್ರತ್ಯೇಕ ರುದ್ರಭೂಮಿ ಸ್ಥಳವನ್ನು ಸರ್ಕಾರದ ವತಿಯಿಂದ ಕಾಪಿಟ್ಟರೂ, ರುದ್ರಭೂಮಿಗಳು ಅವಗಣನೆಗೆ ತುತ್ತಾಗಿ, ಶವ ಸಂಸ್ಕಾರದ ವ್ಯವಸ್ಥೆ ಇಲ್ಲದ ಅನೇಕ ಗ್ರಾಮಗಳು ನಮ್ಮ ರಾಜ್ಯದಲ್ಲಿವೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಹಿಂದೂ ಧರ್ಮೀಯರ ಶವ ಸಂಸ್ಕಾರವನ್ನು ವ್ಯವಸ್ಥಿತವಾಗಿ ನಡೆಸುವಂತೆ ಪ್ರತಿ ಗ್ರಾಮದಲ್ಲಿಯೂ ಸೂಕ್ತ ಪರಿಕರಗಳನ್ನು ಕಲ್ಪಿಸುವ ದೃಷ್ಟಿಯಿಂದ ಹಿಂದೂ ರುದ್ರಭೂಮಿ ಯೋಜನೆಯನ್ನು ಪ್ರಾರಂಭಿಸಿದರು.

ಸ್ಥಳೀಯವಾಗಿ ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿಯನ್ನು ಪ್ರಾರಂಭಿಸಿ, ನಿಗದಿತವಾಗಿರುವ ರುದ್ರಭೂಮಿಯಲ್ಲಿ ಶವ ದಹನಕ್ಕೆ ಬೇಕಾಗುವ ಸೌಲಭ್ಯವನ್ನು ಸಮಿತಿಯ ವತಿಯಿಂದ ಮಾಡಿಸುವ ಮತ್ತು ನಿರಂತರ ನಿರ್ವಹಣೆ ಮಾಡುವ ಆಶಯವನ್ನು ಈ ಕಾರ್ಯಕ್ರಮದಲ್ಲಿ ಹೊಂದಲಾಗಿದೆ.

1992ರಲ್ಲಿ ಪ್ರಾರಂಭಗೊಂಡ ಈ ಕಾರ್ಯಕ್ರಮ ಕ್ರಮೇಣ ಜನಪ್ರಿಯವಾಗಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಸ್ಥಳೀಯರನ್ನು ಸಂಘಟಿಸಿಕೊಂಡು ತಮ್ಮೂರಿನ ರುದ್ರಭೂಮಿಯನ್ನು ಪುನಶ್ಚೇತನಗೊಳಿಸುವ ಮಹಾತ್ಕಾರ್ಯ ಇದೀಗ ಬಲಗೊಂಡಿದೆ. ಸ್ಥಳೀಯರು ಶ್ರಮದಾನ, ಆರ್ಥಿಕ ನೆರವು, ಸಮಯ ದಾನದಿಂದ ರುದ್ರಭೂಮಿ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಾರೆ. ಕ್ಷೇತ್ರದಿಂದ ಅಗತ್ಯ ಪರಿಕರಗಳಾದ ಶವದಹನ ಛೇಂಬರ್ ಮತ್ತು ಇತರ ಉಪಕರಣಗಳನ್ನು ಅಳವಡಿಸಿಕೊಳ್ಳಲು 2.50 ಲಕ್ಷ ರು. ವರೆಗೆ ನೆರವನ್ನು ನೀಡಲಾಗುತ್ತದೆ.

ಕ್ಷೇತ್ರದ ನೆರವಿನಿಂದ ಖರೀದಿಸಲಾಗುವ ದಹನ ಚೌಕಿಯನ್ನು ವಿಶೇಷ ಕಬ್ಬಿಣದಿಂದ ಮಾಡಲಾಗಿದ್ದು, 1.2 ಟನ್ ಭಾರ ಇರುತ್ತದೆ. ಈ ಛೇಂಬರನ್ನು ಒಳಬದಿಯಿಂದ ವಿಶೇಷವಾಗಿ ತಯಾರಿಸಿದ ಅಲಾಯ್ ಕಾಸ್ಟ್ ಅಯರ್ನ್ ಪ್ಲೇಟ್‍ಗಳಿಂದ ಮುಚ್ಚಲಾಗಿದೆ. ಇದು 1,200 ಕೆ.ಜಿ. ಭಾರವಾಗಿದ್ದು, 74 ಇಂಚು ಉದ್ದ, 39 ಇಂಚು ಅಗಲ ಹಾಗೂ 31 ಇಂಚು ಎತ್ತರವಾಗಿದೆ. ಅಡಿ ಭಾಗದ ಗ್ರೇಟಿಂಗ್ಸ್ ಮೇಲೆ 2 ಸಾಲು ಸೌದೆ, ಅದರ ಮೇಲೆ ಶವ, ಅದರ ಮೇಲೆ ಮೂರು ಸಾಲು ಸೌದೆ ಇಡಲು ಹೆಚ್ಚೆಂದರೆ 250 ರಿಂದ 300 ಕೆ.ಜಿ. ಕಟ್ಟಿಗೆ ಸಾಕು. (ಸ್ಥಳೀಯ ಕ್ರಮದಲ್ಲಿ 800 ರಿಂದ 1,000 ಕೆ.ಜಿ. ಕಟ್ಟಿಗೆ ಬೇಕಾಗುತ್ತದೆ). ಸೌದೆಯ ಉಳಿತಾಯ ಮತ್ತು ಸ್ವಚ್ಛತೆಯನ್ನು ಕಾಪಾಡಲು ಇದು ಸಹಕಾರಿಯಾಗಿದೆ.

ಈ ದಹನ ಚೌಕಿಯನ್ನು ಮಳೆ, ಬಿಸಿಲು, ಗಾಳಿಯಿಂದ ರಕ್ಷಿಸಲು ಸೂಕ್ತ ಮಾಡು ನಿರ್ಮಿಸಿ, ಕಟ್ಟಿಗೆ ದಾಸ್ತಾನು, ಸ್ನಾನ, ಶೌಚದ ವ್ಯವಸ್ಥೆ, ಪೂಜಾ ಕೊಠಡಿಯ ವ್ಯವಸ್ಥೆ ಮುಂತಾದವುಗಳನ್ನು ಕೂಡ ಈ ಯೋಜನೆಯಲ್ಲಿ ಅಳವಡಿಸಲಾಗುತ್ತದೆ.

ಇದುವರೆಗೆ ಈ ಕಾರ್ಯಕ್ರಮದನ್ವಯ ಹೆಗ್ಗಡೆಯವರು ರಾಜ್ಯದಾದ್ಯಂತ 667 ರುದ್ರಭೂಮಿಗಳಿಗೆ 8.91 ಕೋಟಿ ರು. ಮೊತ್ತವನ್ನು ವಿನಿಯೋಗಿಸಿದ್ದಾರೆ. ಸ್ಥಳೀಯ ಸಹಭಾಗಿತ್ವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಸುಮಾರು 59.29 ಕೋಟಿ ರು. ಮೊತ್ತದ ಆರ್ಥಿಕ ವಿನಿಯೋಗವನ್ನು ಈ ಕಾರ್ಯಕ್ರಮದಲ್ಲಿ ಮಾಡಲಾಗಿದೆ.ಪ್ರಸ್ತುತ ಸಾಲಿನಲ್ಲಿಯೂ ಸುಮಾರು 45 ರುದ್ರಭೂಮಿಗಳ ಪುನಶ್ಚೇತನ ಕಾರ್ಯಕ್ಕೆ ಪೂರಕ ನೆರವನ್ನು ನೀಡಲಾಗಿದೆ ಎಂದು ಡಾ.ಎಲ್.ಎಚ್.ಮಂಜುನಾಥ್‍ ತಿಳಿಸಿದ್ದಾರೆ.

Share this article