ಕನ್ನಡಪ್ರಭ ವಾರ್ತೆ ಶಹಾಪುರ
ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ 12ನೇ ಶತಮಾನದಲ್ಲಿ ದೇಶಕ್ಕೆ ಸಮಾನತೆ ಸಾರಿದ್ದಾರೆ. ಅದನ್ನು ಮನಗಂಡ ಸರ್ಕಾರ ಸಾಮಾಜಿಕ ಹರಿಕಾರ ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕ ಎಂಬ ಘೋಷಣೆ ಮಾಡಿದ್ದು, ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಬಲ ನೀಡಿದಂತಾಗಿದೆ. ಪ್ರತಿಯೊಬ್ಬರು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.ನಗರದ ನಗರಸಭೆ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರವನ್ನು ಅನಾಾವರಣಗೊಳಿಸಿ ಅವರು ಮಾತನಾಡಿದರು.
ನಾಡಿನ ಅನೇಕ ಮಠಾಧೀಶರು ಬಸವಣ್ಣನವರನ್ನು ಸಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವಂತೆ ಸಲಹೆಗೆ ಸ್ಪಂದಿಸಿದ ಸರ್ಕಾರ, ಸಾಮಾಜಿಕ ನ್ಯಾಯದ ಮೊದಲ ಹರಿಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸಚಿವ ಸಂಪುಟದಲ್ಲಿ ಘೋಷಿಸಿದೆ. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಭಾರತ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಗುರು ಬಸವಣ್ಣನವರು ಅಸ್ಪೃಶ್ಯತೆ ವಿರುದ್ಧ ಚಳುವಳಿ ರೂಪಿಸಿ ದೀನ, ದಲಿತ, ಶೋಷಿತ ಸಮಾಜದ ಸಮಾನತೆಗೆ ಧ್ವನಿ ಎತ್ತಿದ ಇತಿಹಾಸದ ಮೊದಲ ನಾಯಕ. ಅಂಥ ಮಹತ್ವವುಳ್ಳ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ರಾಜ್ಯ ಸರ್ಕಾರ ಘೋಷಣೆ ಮಾಡುವ ಮೂಲಕ ಬಸವಣ್ಣನವರ ತತ್ವಗಳನ್ನು ಪ್ರಚಾರಪಡಿಸುವ ಕೆಲಸವೂ ಆಗಲಿದೆ ಎಂದರು.ಕುಂಬಾರಗೇರಿಯ ಹಿರೇಮಠದ ಪೀಠಾಧಿಪತಿ ಸೂಗುರೇಶ್ವರ ಮಹಾಸ್ವಾಮೀಜಿ ಮಾತನಾಡಿ, 12ನೇ ಶತಮಾನ ಅತ್ಯಂತ ಮಹತ್ವಪೂರ್ಣವಾದದು. ಸರ್ಕಾರ ಒಂದು ಐತಿಹಾಸಿಕ ತೀರ್ಪು ತೆಗೆದುಕೊಂಡಿದೆ. ಸರ್ಕಾರಕ್ಕೆ ಎಲ್ಲಾ ಮಠಾಧೀಶರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಚರಬಸವೇಶ್ವರ ಗದ್ದುಗೆಯ ಸಂಸ್ಥಾನದ ಪೀಠಾಧಿಪತಿ ಬಸವಯ್ಯ ಶರಣರು ಸಾನ್ನಿಧ್ಯ ವಹಿಸಿದ್ದರು. ಫಜಲುದ್ದಿನ್ ಖಾಜಿ ಸಾಬ್ ಅವರು ಬಸವಣ್ಣರ ವಚನ ಗಾಯನ ಮಾಡಿದರು. ತಹಸೀಲ್ದಾರ್ ಉಮಾಕಾಂತ ಹಳ್ಳೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ್, ನಗರಸಭೆ ಪೌರಾಯುಕ್ತ ರಮೇಶ್ ಬಡಿಗೇರ್, ವೀರಶೈವ ಸಮಾಜದ ಉಪಾಧ್ಯಕ್ಷ ಚಂದ್ರಶೇಖರ್ ಆರಬೋಳ, ವೀರಶೈವ ಸಮಾಜದ ಯುವ ಅಧ್ಯಕ್ಷ ಶಂಭುಲಿಂಗ ಗೋಗಿ, ಮರಿಗೌಡ ಹುಲ್ಕಲ್, ಕೃಷಿ ಅಧಿಕಾರಿ ಸುನಿಲ್ ಕುಮಾರ್, ಸಮಾಜ ಕಲ್ಯಾಣ ಅಧಿಕಾರಿ ರಾವುತಪ್ಪ ಹವಲ್ದಾರ್ ಇತರರಿದ್ದರು.