ಚರಂಡಿಯನ್ನೇ ಮುಚ್ಚಿ ರಸ್ತೆ ಅಗಲೀಕರಣ ಕಾಮಗಾರಿ; ಸಾರ್ವಜನಿಕರ ತೀವ್ರ ಆಕ್ಷೇಪ

KannadaprabhaNewsNetwork | Published : Mar 16, 2024 1:50 AM

ಸಾರಾಂಶ

ಗುತ್ತಿಗೆದಾರರು ಚರಂಡಿಯನ್ನು ನುಂಗಿ ರಸ್ತೆಯನ್ನು ಅಗಲೀಕರಣ ಮಾಡುತ್ತಿರುವುದರಿಂದ ಮಳೆಗಾಲದಲ್ಲಿ ರಸ್ತೆ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ರಸ್ತೆ ಅಗಲೀಕರಣ ಪ್ರಕ್ರಿಯೆಯಲ್ಲಿ ಅಗತ್ಯ ಭೂಸ್ವಾಧೀನ ಕಾರ್ಯ ಮಾಡದೆ ರಸ್ತೆಯಂಚಿನ ಚರಂಡಿಯನ್ನೇ ಮುಚ್ಚಿ ಅಗಲೀಕರಣದ ಕಾಮಗಾರಿಯನ್ನು ಮಾಡುತ್ತಿರುವ ಗುತ್ತಿಗೆದಾರರ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಉಪ್ಪಿನಂಗಡಿಯ ಗಾಂಧಿಪಾರ್ಕ್ ಕ್ರಾಸ್‌ನಿಂದ ರಾಮನಗರ ರಸ್ತೆಯ ಕುದುಲೂರು ತನಕದ ರಸ್ತೆಯ ಅಗಲೀಕರಣ ಕಾಮಗಾರಿಯಲ್ಲಿ ಈ ವಿಚಿತ್ರ ಕ್ರಮವನ್ನು ಅನುಷ್ಠಾನಿಸಲಾಗಿದೆ. ಉಪ್ಪಿನಂಗಡಿ ಗ್ರಾಮದ ರಾಮನಗರ ಮೂಲಕ ಹಿರೇಬಂಡಾಡಿ ಮಾರ್ಗವಾಗಿ ಕೊಯಿಲ ಪಶು ವೈದ್ಯಕೀಯ ಕಾಲೇಜಿಗೆ ಸಂಪರ್ಕ ರಸ್ತೆಯಾಗಿ ಈ ರಸ್ತೆಯನ್ನು ಅಗಲೀಕರಣಗೊಳೀಸಲು ಈ ಹಿಂದಿನ ಸರ್ಕಾರ ಅನುದಾನವನ್ನು ಮಂಜೂರುಗೊಳಿಸಿತ್ತು. ರಸ್ತೆ ಅಗಲೀಕರಣಕ್ಕೆ ರಸ್ತೆಯಂಚಿನ ನಿವಾಸಿಗರ ಸಹಕಾರದ ಅಗತ್ಯತೆ ಇದ್ದು , ಅವರುಗಳ ಮನವೊಲಿಸುವಲ್ಲಿನ ವಿಳಂಬತೆಯಿಂದಾಗಿ ಕಾಮಗಾರಿ ಅಂದು ನಡೆದಿರಲಿಲ್ಲ. ಪ್ರಸಕ್ತ ಗುತ್ತಿಗೆದಾರರು ಚರಂಡಿಯನ್ನು ನುಂಗಿ ರಸ್ತೆಯನ್ನು ಅಗಲೀಕರಣ ಮಾಡುತ್ತಿರುವುದರಿಂದ ಮಳೆಗಾಲದಲ್ಲಿ ರಸ್ತೆ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಉಂಟಾಗಿದೆ. ರಸ್ತೆ ಅಗಲೀಕರಣಕ್ಕೆ ಅಗತ್ಯವಾದ ಭೂಮಿಯನ್ನು ಒದಗಿಸುವ ಸಂಬಂಧ ಭೂಮಿಯನ್ನು ಕಳೆದುಕೊಳ್ಳುವ ಮಂದಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರಧನವನ್ನು