ವಿಶೇಷ ವರದಿ
ಜನರಿಗೆ ವರವಾಗಬೇಕಿದ್ದ ರಸ್ತೆ ವಿಭಜಕ ಶಾಪವಾಗಿ ಪರಿಣಮಿಸಿದ್ದು, ಇದುವರೆಗೂ ನೂರಾರು ಅಪಘಾತಗಳು ಸಂಭವಿಸಿ ಸಾಕಷ್ಟು ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರೂ ಇಲಾಖೆ ಅಧಿಕಾರಿಗಳು ಜಾಣಮೌನ ವಹಿಸಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಮುಧೋಳದಿಂದ ರಬಕವಿ ಬನಹಟ್ಟಿ ಮುಖಾಂತರ ಸಾಂಗ್ಲಿ, ಮಿರಜ್ ಹಾಗೂ ಜಮಖಂಡಿ, ವಿಜಯಪುರ ಮತ್ತು ಗೋಕಾಕ, ಘಟಪ್ರಭಾ, ಬೆಳಗಾವಿ, ಕೊಲ್ಲಾಪುರ, ನಿಪ್ಪಾಣಿ ಕಡೆ ನಿತ್ಯವೂ ನೂರಾರು ವಾಹನಗಳು ಚಲಿಸುವ ಮುಧೋಳ-ನಿಪ್ಪಾಣಿ ಹೆದ್ದಾರಿಯಲ್ಲಿ ಸ್ಥಳೀಯ ಅಷ್ಟಗಿ ಚಿತ್ರಮಂದಿರದ ಮುಂಭಾಗದಲ್ಲಿ ಅಫೋಲೋ ಮೆಡಿಕಲ್ ಸ್ಟೋರ್ ಎದುರು ಆರಂಭವಾಗುವ ರಸ್ತೆ ವಿಭಜಕಕ್ಕೆ ಯಾವುದೇ ರೀತಿಯ ಸೂಚನಾ ಫಲಕವಾಗಲಿ, ವಿದ್ಯುತ್ ದೀಪಗಳಿಂದ ರಸ್ತೆ ವಿಭಜಕದ ತಿಳಿವಳಿಕೆಯಾಗಲಿ ಮಾಡದಿರುವುದರಿಂದ ಈ ಮಾರ್ಗದಲ್ಲಿ ಬರುವ ವಾಹನ ಸವಾರರಿಗೆ ರಸ್ತೆ ವಿಭಜಕ ಗೊತ್ತಾಗದೇ ಈವರೆಗೆ ನೂರಾರು ಟ್ರ್ಯಾಕ್ಟರ್, ಕಾರು, ಲಾರಿ, ಬೈಕ್ ಮತ್ತಿತರ ವಾಹನಗಳು ಡಿಕ್ಕಿ ಹೊಡೆದು ಸಾಕಷ್ಟು ಅವಘಡಗಳು ಸಂಭವಿಸಿವೆ. ಕೆಲವು ಅಪಘಾತಗಳು ಜನರ ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣವಾಗಿವೆ. ಇದಕ್ಕೆ ತಾಜಾ ಉದಾಹರಣೆಯಾಗಿ ಶನಿವಾರ ರಾತ್ರಿ ಕಾರು ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಅಪೋಲೋ ಮೆಡಿಕಲ್ಸ್ ಪಕ್ಕದಲ್ಲಿ ಅಪ್ಪಳಿಸಿದೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಮೆಡಿಕಲ್ ಸ್ಟೋರ್ ಒಳಗೆ ನುಗ್ಗಿ ದೊಡ್ಡ ಅನಾಹುತ ಆಗುವ ಸಂಭವವಿತ್ತು.ಇಲ್ಲಿ ಎಂಎಸ್ಐಎಲ್ ಬಾರ್, ಮೆಡಿಕಲ್ ಸ್ಟೋರ್ಸ್, ಕಟಿಂಗ್ ಶಾಪ್, ಖಾನಾವಳಿಗಳು, ಬಟ್ಟೆ ಅಂಗಡಿಗಳು ಮುಂತಾದ ವ್ಯಾಪಾರ ಮಳಿಗೆಗಳಿದ್ದು, ಮಹಾಲಿಂಗಪುರದ ಮುಖ್ಯ ಮಾರುಕಟ್ಟೆಯಾದ ಜವಳಿ ಬಜಾರ್ ಗೆ ಹೋಗುವ ದಾರಿಯೂ ಇದೇ ಆಗಿರುವುದರಿಂದ ಇಲ್ಲಿ ಯಾವಾಗಲೂ ಸಾಕಷ್ಟು ಜನಸಂದಣಿ ಇರುತ್ತದೆ. ಜನರು ಕೈಯಲ್ಲಿ ಜೀವ ಹಿಡಿದು ಪ್ರಾಣಭಯದಿಂದ ಓಡಾಡುವಂತಾಗಿದೆ. ಹೀಗಿದ್ದರೂ ಇಲ್ಲಿ ರಸ್ತೆ ವಿಭಜಕ ಸೂಚನಾ ಫಲಕ ಹಾಕದೆ ಸಾಕಷ್ಟು ಅಪಘಾತಗಳು ಸಂಭವಿಸಿದ್ದು ಅದೃಷ್ಟವಶಾತ್ ಇದುವರೆಗೂ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಕಬ್ಬು ಸಾಗಣೆ ಸಂದರ್ಭದಲ್ಲಿ ಸಾಕಷ್ಟು ಟ್ರ್ಯಾಕ್ಟರ್‌ಗಳು ಸಹ ಈ ವಿಭಜಕಕ್ಕೆ ಢಿಕ್ಕಿ ಹೊಡೆದಿವೆ. ಇಷ್ಟೆಲ್ಲ ಅನಾಹುತ ಸಂಭವಿಸಿದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತು ಜಾಣ ಕುರುಡುತನ ಪ್ರದರ್ಶಿಸುತ್ತ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
-ಶ್ವೇತಾ ಬೀಡಿಕರ್ ಉಪವಿಭಾಗಾಧಿಕಾರಿಗಳು ಜಮಖಂಡಿ