ಕನ್ನಡಪ್ರಭ ವಾರ್ತೆ ದೇವದುರ್ಗ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟವೂ ಕೂಡ ಪ್ರಬಲ ಅಸ್ತ್ರವಾಗಿದೆ. ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾದಾಗ, ದೌರ್ಜನ್ಯ, ಅತ್ಯಾಚಾರ, ಅನ್ಯಾಯವಾದಂತಹ ಘಟನೆಗಳಲ್ಲಿ ಹೋರಾಟದ ಮೂಲಕ ನ್ಯಾಯ ಪಡೆಯಲು ಸಂವಿಧಾನ ನೀಡಿದ ಅಮೂಲ್ಯ ಕೊಡುಗೆಯಾಗಿದೆ ಎಂದು ಬಹುಜನ ಚಿಂತಕ ಹನುಮಂತ ಮನ್ನಾಪೂರಿ ತಿಳಿಸಿದರು.ತಾಲೂಕಿನ ದೇವರಗುಡ್ಡ ಗ್ರಾಮದ ಶ್ರೀ ಶರಣ ಅಮಾತೇಶ್ವರ ಪ್ರೌಢ ಶಾಲೆಯಲ್ಲಿ ಗಬ್ಬೂರಿನ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ(ರಿ) ಶನಿವಾರ ಆಯೋಜಿಸಲಾದ ಸಂವಿಧಾನ ಕಡೆ ವಿದ್ಯಾರ್ಥಿಗಳ ನಡೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮಪಾಲು ಎನ್ನುತ್ತಲೇ ಎಲ್ಲ ವರ್ಗದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಿದ ಜಗತ್ತಿನ ಗಮನ ಸೆಳೆಯುವ ಸಂವಿಧಾನ ನಮ್ಮದಾಗಿದೆ ಎಂದರು.
ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಮಹಾದೇವಪ್ಪ ತಾತ ಅವರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಬಸವರಾಜ ಪಾಟೀಲ್ ನಾಗರಾಳ, ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಡಳಿತ ವ್ಯವಸ್ಥಾಪಕ ಶಂಕರಲಿಂಗಯ್ಯ ತಾತನವರು ಮಾತನಾಡಿದರು.ಸಂವಿಧಾನ ಕುರಿತು ಏರ್ಪಡಿಸಲಾದ ಪ್ರಬಂಧ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ದೀಪಾ, ರೇವತಿ, ಫಾತೀಮಾ, ನಾಗರತ್ನ, ಸರೋಜ, ದೇವಮ್ಮ, ಸಾಬಮ್ಮ, ಶಂಕರ್, ಮಮತಾ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಹಾಗೂ ಶಾಲಾ ಗ್ರಂಥಾಲಯಕ್ಕೆ ಸಂವಿಧಾನ ಪೀಠಿಕೆ, ಸಂವಿಧಾನ ಓದು, ಮಕ್ಕಳಿಗಾಗಿ ಸಂವಿಧಾನ, ಭಾರತದ ಸಂವಿಧಾನ ಪುಸ್ತಕಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆ ಆಡಳಿತಾಧಿಕಾರಿ ನರಸಿಂಗರಾವ್ ಸರಕೀಲ್, ಮುಖಂಡ ಹೊನ್ನಪ್ಪ ಭಂಡಾರಿ, ಭೀಮರಾಯ ಭಂಡಾರಿ, ಅಶೋಕ ಬಲ್ಲಿದವ ಉಪಸ್ಥಿತರಿದ್ದು, ಶಿಕ್ಷಕರಾದ ಜಯಶೀಲಾ, ಸಲ್ಮಾಬೇಗಂ, ಮಹೆಬೂಬ, ಹೊನ್ನಯ್ಯ, ಕೃಷ್ಣದತ್ತ, ಶಂಕರಲಿಂಗ, ಪರಸಪ್ಪ ಗುಡಿಮನಿ, ಮಂಜುನಾಥ ಪಾಲ್ಗೊಂಡಿದ್ದರು. ಸುಜಾತ ವಾಲಿ ಸುಷ್ಮಾ ಹಿರೇಮಠ, ಹನುಮಂತಿ ನಿರೂಪಿಸಿದರು.