ಕನ್ನಡಪ್ರಭ ವಾರ್ತೆ ಕಾರಟಗಿ
ತಾಲೂಕಿನ ಸಿದ್ದಾಪುರ ಸೇರಿದಂತೆ ವಿವಿಧಡೆ ಗುರುವಾರ ಸುರಿದ ಮಳೆಗೆ ರೈತರ ಭತ್ತದ ಬೆಳೆ ನೀರು ಪಾಲಾಗಿದೆ. ಕೆಲವೆಡೆ ಕಟಾವು ಮಾಡಿ ಒಣಗಲು ಹಾಕಿದ್ದ ಬೆಳೆಯೂ ಸುರಿದ ಮಳೆಗೆ ನೀರು ಪಾಲಾಗಿದೆ.ಗ್ರಾಮದಲ್ಲಿ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಸುರಿದ ಮಳೆಗೆ ಕಟಾವು ಮಾಡಿ ಒಣಗಿಸಲು ಹಾಕಿದ್ದ ಭತ್ತದ ಫಸಲು ಹರಿವ ಮಳೆಯ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದ್ದು, ಕಣ್ಣಿರಲ್ಲಿ ಕೈತೊಳೆಯುವಂತಾಗಿದೆ.
ಉತ್ತಮ ಭತ್ತದ ಫಸಲು ಸಿದ್ದಾಪುರ ಸೀಮೆ ಸೇರಿದಂತೆ ತಾಲೂಕಿನಾದ್ಯಂತ ಕಟಾವು ನಡೆದು ಕಣ, ರಾಸಿ ಕಾರ್ಯ ಚುರುಕಾಗಿತ್ತು. ಗುಂಡೂರು, ಉಳೇನೂರು, ಬೆನ್ನೂರು ಈಳಿಗನೂರು ಸೇರಿದಂತೆ ಸುತ್ತಲಿನ ನೂರಾರು ರೈತರು ಕಟಾವು ಮಾಡಿದ ಭತ್ತವನ್ನು ಸಿದ್ದಾಪುರ, ಕಾರಟಗಿ ವಿಶೇಷ ಎಪಿಎಂಸಿ ಆವರಣದ ಹಾಗೂ ರಸ್ತೆ ಬದಿ ಮತ್ತು ಖಾಲಿ ಇರುವ ಸ್ಥಳಗಳಲ್ಲಿ ಹಾಕ್ತಿ ಒಣಗಿಸುವ ಕೆಲಸದಲ್ಲಿ ರೈತರು ನಿರತರಾಗಿದ್ದರು. ಆದರೆ, ಗುರುವಾರ ಮಧ್ಯಾಹ್ನ ಸುರಿದ ಮಳೆಗೆ ಒಣಗಿ ಹಾಕಿದ್ದ ಭತ್ತ ನೀರು ಪಾಲಾಗಿದೆ. ಬೆಳಗ್ಗೆಯಿಂದ ಮೋಡಕವಿದ ವಾತಾವರಣವಿದ್ದರೂ ಸ್ವಲ್ಪ ಬಿಸಿಲು ಬಿದ್ದು ರೈತರನ್ನು ಉಸಿರು ಬಿಡುವಂತೆ ಮಾಡಿತ್ತು. ಆದರೆ ಮಧ್ಯಾಹ್ನ ಏಕಾಏಕೀ ವರುಣನ ಅವಕೃಪೆ ಭತ್ತದ ರೈತರ ಮೇಲೆ ಬಿದ್ದಿದೆ. ಅರ್ಧ ಗಂಟೆಗೂ ಹೆಚ್ಚು ಸುರಿದ ಭಾರಿ ಮಳೆಯಿಂದಾಗಿ ಭತ್ತದ ಕಾಳು ರಸ್ತೆ, ಮೈದಾನದಲ್ಲಿ ಹರಿದು ನೀರಿಗೆ ಕೊಚ್ಚಿಕೊಂಡು ಹೋಗಿದೆ.ಕೆಲವು ಕಡೆ ರೈತರು ತಮ್ಮ ಫಸಲನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟರು. ಪ್ಲಾಸ್ಟಿಕ್ ಹೊದಿಗೆ ಹಾಕಿ ರಕ್ಷಣೆ ಮಾಡುವ ಪ್ರಯತ್ನ ಮಾಡಿದರು. ಆದರೆ ಬಹುತೇಕರ ಫಸಲು ನೀರು ಪಾಲಾಗಿದೆ.
ಮಳೆಯ ನೀರಿನಲ್ಲಿ ಬೆಳೆ ಹರಿಯುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದ ರೈತರು ಮಳೆಯಲ್ಲಿ ಏನೂ ಮಾಡಲಾಗದೆ ಸಂಕಟಪಟ್ಟುಕೊಂಡು ಕಣ್ಣೀರು ಹಾಕುವಂತಾಯಿತು. ತಾಲೂಕಿನ ವಿವಿಧಡೆ ಖಾಲಿ ಇರುವ ಸ್ಥಳಗಳಲ್ಲಿ ಒಣಗಿಸಲು ಹಾಕಿದ್ದ ಭತ್ತ ಮತ್ತು ಭತ್ತ ರಾಶಿಗಳ ಸುತ್ತ ನೀರು ಸುತ್ತುವರಿದ ಪರಿಣಾಮ ಭತ್ತದ ರಾಶಿಗಳು ನೀರಲ್ಲಿ ತೆಲಾಡುತ್ತಿದ್ದವು. ಇನ್ನು ನೀರಲ್ಲಿ ನೆನೆದ ಭತ್ತ ಬೆಳಕು ಹರಿಯುವುದರೊಳಗೆ ಮೊಳಕೆಯೊಡುವ ಆತಂಕ ರೈತರಿಗೆ ಶುರುವಾಗಿದೆ.ವಿಶೇಷ ಪರಿಹಾರ ಕೊಡಿಸಿ:
ಭತ್ತ ಕಟಾವು ಮಾಡಿದ ಮೇಲೆ ನಷ್ಟವಾದರೆ ಯಾವ ಪರಿಹಾರವೂ ಬರಲ್ಲ. ಕೂಡಲೇ ಸಚಿವ ಶಿವರಾಜ್ ತಂಗಡಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಈ ವಿಷಯ ಪ್ರಸ್ತಾಪಿಸಿ ಈ ರೀತಿಯ ಭತ್ತ ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪರಿಹಾರ ಕೊಡಿಸಿ ರೈತರಿಗೆ ಆತ್ಮ ಸ್ಥೈರ್ಯ ತುಂಬುವಂತಹ ಕೆಲಸ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ.