ಭಾರತ ಭದ್ರವಾಗಿರಲು ಸಂಸ್ಕಾರದ ಆಚರಣೆಗಳು ಅಗತ್ಯ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ಭಾರತದ ಭವ್ಯ ಪರಂಪರೆ ಭದ್ರ ಬುನಾದಿಯೇ ಸಂಸ್ಕೃತಿ, ಸಂಸ್ಕಾರಗಳಾಗಿದ್ದು, ದೇಶ ಭದ್ರವಾಗಿರಲು ಸಂಸ್ಕಾರದ ಆಚರಣೆಗಳು ಅಗತ್ಯವಾಗಿ ಬೇಕಿದೆ.

ಬಾಳೆಹೊನ್ನೂರು: ಭಾರತದ ಭವ್ಯ ಪರಂಪರೆ ಭದ್ರ ಬುನಾದಿಯೇ ಸಂಸ್ಕೃತಿ, ಸಂಸ್ಕಾರಗಳಾಗಿದ್ದು, ದೇಶ ಭದ್ರವಾಗಿರಲು ಸಂಸ್ಕಾರದ ಆಚರಣೆಗಳು ಅಗತ್ಯವಾಗಿ ಬೇಕಿದೆ ಎಂದು ರಂಭಾಪುರಿ ಖಾಸಾ ಶಾಖಾ ಮಠ ಬೀರೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರೇಣುಕಾ ನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ 31ನೇ ವರ್ಷದ ದೀಪೋತ್ಸವ, ಅನ್ನದಾನ ಹಾಗೂ ಜನ ಜಾಗೃತಿ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಸಂಸ್ಕೃತಿ, ಸಂಸ್ಕಾರಗಳಿಂದಲೇ ದೇಶ ಭದ್ರವಾಗಿದ್ದು, ಆಧ್ಯಾತ್ಮದ ಅಡಿಯಲ್ಲಿ ಸದಾ ತೊಡಗಿಸಿಕೊಂಡರೆ ಮನುಷ್ಯ ಮಹಾದೇವನಾಗಬಲ್ಲ ಎಂದು ಭಾರತ ತೋರಿಸಿಕೊಟ್ಟಿದೆ. ಸನಾತನ ಧರ್ಮ, ಪುರಾಣ, ಶಾಸ್ತ್ರ, ಸಂಪ್ರದಾಯ, ಇತಿಹಾಸ ಮುಂತಾದವು ಭಾರತದ ಅಡಿಪಾಯದ ಕಲ್ಲುಗಳಾಗಿವೆ.

ಸನಾತನ ಪರಂಪರೆಯನ್ನು ಉಳಿಸಲು ಪ್ರತಿಯೊಬ್ಬರು ಶ್ರಮಿಸಬೇಕಿದ್ದು, ಇದಕ್ಕೆ ಪ್ರಮುಖವಾಗಿ ದೇಹ ದಂಡನೆ ಮಾಡಿಕೊಳ್ಳಬೇಕಿದೆ. ಅಂತಹ ದಂಡನೆ ಆಚರಣೆಗಳಿಂದ ಮಾತ್ರ ಸಾಧ್ಯವಿದ್ದು, ಮುಖ್ಯವಾಗಿ ಅಯ್ಯಪ್ಪಸ್ವಾಮಿ ವ್ರಥಾಚರಣೆಯಿಂದ ಇದು ಸಾಧ್ಯವಿದೆ.

ವಿದೇಶಿಗರು ಇಂದು ಮೋಜು ಮಸ್ತಿಗಾಗಿ ಭಾರತಕ್ಕೆ ಪ್ರವಾಸ ಬರುತ್ತಿಲ್ಲ. ಇಲ್ಲಿನ ಭಕ್ತಿ, ಸತ್ಯ, ನಿಷ್ಠೆ, ಧರ್ಮ, ಪ್ರೀತಿ, ವಿಶ್ವಾಸ ಮುಂತಾದವನ್ನು ನೋಡಿ ಗೌರವಿಸಲು ಬರುತ್ತಿದ್ದಾರೆ ಎಂದರು.

ಧರ್ಮ ವಿಶಾಲವಾಗಿದ್ದು, ಅದು ಎಂದಿಗೂ ತನ್ನ ಪ್ರಬುದ್ಧತೆಯನ್ನು ಕಳೆದುಕೊಂಡಿಲ್ಲ. ಸನಾತನ ಧರ್ಮ ಉಳಿಯಲು ಸ್ತ್ರೀಯರಿಂದ ಮಾತ್ರ ಸಾಧ್ಯವಿದೆ. ವೇದಗಳು ನಮಗೆ ಪಾಠ ಹೇಳಿಕೊಟ್ಟಿದ್ದು, ನಮ್ಮ ಬದುಕನ್ನು ಕಟ್ಟಿಕೊಟ್ಟಿವೆ. ಇಂದು ಪ್ರಾಣಿಗಳು ನಮ್ಮ ಪರಂಪರೆಯನ್ನು ಉಳಿಸಿವೆ. ಆದರೆ ಜನರು ಪರಂಪರೆಯನ್ನು ನಾಶ ಮಾಡುತ್ತಿದ್ದಾರೆ ಇದು ವಿಶಾದನೀಯವಾಗಿದೆ.

ನಮ್ಮಲ್ಲಿನ ದುಷ್ಟ ಶಕ್ತಿ ದೂರಾಗಬೇಕಿದ್ದು, ಪ್ರತಿಯೊಬ್ಬನನ್ನು ಎಚ್ಚರಿಸುವ ಚೇತನ ಭಾರತದ ಮಣ್ಣಿನಲ್ಲಿ ಇದೆ. ಇತ್ತೀಚೆಗೆ 11 ಲಕ್ಷ ಕ್ರಿಶ್ಚಿಯನ್ನರು ಹಿಂದೂ ಧರ್ಮವನ್ನು ಒಪ್ಪಿಕೊಂಡು ಬಂದಿದ್ದಾರೆ. ಇದು ಹಿಂದೂ ಧರ್ಮದ ಶಕ್ತಿಯಾಗಿದೆ. ಆಧ್ಯಾತ್ಮ ದಾರಿ ತಪ್ಪಿದರೆ ನಮ್ಮ ಬದುಕು ಕತ್ತಲೆಯಾಗಲಿದೆ. ಭಗವಂತ ನಮ್ಮ ಮನಸ್ಸಿನಲ್ಲಿಯೇ ಇದ್ದು ಬೇರೆಲ್ಲೂ ಹುಡುಕುವುದು ಬೇಡ ಎಂದರು.

ಶ್ರೀಶೈಲ ಶಾಖಾಮಠ ಮಾದೀಹಳ್ಳಿಯ ಶ್ರೀ ಚನ್ನಮಲ್ಲಿಕಾರ್ಜು ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಇಂದು ಧರ್ಮ ರಕ್ಷಣೆಯ ಕಾರ್ಯದಲ್ಲಿ ತೊಡಗಬೇಕಿದ್ದು, ತಂದೆ ತಾಯಂದಿರು ಮಕ್ಕಳಿಗೆ ಧರ್ಮ ರಕ್ಷಣೆಯ ಬಗ್ಗೆ ಮಾಹಿತಿ ನೀಡಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಧರ್ಮ, ಸಂಸ್ಕೃತಿಯನ್ನು ಕಲಿಸಬೇಕಿದೆ ಎಂದರು.

ಚಲನಚಿತ್ರ ನಿರ್ದೇಶಕ ರಮೇಶ್ ಬೇಗಾರ್ ಅಯ್ಯಪ್ಪ ಕಲಾರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಹಿಂದೂ ಸಮಾಜದ ಧಾರ್ಮಿಕ ಕಾರ್ಯಕ್ರಮವನ್ನು ಬಾಳೆಹೊನ್ನೂರಿನ ಜನತೆ ವಿಶೇಷವಾಗಿ ನಡೆಸಿ ಸಂಭ್ರಮಿಸುವುದು ಶ್ಲಾಘನೀಯವಾಗಿದ್ದು, ಇಂತಹ ಕಾರ್ಯಕ್ರಮಗಳು ಸಮಾಜದ ಪ್ರತಿಫಲನವಾಗಿವೆ. ಅತ್ಯಂತ ಸಾಂಸ್ಕೃತಿಕವಾಗಿ ಸಮೃದ್ಧಿಯಾಗಿರುವುದು ಬಾಳೆಹೊನ್ನೂರು ಪಟ್ಟಣವಾಗಿದೆ.

