ಕೃತಿ ಬಿಡುಗಡೆಗೊಳಿಸಿ ಮಾತು
‘ಒಂದೆಲೆ ಮೇಲಿನ ಕಾಡು’ ಪ್ರಬಂಧ ಸಂಕಲನದಲ್ಲಿ ಸಮೃದ್ಧ ಅನುಭವ ಹಾಗೂ ಮೋಹಕ ಭಾಷೆಯ ಸೊಗಡಿದೆ ಎಂದು ಹಿರಿಯ ಲೇಖಕರಾದ ಬಾನು ಮುಷ್ತಾಕ್ ಹೇಳಿದರು.
ಹಿರಿಯ ಲೇಖಕರಾದ ಚ.ಹ.ರಘುನಾಥ್ ಕೃತಿಯ ಚಮತ್ಕಾರಿಕ ಶೀರ್ಷಿಕೆ, ಲೇಖಕಿಯ ಮೊದಲ ಕೃತಿಯಲ್ಲಿ ಕಾಣುವ ಮುಗ್ಧತೆ ಹಾಗೂ ಭಾಷೆಯ ಮೋಹಕತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಡಿನ ಜೀವವೈವಿಧ್ಯ, ಊರು ಮತ್ತು ಕಾಡು, ಸಮಾಜದಲ್ಲಿ ಕಾಡಿನ ರೂಪ ಹೀಗೆ ಮೂರು ತೆರನಾಗಿ ಕೃತಿಯನ್ನು ನೋಡಬಹುದು. ಊರಿನ ಸಾಂಸ್ಕೃತಿಕ ಆಯಾಮ ಹಾಗೂ ಸಕಲೇಶಪುರದ ಬೀದಿಯಿಂದ ಲೇಖಕಿ ಕಂಡ ಕಾಡಿನ ಕುರಿತು ಮಾತನಾಡಿದರು. ಕೃತಿಯಲ್ಲಿ ಕಾಣಸಿಗುವ ಕಾಡು ಇಂದಿನ ಕಾಡಲ್ಲ ಎನ್ನುತ್ತ ಬದಲಾವಣೆಯ ಕುರಿತು ವಿಷಾದ ವ್ಯಕ್ತಪಡಿಸಿ, ನೆನಪುಗಳು ಹಾಗೂ ವರ್ತಮಾನದ ಸ್ವರೂಪದ ಚಿತ್ರಣ ನೀಡಿ ಕೃತಿಯ ಸೂಕ್ಷ್ಮ ಒಳನೋಟವನ್ನು ಕಟ್ಟಿಕೊಟ್ಟರು.
ಜಗತ್ತು ನೋಡಿದ ಸಕಲೇಶಪುರವನ್ನು ತನ್ನ ಜಗತ್ತನ್ನಾಗಿಸಿಕೊಂಡು ಕಟ್ಟಿಕೊಟ್ಟ ಚೊಚ್ಚಲ ಪುಸ್ತಕ ‘ಒಂದೆಲೆ ಮೇಲಿನ ಕಾಡು’ ಕೃತಿ ರೂಪುಗೊಂಡ ಬಗೆಯನ್ನು ಹೇಳಿದರು. ಲೇಖಕಿ ಸ.ವೆಂ.ಪೂರ್ಣಿಮಾ. ನೋವು-ನಲಿವುಗಳೇ ಕಾವ್ಯ-ಕಥೆಗಳಾಗುವ ಪರಿಯನ್ನು ತೆರೆದಿಟ್ಟರು.
ಕೃತಿ ಬಿಡುಗಡೆ ಮಾಡಿದ ಲೇಖಕಿಗೆ ಅವರ ಸ್ನೇಹವಲಯದಿಂದ ಅಭಿನಂದಿಸಿ, ಹಾರೈಸಲಾಯಿತು. ‘ಕಡವೆ ಬೇಟೆ ತಂಡ’ ಹಾಗೂ ‘ಉಲಿವಾಲ ಸ್ಕೂಲ್ ಆಫ್ ಡ್ರಾಮಾ’ ವತಿಯಿಂದ ಕಾರ್ತಿಕ್ ಭಾರದ್ವಾಜ್ ರವರು ಕೊಳಲುವಾದನ ನುಡಿಸುವ ಮೂಲಕ ಹಾರೈಸಿದರು. ರಂಗಭೂಮಿ ಕಲಾವಿದೆ ರತ್ನಾರವರು ಗಾಯನದ ಮೂಲಕ ಶುಭ ಹಾರೈಸಿದರು. ಕಲಾಪ್ರಿಯ ಮಂಜು, ಶೋಭಾ ಹಾಗೂ ಯಶೋದಾರವರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟವು.