ರಸ್ತೆ ಸುರಕ್ಷತೆ ಪಾಲಿಸಿ; ಸುರಕ್ಷಾ ಜೀವನ ನಡೆಸಿ: ಕ್ರಾಂತಿಕಿರಣ

KannadaprabhaNewsNetwork | Published : Mar 21, 2025 12:34 AM

ಸಾರಾಂಶ

2023ರ ಇಂಡಿಯನ್ ಹೆಡ್ ಇಂಜುರಿ ಫೌಂಡೇಶನ್ ವರದಿ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 1.5 ಮಿಲಿಯನಷ್ಟು ಮೆದುಳಿನ ಗಾಯದ ವರದಿಗಳು ದಾಖಲಾಗುತ್ತಿದ್ದು

ಹುಬ್ಬಳ್ಳಿ: ರಸ್ತೆ ಅಪಘಾತದಿಂದ ತಲೆಗೆ ಪೆಟ್ಟಾಗಿ ಮೆದುಳಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಮುಂದುವರೆದ ದೇಶಗಳಿಗೆ ಹೋಲಿಸಿದರೆ ತಲೆಗೆ ಪೆಟ್ಟಾಗಿ ಸಾವಿಗೀಡಾಗುವವರ ಸಂಖ್ಯೆ ಭಾರತದಲ್ಲೇ ಹೆಚ್ಚಿದೆ ಎಂದು ಶ್ರೀ ಬಾಲಾಜಿ ಆಸ್ಪತ್ರೆ ಚೇರ್ಮನ್ ಹಾಗೂ ನರರೋಗ ತಜ್ಞ ಡಾ.ಕ್ರಾಂತಿಕಿರಣ ತಿಳಿಸಿದರು.

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಶ್ರೀಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರದ ವತಿಯಿಂದ ವಿಶ್ವ ತಲೆ ಗಾಯ ಜಾಗೃತಿ ದಿನದ ಅಂಗವಾಗಿ ಗುರುವಾರ ಇಲ್ಲಿನ ಬಿವಿಬಿ ಕಾಲೇಜಿನ ಬಯೋಟೆಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

2023ರ ಇಂಡಿಯನ್ ಹೆಡ್ ಇಂಜುರಿ ಫೌಂಡೇಶನ್ ವರದಿ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 1.5 ಮಿಲಿಯನಷ್ಟು ಮೆದುಳಿನ ಗಾಯದ ವರದಿಗಳು ದಾಖಲಾಗುತ್ತಿದ್ದು, 2 ಲಕ್ಷಕ್ಕೂ ಅಧಿಕ ಸಾವು ಸಂಭವಿಸುತ್ತಿವೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸರಾಸರಿ 15 ರಿಂದ 44 ವರ್ಷ ವಯಸ್ಸಿನವರೆ ಹೆಚ್ಚಾಗಿ ಸಾವಿಗೀಡಾಗುತ್ತಿದ್ದು, ಭಾರತದಲ್ಲಿ ರಸ್ತೆ ಅಪಘಾತದಿಂದ ಪ್ರತಿ 6 ನಿಮಿಷಕ್ಕೆ ಒಂದರಂತೆ ಸಾವು ಸಂಭವಿಸುತ್ತಿದೆ ಎಂದು ತಿಳಿಸಿದರು.

ದೇಹದಲ್ಲಿ ಲಿವರ್, ಕರಳು ಸೇರಿದಂತೆ ಕೆಲವು ಭಾಗಗಳಿಗೆ ತೊಂದರೆಯಾದರೆ ಕೆಲಕಾಲದ ಚಿಕಿತ್ಸೆ ಬಳಿಕ ಅವು ಮತ್ತೆ ಪುನಶ್ಚೇತನಗೊಳ್ಳುತ್ತವೆ. ಆದರೆ, ಮೆದುಳಿಗೆ ಪರ್ಯಾಯ ಎಂಬುದೇ ಇಲ್ಲವಾದ್ದರಿಂದ ಮೆದುಳಿನ ಯಾವುದೇ ಭಾಗಕ್ಕೆ ಪೆಟ್ಟಾದರೂ ಅದನ್ನು ಮತ್ತೆ ಸರಿಪಡಿಸಲಾಗದು. ಆದ್ದರಿಂದ ವಾಹನ ಚಲಾಯಿಸುವ ಪ್ರತಿಯೊಬ್ಬರೂ ರಸ್ತೆಯಲ್ಲಿ ಸಂಚರಿಸುವಾಗ ಅತ್ಯಂತ ಜಾಗರೂಕರಾಗಿರಬೇಕು. ಹೆಲ್ಮೆಟ್‌ನ್ನು ಕಡ್ಡಾಯವಾಗಿ ಧರಿಸಬೇಕು. ಮದ್ಯಪಾನ ಸೇರಿದಂತೆ ಇನ್ನಿತರ ಮಾದಕ ಪದಾರ್ಥ ಸೇವನೆ ಮಾಡಿ ವಾಹನ ಚಲಾಯಿಸಬಾರದು ಎಂದರು.

2023ರ ಅಂಕಿ ಅಂಶಗಳ ಪ್ರಕಾರ ಹುಬ್ಬಳ್ಳಿ-ಧಾರವಾಡದಲ್ಲಿ ಸಂಭವಿಸಿದ 185 ರಸ್ತೆ ಅಪಘಾತಗಳ ಪೈಕಿ 156 ಜನ ಸಾವನ್ನಪ್ಪಿದ್ದಾರೆ. ಹೆಲ್ಮೆಟ್, ಸೀಟ್ ಬೆಲ್ಟ್ ರಹಿತ ಪ್ರಯಾಣವೇ ಇದಕ್ಕೆಲ್ಲ ಕಾರಣವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕೆಎಲ್ಇ ತಾಂತ್ರಿಕ ವಿವಿಯ ಉಪ ಕುಲಪತಿ ಡಾ.ಅಶೋಕ ಶೆಟ್ಟರ್ ಮಾತನಾಡಿ, ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವು-ನೋವುಗಳ ಪ್ರಮಾಣ ನಿಜಕ್ಕೂ ಆತಂಕವನ್ನುಂಟು ಮಾಡುತ್ತವೆ. ಪ್ರತಿ ಸವಾರರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಬಿವಿಬಿ ಕಾಲೇಜಿನ ವಿಭಾಗದ ಮುಖ್ಯಸ್ಥ ಎಂ.ಆರ್. ಪಾಟೀಲ, ಸಂಜೀವ್ ಕೊಟಬಾಗಿ, ಕನಕದಾಸ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸಂದೀಪ್ ಬೂದಿಹಾಳ, ಬಾಲಾಜಿ ಆಸ್ಪತ್ರೆ ವೈದ್ಯ ಡಾ. ವಿಶ್ವನಾಥ ಕಮತಗಿ, ಡಾ.ಆದಿತ್ಯ ಬಿಸ್ವಾಸ್ಇ ಸೇರಿದಂತೆ ಇತರರಿದ್ದರು.

Share this article