ತಾಂತ್ರಿಕತೆ, ಆಧುನೀಕತೆಯ ಪರಿಣಾಮವಾಗಿ ಇಂದು ನಮ್ಮ ಮನಸ್ಸು ಚಂಚಲಗೊಳ್ಳುತ್ತಿದ್ದು, ಒಡಕುಗಳು ಹೆಚ್ಚಾಗಿ ಕಾಣುತ್ತಿದೆ. ಮನಸ್ಸು ಅರಳಿಸುವುದು ಕಾಣುತ್ತಿಲ್ಲ. ಬದಲಾಗಿ ಕೆರಳಿಸುವ ಪ್ರಯತ್ನ ಎಲ್ಲೂ ಕಾಣುತ್ತಿಲ್ಲ. ನಮ್ಮ ಧಾರ್ಮಿಕತೆ, ಪರಂಪರೆಯ ಅಸ್ಮಿತೆ ಇರುವುದು ಆಚರಣೆಯಲ್ಲಿ ಮಾತ್ರವಾಗಿದೆ ಎಂದರು.

ಅಯ್ಯಪ್ಪ ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ ಮಾತನಾಡಿ, ಅಯ್ಯಪ್ಪಸ್ವಾಮಿ ಧಾರ್ಮಿಕ ಸಭೆಯನ್ನು ಯಾವುದೇ ಪ್ರಚಾರ, ದುಂದು ವೆಚ್ಚಕ್ಕಾಗಿ ಮಾಡದೇ ಹಿಂದೂ ಸಂಸ್ಕೃತಿ, ಸಂಪ್ರದಾಯ ಉಳಿಸಲು ನಡೆಸಲಾಗುತ್ತಿದೆ. ಸುಮಾರು 3450 ಹಿಂದೂ ಮನೆಗಳನ್ನು ಸಂಪರ್ಕ ಮಾಡಿ ಭಕ್ತರಿಂದ ದವಸ, ಧಾನ್ಯ ಸಂಗ್ರಹಿಸಿ ಅನ್ನದಾನ ನೆರವೇರಿಸಲಾಗುತ್ತಿದೆ. ಜಾತಿ, ಮತ ಬೇಧ ತೊರೆದು ಅಯ್ಯಪ್ಪ ವ್ರತಾಚರಣೆ ನಡೆಸಲಾಗುತ್ತಿದೆ ಎಂದರು.

ಚಿತ್ರನಟಿ ನಾಗಶ್ರೀ ಬೇಗಾರ್ ಅವರಿಗೆ ಇದೇ ಸಂದರ್ಭದಲ್ಲಿ ಅಯ್ಯಪ್ಪಸ್ವಾಮಿ ಗುರುರಕ್ಷೆ ನೀಡಿ ಆಶೀರ್ವದಿಸಲಾಯಿತು. ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್, ಗ್ರಾಪಂ ಸದಸ್ಯ ಎಂ.ಎಸ್.ಅರುಣೇಶ್, ಅಪೂರ್ವ ಬ್ಯಾಂಕ್ ಸಿಇಓ ಕೆ.ಎಸ್.ಸುಧೀಂದ್ರ, ಪ್ರಮುಖರಾದ ಬಾಲಕೃಷ್ಣಗೌಡ, ನಾಗರಾಜ್, ಸಹದೇವ್ ಸಾಗರ್, ಕಮಲಮ್ಮ, ಕುಮಾರ್, ಬಿ.ಜಗದೀಶಚಂದ್ರ, ಆರ್.ಎಸ್.ರುದ್ರಯ್ಯ, ಪಿ.ಕೆ.ಪ್ರಕಾಶ್, ಸಂದೀಪ್‌ಶೆಟ್ಟಿ ಮತ್ತಿತರರು ಇದ್ದರು.

Share this article