ಪಾವಂಜೆ ದೇವಸ್ಥಾನದಲ್ಲಿ ಋಕ್‌ ಸಂಹಿತಾಭಿಷೇಕ, ಅಪ್ಪನೈವೇಧ್ಯ ಸೇವೆ

KannadaprabhaNewsNetwork | Published : Feb 18, 2024 1:30 AM

ಸಾರಾಂಶ

ವಿಶೇಷ ಪ್ರಾರ್ಥನೆ ಬಳಿಕ ಋಕ್ಸಂಹಿತ ಪಾರಾಯಣದೊಂದಿಗೆ ಪ್ರಾರಂಭವಾಗಿ ಪಾವಂಜೆ ಶಿವಳ್ಳಿ ಸ್ಪಂದನ ಮಹಿಳಾ ಘಟಕದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ದೇವರ ಬ್ರಹ್ಮಕಲಶಾಭಿಷೇಕದ ದಿನದ ವರ್ಷಾಚರಣೆಯ ಅಂಗವಾಗಿ ದೇವಸ್ಥಾನದ ತಂತ್ರಿಗಳಾದ ಉಡುಪಿ ಕಂಬ್ಬಕಟ್ಟ ವೇದ ಮೂರ್ತಿ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ನವಕಪ್ರಧಾನ ಪೂರ್ವಕ ಋಕ್ಸಂಹಿತಾಭಿಷೇಕ ಹಾಗೂ ಶ್ರೀ ಮಹಾಗಣಪತಿ ದೇವರಿಗೆ ಅಪ್ಪನೈವೇಧ್ಯ ಸೇವೆ ನಡೆಯಿತು. ವಿಶೇಷ ಪ್ರಾರ್ಥನೆ ಬಳಿಕ ಋಕ್ಸಂಹಿತ ಪಾರಾಯಣದೊಂದಿಗೆ ಪ್ರಾರಂಭವಾಗಿ ಪಾವಂಜೆ ಶಿವಳ್ಳಿ ಸ್ಪಂದನ ಮಹಿಳಾ ಘಟಕದ ಸದಸ್ಯರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭ ಕ್ಷೇತ್ರದ ಆರ್ಚಕ ವಾಸುದೇವ ಭಟ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೂರ್ಯ ಕುಮಾರ್ ಹಾಗೂ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಇಂದು ಕಿನ್ನಿಗೋಳಿಯ ರಾಮಮಂದಿರದಲ್ಲಿ ಮಧ್ವ ನವಮಿ

ಮೂಲ್ಕಿ: ಕಿನ್ನಿಗೋಳಿ ಶ್ರೀರಾಮ ಮಂದಿರದಲ್ಲಿ ಫೆ.೧೮ರಂದು ಭಾನುವಾರ ಮಧ್ವನವಮಿ ಪ್ರಯುಕ್ತ ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ ಸಿಯಾಳ ಅಭಿಷೇಕ ೧೧:೩೦ರಿಂದ ೧೨:೩೦ರ ವರೆಗೆ ಭಜನೆ ನಂತರ ಮಹಾಪೂಜೆ ನಡೆಯಲಿದೆ. ಮಧ್ವಾಚಾರ್ಯರ ಭಾವಚಿತ್ರಕ್ಕೆ ಆರತಿ ನಂತರ ಪ್ರಸಾದ ವಿತರಣೆ, ಸಮಾರಾಧನೆ, ರಾತ್ರಿ ೭ ರಿಂದ ೮ ಗಂಟೆಯ ವರೆಗೆ ಭಜನೆ, ೮ ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಮಂದಿರ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್ ತಿಳಿಸಿದ್ದಾರೆ.

ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಶ್ರಮದಾನ

ಮೂಲ್ಕಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಮಾರ್ಗದರ್ಶನದಲ್ಲಿ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ದೈವಸ್ಥಾನದ ಭಂಡಾರ ಮನೆಯಲ್ಲಿ ಶ್ರಮದಾನ ನಡೆಯಿತು.

ಈ ಸಂದರ್ಭದಲ್ಲಿ ಅರಸು ಕುಂಜಿರಾಯ ದೈವಸ್ಥಾನದ ಟ್ರಸ್ಟ್ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಜಯರಾಮ ಮುಕ್ಕಾಲ್ದಿ, ಬ್ರಹ್ಮಕಲಶ ಸಮಿತಿಯ ಉಪಾಧ್ಯಕ್ಷ ಅಜಾರುಗುತ್ತು ವಿಜಯ ಶೆಟ್ಟಿ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಳಿಕೆ ಮನೆ ಲೋಕೇಶ್ ಶೆಟ್ಟಿ, ಕೋಶಾಧಿಕಾರಿ ಶೈಲೇಶ್ ಅಂಚನ್, ವಿವಿಧ ಸಮಿತಿ ಸದಸ್ಯರು, ಸ್ಪೋರ್ಟ್ಸ್ ಕ್ಲಬ್ ಗೌರವ ಅಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್, ಅಧ್ಯಕ್ಷ ಜಗದೀಶ್ ಕುಲಾಲ್ ಮತ್ತಿತರರು ಭಾಗವಹಿಸಿದ್ದರು.

Share this article