ಒದಗಿಸಬೇಕೆನ್ನುವುದು ಸ್ಥಳೀಯರ ಆಗ್ರಹ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಯಾವುದೇ ರೀತಿಯಲ್ಲಿ ಸ್ಪಂದಿಸದ ಕಾರಣ , ಜನರನ್ನು ಕೆರಳಿಸಿ ಚುನಾವಣೆಗೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಅಂದು ಕಾಮಗಾರಿಯನ್ನು ಮುಂದುವರಿಸದೆ ನಿಲ್ಲಿಸಲಾಗಿತ್ತು. ಆದರೆ ಸರ್ಕಾರ ಬದಲಾಗಿದ್ದು, ಉಳಿಕೆ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗೆ ಚಾಲನೆ ದೊರಕಿದೆ. ಸರ್ಕಾರ ನಿಗದಿ ಪಡಿಸಿದ ವಿಸ್ತೀರ್ಣದಲ್ಲಿ ಅಗಲೀಕರಣ ಕಾರ್ಯ ಮಾಡಬೇಕಾಗಿದ್ದು, ಈ ವಿಸ್ತೀರ್ಣದ ವ್ಯಾಪ್ತಿಯಲ್ಲಿ ರಸ್ತೆಯಂಚಿನ ಚರಂಡಿಗಳೂ ಬರುವುದರಿಂದ ಚರಂಡಿಗಳನ್ನು ಮುಚ್ಚಲಾಗುತ್ತಿದೆ. ಅಭಿವೃದ್ಧಿ ಕಾರ್ಯಕ್ಕೆ ಸದಾ ಬೆಂಬಲ ನೀಡುವುದು ನಾಗರಿಕರ ಕರ್ತವ್ಯ. ಆದರೆ ನಡೆಯುವ ರಸ್ತೆ ಅಗಲೀಕರಣದ ಸಾಧಕ ಬಾಧಕಗಳನ್ನು ಮೊದಲೇ ಗುರುತಿಸಿಕೊಂಡು ಕೈಗೊಳ್ಳಬೇಕಾದ ಪೂರಕ ಕ್ರಮಗಳನ್ನು ಕೈಗೊಂಡು ಯಾರಿಗೂ ತೊಂದರೆ ಆಗದಂತೆ ಕ್ರಮಕೈಗೊಳ್ಳಬೇಕು. ಆಡಳಿತ ವ್ಯವಸ್ಥೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಕಂಗ್ವೆ ವಿಶ್ವನಾಥ ಶೆಟ್ಟಿ.ಈ ಹಿಂದಿನ ಶಾಸಕರ ಅವಧಿಯಲ್ಲಿ ಮಂಜೂರಾಗಿದ್ದ ಅನುದಾನದಲ್ಲಿ ರಸ್ತೆಯ ಮುಂದುವರಿದ ಕಾಮಗಾರಿ ನಡೆಯುತ್ತಿದೆ. ಸದರಿ ರಸ್ತೆಯ ಅಗಲೀಕರಣದ ವಿಸ್ತೀರ್ಣದ ವ್ಯಾಪ್ತಿಯಲ್ಲಿ ಬರುವ ಪಂಚಾಯಿತಿ ಕುಡಿಯುವ ನೀರಿನ ಸಂಪರ್ಕವನ್ನು ತೆರವುಗೊಳಿಸಲು ಪಂಚಾಯಿತಿ ಆಡಳಿತಕ್ಕೆ ಗುತ್ತಿಗೆದಾರರು ಸೂಚಿಸಿದ್ದು, ಅಗಲೀಕರಣಗೊಂಡ ಬಳಿಕ ರಸ್ತೆಯ ಉಭಯ ಪಾರ್ಶ್ವದಲ್ಲಿಯೂ ಚರಂಡಿ ನಿರ್ಮಿಸುವುದಾಗಿ ಪಂಚಾಯಿತಿ ಆಡಳಿತಕ್ಕೆ ತಿಳಿಸಿದ್ದಾರೆ ಎಂದು ಪಂಚಾಯಿತಿ ಸದಸ್ಯ ಧನಂಜಯ ನಟ್ಟಿಬೈಲು ಮಾಹಿತಿ ನೀಡಿದ್ದಾರೆ.

Share this article