ಆರ್‌ಎಸ್‌ಎಸ್‌ ಸಂವಿಧಾನ ಜಾರಿಗೆ ತರ್ತಾರೆ: ಮುಖ್ಯಮಂತ್ರಿ ಚಂದ್ರು

KannadaprabhaNewsNetwork |  
Published : Mar 18, 2024, 01:51 AM IST
ಆಮ್ ಆದ್ಮಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸುದ್ದಿಗೊಷ್ಠಿ ನಡೆಸಿದರು. | Kannada Prabha

ಸಾರಾಂಶ

ಸಂವಿಧಾನ ಬದಲಿಸುವ ಹೇಳಿಕೆಯನ್ನು ಉತ್ತರ ಕನ್ನಡದ ಸಂಸದ ಅನಂತಕುಮಾರ ಹೆಗಡೆ ನೀಡಿದರೂ ಪಕ್ಷದಿಂದ ಯಾವುದೇ ಕ್ರಮವಹಿಸಿಲ್ಲ.

ಕಾರವಾರ: ಬಿಜೆಪಿಗರು ಸರ್ವಾಧಿಕಾರಿ ಧೋರಣೆ ಹೊಂದಿದ್ದು, ಕೋಮುವಾದಿ, ಸ್ವಾಯತ್ತತೆ ಹತ್ತಿಕ್ಕುವ ಪಕ್ಷವಾಗಿದೆ. ಈ ಬಾರಿ ಬಿಜೆಪಿಗೆ ಅಧಿಕಾರ ನೀಡಿದರೆ ಅಂಬೇಡ್ಕರ್ ಸಂವಿಧಾನದ ಬದಲು ಆರ್‌ಎಸ್‌ಎಸ್ ಸಂವಿಧಾನ ಜಾರಿಗೆ ತರುತ್ತಾರೆ ಎಂದು ಆಮ್ ಆದ್ಮಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ದೂರಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಿಸುವ ಹೇಳಿಕೆಯನ್ನು ಉತ್ತರ ಕನ್ನಡದ ಸಂಸದ ಅನಂತಕುಮಾರ ಹೆಗಡೆ ನೀಡಿದರೂ ಪಕ್ಷದಿಂದ ಯಾವುದೇ ಕ್ರಮವಹಿಸಿಲ್ಲ. ಅವರಿಗೆ ಟಿಕೆಟ್ ನೀಡಿದರೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಉದ್ದೇಶವೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಿಸಿ ಆರ್‌ಎಸ್‌ಎಸ್ ಸಂವಿಧಾನ ಜಾರಿಗೆ ತರುವುದಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.

ಒಂದು ದೇಶ ಒಂದು ಚುನಾವಣೆ ಜಾರಿಗೆ ತರುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತ್ತಿಕ್ಕಲು ಹೊರಟಿದ್ದಾರೆ. ರಾಮ, ಹಿಂದುತ್ವ, ಧರ್ಮ ಎಂದು ಕೋಮುವಾದ ಸೃಷ್ಟಿಸಲು ಹೊರಟಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ಹಿಂದೆ ಸಂವಿಧಾನ ಕಾಲ ಕಾಲಕ್ಕೆ ತಿದ್ದುಪಡಿಯಾಗಿದೆ. ಆಗಲೇಬೇಕು. ಆದರೆ ಮೂಲ ಸಂವಿಧಾನ ಬದಲಿಸಲು ಯಾರಿಗೂ ಹಕ್ಕಿಲ್ಲ. ಬಿಜೆಪಿಯನ್ನು ಸೋಲಿಸುವ ಮೂಲಕ ಸಂವಿಧಾನವನ್ನು, ದೇಶವನ್ನು ಉಳಿಯಬೇಕಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಕರ್ನಾಟಕದಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿಲ್ಲ. ಎಲ್ಲ ಅಭ್ಯರ್ಥಿಗಳನ್ನು ಮೈತ್ರಿ ಪಕ್ಷಗಳು ನಿಲ್ಲಿಸಿವೆ ಎಂದು ಸ್ಪಷ್ಟಪಡಿಸಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ತತ್ವ ಸಿದ್ಧಾಂತ ಬೇರೆ ