ಬಿಜೆಪಿಗೆ ಸಂಗಣ್ಣ ಬೆಂಬಲಿಗರ ಸಾಲು ಸಾಲು ರಾಜಿನಾಮೆ

KannadaprabhaNewsNetwork | Published : Apr 11, 2024 12:51 AM

ಸಾರಾಂಶ

ಸಂಸದ ಸಂಗಣ್ಣ ಕರಡಿ ಬಂಡಾಯ ತಣ್ಣಗಾದರೂ ಕೊಪ್ಪಳ ಬಿಜೆಪಿಯಲ್ಲಿ ಸಮಾಧಾನ ಇಲ್ಲದಂತಾಗಿದ್ದು, ಸಾಲು ಸಾಲು ರಾಜೀನಾಮೆ ಕೊಪ್ಪಳ ಬಿಜೆಪಿಯಲ್ಲಿ ದಂಗುಬಡಿಯುವಂತೆ ಮಾಡಿದೆ.

- ಮೌನವಾಗಿರುವ ಹಾಲಿ ಸಂಸದ ಸಂಗಣ್ಣ

ಕಾಂಗ್ರೆಸ್ ಸೇರುತ್ತಿರುವವರ ಸಂಖ್ಯೆ ಹೆಚ್ಚಳಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಂಸದ ಸಂಗಣ್ಣ ಕರಡಿ ಬಂಡಾಯ ತಣ್ಣಗಾದರೂ ಕೊಪ್ಪಳ ಬಿಜೆಪಿಯಲ್ಲಿ ಸಮಾಧಾನ ಇಲ್ಲದಂತಾಗಿದ್ದು, ಸಾಲು ಸಾಲು ರಾಜೀನಾಮೆ ಕೊಪ್ಪಳ ಬಿಜೆಪಿಯಲ್ಲಿ ದಂಗುಬಡಿಯುವಂತೆ ಮಾಡಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಹಾಲಿ ಸಂಸದ ಕರಡಿಗೆ ತಪ್ಪಿಸಿ, ವೈದ್ಯ ಡಾ. ಬಸವರಾಜಗೆ ಘೋಷಣೆ ಮಾಡಿದ್ದರಿಂದ ಬಂಡಾಯದ ಬಿಸಿ ಜೋರಾಗಿತ್ತು. ಆದರೆ, ಹಾಲಿ ಸಂಸದರೇ ನಾನು ಬಿಜೆಪಿಯಲ್ಲಿಯೇ ಇರುತ್ತೇನೆ, ಪಕ್ಷೇತರ ಸ್ಪರ್ಧೆ ಮಾಡುವುದಿಲ್ಲ ಎಂದು ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಬಂಡಾಯದ ಕಾವು ತಣ್ಣಗಾಗಿತ್ತು. ಆದರೆ, ಈಗ ಕರಡಿ ಅವರ ಕಟ್ಟಾ ಬೆಂಬಲಿಗರು ಮಾತ್ರ ಸಾಲು ಸಾಲಾಗಿ ಬಿಜೆಪಿ ತೊರೆದು, ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.

ಅಚ್ಚರಿ ಎಂದರೆ ಈ ಬೆಳವಣಿಗೆ ಕೇವಲ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ ನಡೆಯುತ್ತಿದೆ. ಇದನ್ನು ತಡೆಯುವ ಪ್ರಯತ್ನವನ್ನು ಹಾಲಿ ಸಂಸದರು ಮಾಡುತ್ತಿಲ್ಲ ಮತ್ತು ಬಿಜೆಪಿ ನಾಯಕರೂ ಮಾಡುತ್ತಿಲ್ಲ ಎನ್ನುವುದು ಮಾತ್ರ ದಿಟ.

ಸಂಗಣ್ಣ ಜೊತೆಯಲ್ಲಿ ಇದ್ದವರೇ ಈಗ ಬಿಜೆಪಿ ತೊರೆಯುತ್ತಿದ್ದಾರೆಯೇ ಹೊರತು ಪಕ್ಕಾ ಬಿಜೆಪಿ ನಾಯಕರು ಪಕ್ಷ ತೊರೆಯುತ್ತಿಲ್ಲ ಎನ್ನಲಾಗುತ್ತಿದೆ.

ನಗರಸಭೆ ಸದಸ್ಯ ರಾಜಶೇಖರ ಆಡೂರು ಪಕ್ಷಕ್ಕೆ ಮತ್ತು ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರೆ ಜೆಡಿಎಸ್ ಸದಸ್ಯರಾಗಿದ್ದರೂ ಕರಡಿಗೆ ಆತ್ಮೀಯರಾಗಿದ್ದ ನಗರಸಭೆ ಸದಸ್ಯ ಚನ್ನಪ್ಪ ಕೋಟ್ಯಾಳ ಸಹ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಅಷ್ಟೇ ಅಲ್ಲ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದೇಶ ಪೂಜಾರ, ಭೋವಿ ಸಮಾಜದ ಮುಖಂಡ ಹಾಗೂ ಕರಡಿ ಪುತ್ರ ಅಮರೇಶ ಕರಡಿ ಪರಮಾಪ್ತ ಬಸವರಾಜ ಭೋವಿ ಸಹ ಬಿಜೆಪಿ ತೊರೆದು ಸಚಿವ ಶಿವರಾಜ ತಂಗಡಗಿ ಅವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಭಾರೀ ಹೊಡೆತ ಬೀಳುತ್ತಿದೆ. ದಿನೇ ದಿನೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಅದರಲ್ಲೂ ಬಿಜೆಪಿ ಅಭ್ಯರ್ಥಿಯಾಗಿರುವ ಡಾ. ಬಸವರಾಜ ಕ್ಯಾವಟೂರ್ ಅವರಿಗೆ ಇದನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ.

ಕರೆತರುವ ಯತ್ನ:

ಬಿಜೆಪಿ ತೊರೆದು ಅನೇಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದರಿಂದ ಬಿಜೆಪಿ ನಾಯಕರು ಈಗ ಕಾಂಗ್ರೆಸ್‌ನಲ್ಲಿರುವವರನ್ನು ಮತ್ತು ತಟಸ್ಥ ಧೋರಣೆಯಲ್ಲಿದ್ದವರನ್ನು ಹುಡುಕಿ ಕರೆತರುವ ಪ್ರಯತ್ನ ನಡೆಸಿದ್ದಾರೆ.

ಬಿಜೆಪಿ ನಾಯಕರಿಗೆ ಇದುವೇ ದೊಡ್ಡ ಸವಾಲು ಎನ್ನುವಂತೆ ಆಗಿದ್ದು, ಇದ್ದವರನ್ನು ಉಳಿಸಿಕೊಳ್ಳುವುದು ಒಂದು ಕಡೆಯಾದರೆ ಇದಕ್ಕೆ ಪ್ರತಿಯಾಗಿ ಕರೆತರುವುದಕ್ಕಾಗಿ ಹೈರಾಣಾಗಿದ್ದಾರೆ.

ಇಷ್ಟಾದರೂ ಕರಡಿ ಅವರು ಮಾತ್ರ ತಟಸ್ಥ ಧೋರಣೆಯಲ್ಲಿರುವುದು ಅಚ್ಚರಿಗೆ ಕಾರಣವಾಗಿದೆ. ಇದುವರೆಗೂ ಅವರು ತಮ್ಮ ಕಟ್ಟಾ ಬೆಂಬಲಿಗರು ಬಿಜೆಪಿ ತೊರೆಯುತ್ತಿರುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಬದಲಾಗಿ ನಾನು ಅವರನ್ನು ಇಲ್ಲಿ ಉಳಿಯುವಂತೆ ಹೇಳಿದ್ದೇನೆ, ಅವರು ಕೇಳುತ್ತಿಲ್ಲ ಎಂದಷ್ಟೇ ಹೇಳಿರುವುದು ನಾನು ಚರ್ಚೆಗೆ ಇಂಬು ನೀಡಿದೆ.

Share this article