ಪಿ.ಎಸ್. ಪಾಟೀಲ
ಕನ್ನಡಪ್ರಭ ವಾರ್ತೆ ರೋಣತಾಲೂಕಿನಲ್ಲಿರುವ ಅಧಿಕೃತ ಮರಳು ಪಾಯಿಂಟ್‌ಗಳು ಹೆಸರಿಗೆ ಮಾತ್ರ. ಆದರೆ, ಇಲ್ಲಿ ನಡೆಯುವುದೆಲ್ಲ ಸಂಪೂರ್ಣ ಅನಧಿಕೃತ ದಂಧೆ.
ಇಲ್ಲಿನ ಬಹುತೇಕ ಪಾಯಿಂಟ್‌ಗಳಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಯಾರ ಭಯವಿಲ್ಲದೇ ಅವ್ಯಾಹತವಾಗಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ಅಧಿಕಾರಿಗಳ ನಡೆ ನಾನಾ ರೀತಿಯ ಸಂಶಯಕ್ಕೆ ಎಡೆಮಾಡಿದೆ.ತಾಲೂಕಿನಲ್ಲಿ ಯರೇಕುರಬನಾಳ, ಗಾಡಗೋಳಿ, ಬಳಗೋಡ, ಜಕನೂರ, ಕುರವಿನಕೊಪ್ಪ, ಹೊಳೆಮಣ್ಣೂರ, ಹಿರೇಹಾಳ, ಗುಳಗಂದಿ, ಮೆಣಸಗಿ ಭಾಗಗಳಲ್ಲಿ 10ಕ್ಕೂ ಹೆಚ್ಚು ಅನಧಿಕೃತ ಮರಳು ಸಾಗಾಟ ಪಾಯಿಂಟ್‌ಗಳಿವೆ. ಚಿಕ್ಕ ಅಳಗುಂಡಿ, ಬಳಗೋಡ, ಸರ್ಜಾಪುರ, ಹೊನ್ನಿಗನೂರ, ಮುಗಳಿ, ಗುಳಗುಳಿ, ಬಿ.ಎಸ್. ಬೇಲೇರಿ, ಕುರವಿನಕೊಪ್ಪ, ಹೊಳೆಮಣ್ಣೂರ ಸೇರಿದಂತೆ ಅನೇಕ ಕಡೆ ನದಿ, ಹಳ್ಳ-ಕೊಳ್ಳ ಹಾಗೂ ಪಟ್ಟಾ ಜಮೀನುಗಳಲ್ಲಿ ಜೆಸಿಬಿ ಯಂತ್ರ ಬಳಸಿ ಭೂ ಒಡಲನ್ನು ಬರಿದು ಮಾಡುವಲ್ಲಿ ಮರಳು ದಂಧೆಕೋರರು ತಮ್ಮ ಕಬಂಧಬಾಹು ಚಾಚಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊಡೆತ ಬೀಳುವ ಜತೆಗೆ, ಒವರ್‌ಲೋಡ್‌ನಿಂದ ರಸ್ತೆಗಳು ಹದಗೆಡುತ್ತಿವೆ. ಮಿತಿಮೀರಿದ ವಾಹನಗಳ ಸಂಚಾರದಿಂದ ಜನತೆಗೆ ತೊಂದರೆಯಾಗುತ್ತಿದೆ. ರಸ್ತೆಯುದ್ದಕ್ಕೂ ಇರುವ ಜಮೀನುಗಳಲ್ಲಿನ ಬೆಳೆಗಳಿಗೆ ಧೂಳಿನಿಂದಾಗಿ ಹಾನಿಯಾಗುತ್ತಿವೆ ಎಂದು ರೈತರು ಗೋಳಾಡುತ್ತಿದ್ದಾರೆ.
ನಿಯಮ ಸಂಪೂರ್ಣ ಉಲ್ಲಂಘನೆಪ್ರತಿಯೊಂದು ಅನಧಿಕೃತ ಮರಳು ಪಾಯಿಂಟ್‌ನಲ್ಲಿ ಮರಳು ಎತ್ತುವ ಸ್ಥಳದಲ್ಲಿ, ವೇಬ್ರಿಡ್ಜ್ (ಮರಳು ತೂಕ ಯಂತ್ರ), ಪಾಸ್ ವಿತರಿಸುವ ಕಂಪೂಟರ್ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂಬ ನಿಯಮವಿದೆ. ಆದರೆ ಕಂಪೂಟರ್ ಕೊಠಡಿ ಹೊರತುಪಡಿಸಿ ಬೇರೆಡೆ ಸಿಸಿ ಕ್ಯಾಮೆರಾ ಹೆಸರಿಗೆ ಮಾತ್ರ ಇದೆ. ಇಂತಿಷ್ಟೇ ಮೆಟ್ರಿಕ್ (ಕನಿಷ್ಠ 10ರಿಂದ 12 ಮೆಟ್ರಿಕ್ ಟನ್ ) ಟನ್ ಮರಳನ್ನು ಜಿಪಿಎಸ್ ಅಳವಡಿಸಿದ ಲಾರಿ ಅಥವಾ ಟಿಪ್ಪರ್‌ಗೆ ತುಂಬಿಸಬೇಕು. ಹೀಗೆ ತುಂಬಿಸಿದನ್ನು ವೇ ಬ್ರಿಡ್ಜ್‌ನಲ್ಲಿ ತೂಕ ಮಾಡಿ, ಪಾಸ್ ವಿತರಿಸಬೇಕು ಎಂಬ ನಿಯಮವಿದೆ. ಆದರೆ, ಬಹುತೇಕ ಪಾಯಿಂಟ್‌ಗಳಲ್ಲಿ ಇದ್ಯಾವುದೂ ನಡೆಯುವುದಿಲ್ಲ. ವೇ ಬ್ರಿಡ್ಜ್‌ಗಳು ರಿಪೇರಿ ಇದೆ ಎಂಬ ನೆಪ ಮುಂದಿಟ್ಟುಕೊಂಡು, 25ರಿಂದ 30 ಮೆಟ್ರಿಕ್ ಟನ್ ವರೆಗೆ ವಾಹನಗಳಿಗೆ ಲೋಡ್ ಮಾಡಲಾಗುತ್ತಿದೆ.
ಮಲಪ್ರಭಾ ಒಡಲಿಗೂ ಕನ್ನರಾತ್ರಿವೇಳೆ ಮಲಪ್ರಭಾ ನದಿ ಒಡಲಿಗೆ ಕನ್ನ ಹಾಕಿ ನದಿಯಲ್ಲಿನ ಮರಳನ್ನು ಬೋಟ್ ಮೂಲಕ ಎತ್ತುವಳಿ ಮಾಡಿ ಲೀಗಲ್ ಪಾಯಿಂಟ್‌ನಲ್ಲಿ ಸಂಗ್ರಹಿಸಿ, ಅಧಿಕೃತ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ. ತಾಲೂಕಿನಲ್ಲಿರುವ ಬಹುತೇಕ ಪಾಯಿಂಟ್‌ಗಳಲ್ಲಿ ಬೋಟ್‌ಗಳ ಬಳಕೆ ವಿಪರೀತವಾಗಿದ್ದು, ಇದು ಅತ್ಯಂತ ಅಪಾಯಕಾರಿಯಾಗಿದೆ. ಬೋಟ್ ಬಳಸಿ ಮರಳು ಎತ್ತಲು ಮನುಷ್ಯರ ಶ್ರಮಪಡಬೇಕು. ಅಕಸ್ಮಾತ್ ಅವಘಡವಾದಲ್ಲಿ ಯಾರು ಹೊಣೆ? ಇಂತಹ ಸನ್ನಿವೇಶ ಎಲ್ಲ ಪಾಯಿಂಟ್‌ಗಳಲ್ಲಿ ನಿತ್ಯ ಎಗ್ಗಿಲ್ಲದೇ ನಡೆಯುತ್ತಿದೆ.
ಅಧಿಕಾರಿಗಳ ನಡೆ ಸಂಶಯಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಲೀಗಲ್ ಪಾಯಿಂಟ್‌ಗಳಿಗೆ ಪ್ರತಿ ತಿಂಗಳು ಆಗಾಗ್ಗೆ ಭೇಟಿ ನೀಡುತ್ತಾರೆ. ಆದರೆ, ಅಲ್ಲಿ ಏನನ್ನು ಪರಿಶೀಲಿಸುತ್ತಾರೋ ಎಂಬುದು ಮಾತ್ರ ನಿಗೂಢ. ಹೀಗೆ ಭೇಟಿ ನೀಡಿದ ಅಧಿಕಾರಿಗಳಿಗೆ ದುರಸ್ತಿಯಲ್ಲಿರುವ ವೇ ಬ್ರಿಡ್ಜ್, ಸಿಸಿ ಕ್ಯಾಮೆರಾ, ಒವರ್‌ಲೋಡ್ ಮರಳು ಸಾಗಾಟ ವಾಹನಗಳು ಕಣ್ಣಿಗೆ ಕಾಣುವುದಿಲ್ಲವೇ? ಕಣ್ಣಿಗೆ ಕಂಡರೂ ಕ್ರಮ ಕೈಗೊಳ್ಳುತ್ತಿಲ್ಲ ಏಕೆ? ಇದು ಚರ್ಚೆಗೆ ಗ್ರಾಸವಾಗಿವೆ.ಹೋರಾಟಕೂಡಲೇ ಸಂಬಂಧಿಸಿದ ಅಧಿಕಾರಿಗಳು ಅಕ್ರಮ ಮರಳು ಸಾಗಾಟ ದಂಧೆಗೆ ಹಾಗೂ ಅಧಿಕೃತ ಹೆಸರಲ್ಲಿ ಅನಧಿಕೃತ ಮರಳು ಸಾಗಾಟ ದಂಧೆಗಿಳಿದ ಪಾಯಿಂಟ್‌ಗಳು ನಿಯಮ ಉಲ್ಲಂಘಿಸದಂತೆ ತಾಕೀತು ಮಾಡಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿವೆ.ಕ್ರಮಜನವರಿ ತಿಂಗಳಲ್ಲಿಯೇ ತಾಲೂಕಿನಲ್ಲಿರುವ ಲೀಗಲ್ ಪಾಯಿಂಟ್‌ಗಳಿಗೆ ನಿಯಮಗಳನ್ನು ಪಾಲಿಸುವಂತೆ ಸಿಸಿ ಕ್ಯಾಮೆರಾ, ವೇಬ್ರಿಡ್ಜ್ ಸಕ್ರಿಯವಾಗಿಡುವಂತೆ ನೋಟಿಸ್ ನೀಡಲಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿನ ಕೆಲಸದ ಒತ್ತಡದಿಂದ ಅತ್ತ ನಿಗವಹಿಸಲಾಗಿಲ್ಲ. ಕೂಡಲೇ ಎಲ್ಲ ಪಾಯಿಂಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ನಿಯಮ ಉಲ್ಲಂಘಿಸಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು. ಒವರ್‌ಲೋಡ್ ಗಾಡಿಗಳ ಸಂಚಾರಕ್ಕೆ ಕಡಿವಾಣ ಹಾಕುವಲ್ಲಿ ಆರ್‌ಟಿಒಗೆ, ಅಕ್ರಮ ಮರಳು ಸಾಗಾಣಿಕೆ ತಡೆಯುವಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗುವುದು.ನಾಗರಾಜ ಕೆ. ತಹಸೀಲ್ದಾರ್, ರೋಣದಾಳಿ ನಡೆಸಿ ಸೂಕ್ತ ಕಾನೂನು ಕ್ರಮ
ಓವರ್‌ಲೋಡ್ ವಾಹನಗಳ ಕುರಿತು ಆರ್‌ಟಿಒ ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ. ಈ ಹಿಂದೆ ಅನೇಕ ಬಾರಿ ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡು ಓವರ್‌ಲೋಡ್ ವಾಹನ ಮತ್ತು ಅನಧಿಕೃತ ಮರಳು ಸಾಗಾಟ ಲಾರಿ, ಟಿಪ್ಪರ್ ಮೇಲೆ ರೇಡ್ ಮಾಡಿ ಪ್ರಕರಣ ದಾಖಲಿಸಿ, ದಂಡ ಕಟ್ಟಿಸಲಾಗಿದೆ. ತಹಸೀಲ್ದಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಆರ್‌ಟಿಒ, ಪೊಲೀಸ್ ಇಲಾಖೆ, ಜಿಪಂ, ನೀರಾವರಿ ಅಧಿಕಾರಿಗನ್ನೊಳಗೊಂಡ ಸಮಿತಿ ನೇತೃತ್ವದಲ್ಲಿ ಅಕ್ರಮ ಮರಳು ದಂಧೆಕೋರರ ಮೇಲೆ ದಾಳಿ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.ಎಸ್.ಎಸ್. ಬೀಳಗಿ ಸಿಪಿಐ, ರೋಣ ತಾಲೂಕು ವಲಯ
ಲಿಖಿತ ದೂರುಓವರ್ಲೋಡ್ ಮರಳು ಸಾಗಿಸುವ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕುವಂತೆ ಆರ್.ಟಿ.ಒ. ಅಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದೆ. ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ. ನೀವೇ ಅಂತಹ ವಾಹನ ಹಿಡಿದು ನಮಗೆ ಮಾಹಿತಿ ನೀಡಿದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಆರ್‌ಟಿಒ ಹಿಂಬರಹ ನೀಡಿದ್ದಾರೆ. ವಾಹನಗಳ ತಪಾಸಣೆ, ಸುಪರ್ದಿಗೆ ತೆಗೆದುಕೊಳ್ಳಲು ನಮಗೆ ಅಧಿಕಾರವಿಲ್ಲ. ಒವರ್‌ಲೋಡ್ ವಾಹನಗಳ ಸಂಚಾರದಿಂದ ರಸ್ತೆಗಳನ್ನು ರಕ್ಷಿಸಿಕೊಳ್ಳುವಲ್ಲಿ ಅಸಾಧ್ಯವಾಗುತ್ತಿದೆ. ಈ ಕುರಿತು ಸಾಕಷ್ಟು ಬಾರಿ ತಹಸೀಲ್ದಾರ್ ನೇತೃತ್ವದ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ.
ಬಲವಂತ ನಾಯಕ, ಎಇಇ, ಲೋಕೋಪಯೋಗಿ ರೋಣ