ಮಾದಕ ವ್ಯಸನ ತಡೆಯಲ್ಲಿ ಔಷಧ ವ್ಯಾಪಾರಿಗಳ ಪಾತ್ರ ಪ್ರಮುಖ: ಶಿಂಧೆ

KannadaprabhaNewsNetwork | Published : Jul 1, 2024 1:50 AM

ಸಾರಾಂಶ

ಔಷಧ ವ್ಯಾಪಾರಿಗಳ ಸಂಘದ 66ನೇ ವಾರ್ಷಿಕ ಮಹಾಸಭೆ ಮತ್ತು ನಿರಂತರ ಕಲಿಕಾ ಕಾರ್ಯಕ್ರಮ ನಡೆಯಿತು. ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಅಧ್ಯಕ್ಷ ಜಗನ್ನಾಥ ಎಸ್‌. ಶಿಂಧೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸುವಲ್ಲಿ ಔಷಧ ವ್ಯಾಪಾರಸ್ಥರ ಪಾತ್ರ ಮಹತ್ವದ್ದಾಗಿದೆ. ಮಕ್ಕಳು, ಯುವಪೀಳಿಗೆ ಭಾರತದ ಜನಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ ಎಂಬುದನ್ನು ಪರಿಗಣಿಸಿ ಈ ಸಮುದಾಯವು ಮಾದಕ ವ್ಯಸನಿಗಳಾಗದಂತೆ ತಡೆಗಟ್ಟುವಲ್ಲಿ ವ್ಯಾಪಾರಸ್ಥರು ಜಾಗೃತಿ ಮೂಡಿಸಬೇಕು ಎಂದು ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘ ಅಧ್ಯಕ್ಷ ಜಗನ್ನಾಥ್ ಎಸ್. ಶಿಂಧೆ ಕರೆ ನೀಡಿದ್ದಾರೆ.

ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿತ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ 66ನೇ ವಾರ್ಷಿಕ ಮಹಾಸಭೆ ಮತ್ತು ನಿರಂತರ ಕಲಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದಾದ್ಯಂತ 12.50 ಲಕ್ಷ ಔಷಧ ವ್ಯಾಪಾರಸ್ಥರಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಎದುರಾಗುವ ಸವಾಲನ್ನು ಎದುರಿಸಲು ಭಾರತೀಯ ಔಷಧ ವ್ಯಾಪಾರಿಗಳು ಸಜ್ಜಾಗುವಂತೆ ಹೇಳಿದ ಶಿಂಧೆ, ಬ್ರಿಟಿಷರು ಕೂಡ ಭಾರತಕ್ಕೆ ವ್ಯಾಪಾರದ ಉದ್ದೇಶದಿಂದಲೇ ಬಂದು ನಂತರ ಇಡೀ ಭಾರತವನ್ನೇ ಅತಿಕ್ರಮಿಸಿದ್ದರು. ಅಂತೆಯೇ ಜಿ-20, ಗ್ಯಾಟ್ ಒಪ್ಪಂದದ ಅವಕಾಶ ಬಳಸಿಕೊಂಡು ಮುಂದಿನ ದಿನಗಳಲ್ಲಿ 187 ದೇಶಗಳಿಗೆ ಸೇರಿದ ಅಂತಾರಾಷ್ಟ್ರೀಯ ಔಷಧ ಉದ್ಯಮಿಗಳು ಭಾರತದಲ್ಲಿ ನೆಲೆಯೂರಲು ಮುಂದಾಗುತ್ತಾರೆ. ಇಂಥ ಸಂದರ್ಭ ಭಾರತೀಯತೆ, ಭಾರತದ ಸಂಸ್ಕೃತಿಯ ಸಂರಕ್ಷಣೆ ನಿಟ್ಟಿನಲ್ಲಿ ಭಾರತೀಯ ಔಷಧ ವ್ಯಾಪಾರಿಗಳ ಮಹತ್ವವನ್ನು ಸಮಾಜಕ್ಕೆ ತಿಳಿಸುವುದರೊಂದಿಗೆ, ಸಮಾಜದ ಹಿತಕಾಯಲೂ ಔಷಧ ವ್ಯಾಪಾರಿಗಳು ಬದ್ಧರಾಗಿರಬೇಕೆಂದೂ ಸಲಹೆ ನೀಡಿದರು.

ರಾಷ್ಟ್ರೀಯ ಔಷಧಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್ ಮಾತನಾಡಿ, ಕೋವಿಡ್ ಲಾಕ್‌ಡೌನ್ ಸಂದರ್ಭ ದೇಶವ್ಯಾಪಿ ಔಷಧ ವ್ಯಾಪಾರಿಗಳು ನೀಡಿದ ಸೇವೆಯನ್ನು ಸಮಾಜದ ಜನತೆ ಸದಾ ಸ್ಮರಿಸಿಕೊಳ್ಳಬೇಕು. ದೇಶದ ಗ್ರಾಮಗ್ರಾಮಗಳಲ್ಲಿಯೂ ಜನರ ಆರೋಗ್ಯ ಹಿತರಕ್ಷಣೆ ಉದ್ದೇಶದಿಂದ ಔಷಧಿ ವ್ಯಾಪಾರಿಗಳು ಸಮಯದ ಪರಿವೇ ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಕರ್ನಾಟಕ ಔಷಧ ನಿಯಂತ್ರಣಾಧಿಕಾರಿ ಬಿ.ಟಿ. ಖಾನಾಪುರೆ ಮಾತನಾಡಿ, ಸದ್ಯದಲ್ಲಿಯೇ ಔಷಧೀಯ ಕಾಯ್ದೆಗಳಿಗೆ ಕೆಲವು ಮಾರ್ಪಾಡು ಬರಲಿದೆ ಎಂದರು.ರಾಜ್ಯ ಔಷಧ ಉಪ ನಿಯಂತ್ರಣಾಧಿಕಾರಿ ಕೆಂಪಯ್ಯ ಸುರೇಶ್ ಮಾತನಾಡಿ, ಜೀವರಕ್ಷಕವಾದ ಕೆಲವೊಂದು ಔಷಧಗಳಿಗೆ ರಿಯಾಯಿತಿ ನೀಡುವ ಫಲಕಗಳ ಪ್ರಚಾರ ಸರಿಯಲ್ಲ. ರಿಯಾಯಿತಿ ಫಲಕ ಅಳವಡಿಕೆಯೂ ಯಾವುದೇ ಔಷಧ ಅಂಗಡಿಗಳಲ್ಲಿಯೂ ಸಲ್ಲದು ಎಂದು ಹೇಳಿದರು.

ಕರ್ನಾಟಕ ಔಷಧಿ ವ್ಯಾಪಾರಸ್ಥರ ಸಂಘ ಅಧ್ಯಕ್ಷ ಆರ್. ರಘುನಾಥ ರೆಡ್ಡಿ ಮಾತನಾಡಿ, ಕರ್ನಾಟಕದಲ್ಲಿ ಔಷಧ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಸಂಘವು ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಹೊಸ ನೀತಿ ನಿಯಮಗಳ ಬಗ್ಗೆ ತಿಳುವಳಿಕೆ ನೀಡುತ್ತಿದೆ ಎಂದರು.

ಭಾರತೀಯ ಔಷಧ ವ್ಯಾಪಾರಸ್ಥರ ಸಂಘದ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ಔಷಧ ವ್ಯಾಪಾರಸ್ಥರ ಸಂಘದ ಗೌರವ ಕಾರ್ಯದರ್ಶಿ ಮತ್ತು ಕೊಡಗು ಔಷಧ ವ್ಯಾಪಾರಸ್ಥರ ಸಂಘ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿದರು.

ಸಂಘಟನೆಯ ಪ್ರಮುಖರಾದ ಎ.ಎನ್. ಮೋಹನ್, ಅರುಣ್, ಬಿ.ಉಮೇಶ್, ಬಿ.ಕೆ. ಪ್ರಸನ್ನ ಕುಮಾರ್, ಶಿವರಾಜ್ ಪಾಟೀಲ್, ಸತ್ಯನಾರಾಯಣ್ ಕಲ್ಗಾರ್, ವಿ.ಎಸ್. ಬುರ್ಲಿ ಉಪಸ್ಥಿತರಿದ್ದರು.

ಕೊಡಗು ಔಷಧ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಕೆ.ವಸಂತ್ ಕುಮಾರ್, ಎ.ಕೆ. ವಿನೋದ್, ಪ್ರಸಾದ್ ಗೌಡ, ಕಿರಣ್ ಕುಂದರ್, ತಿಲಕ್ ಚಂದ್ರಶೇಖರ್, ವಿವೇಕ್, ಧನಂಜಯ ಶಾಸ್ತ್ರಿ, ಶ್ರೀನಿವಾಸ್, ಪ್ರಕಾಶ್, ಮರ್ವಿನ್ ಫರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಶೇಖರ್ ನಿರೂಪಿಸಿದರು. ಉನ್ನತಿ ಸುರೇಶ್ ಪ್ರಾರ್ಥಿಸಿದರು.

ರಾಜ್ಯದ 32 ಜಿಲ್ಲೆಗಳಿಂದ 620 ಪ್ರತಿನಿಧಿಗಳು ಎರಡು ದಿನಗಳು ನಡೆದ ವಾಷಿ೯ಕ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.

ಕೆಮಿಸ್ಟ್ ರತ್ನ ಪ್ರಶಸ್ತಿ ಪ್ರದಾನ: ಕರ್ನಾಟಕ ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ಔಷಧಿ ಉದ್ಯಮ ಕ್ಷೇತ್ರದಲ್ಲಿ ವ್ಯಾಪಾರಿಗಳ ಸೇವೆ ಪರಿಗಣಿಸಿ ಕೆಮಿಸ್ಟ್ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಡಿಕೇರಿಯ ಗಣೇಶ್ ಮೆಡಿಕಲ್ಸ್‌ನ ಡಿ.ಐ. ಪುರುಷೋತ್ತಮ ಭಟ್ ಮತ್ತು ವೀಣಾ ಪುರುಷೋತ್ತಮ, ದಾವಣಗೆರೆಯ ಪೋಪಟ್ ಲಾಲ್ ಜೈನ್, ಮೈಸೂರಿನ ರಾಘವನ್, ಉಜಿರೆಯ ಶ್ರೀಧರ್, ತುಮಕೂರಿನ ಎಂ.ಎಸ್. ಅನಂತ್, ಬಾಗಲಕೋಟೆಯ ಬಂಡು ಆರ್. ಕಟ್ಟಿ ಅವರಿಗೆ ಭಾರತೀಯ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ್ ಶಿಂಧೆ ಮತ್ತು ಪ್ರಮುಖರು ಕೆಮಿಸ್ಟ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು

ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೂ ಸನ್ಮಾನ ನೆರವೇರಿತು. ಕೆ.ಹರೀಶ್ ಮೈಸೂರು (ಕಾನೂನು), ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಫ್ಯಾನ್ಸಿಸ್ ಪಿ.ಡಬ್ಲ್ಯು., ಕೆ.ಎಸ್. ರಮೇಶ್ ಹೊಳ್ಳ ಮಡಿಕೇರಿ ( ಧಾರ್ಮಿಕ), ಅನಿಲ್ ಎಚ್.ಟಿ. ಮಡಿಕೇರಿ (ಮಾಧ್ಯಮ), ಚೇತನ್ ಶಾಂತಿನಿಕೇತನ ಮಡಿಕೇರಿ (ಸಾಮಾಜಿಕ ಸೇವೆ) ಅವರನ್ನು ರಾಜ್ಯ ಔಷಧ ವ್ಯಾಪಾರಸ್ಥರ ಸಂಘದಿಂದ ಸನ್ಮಾನಿಸಲಾಯಿತು.

Share this article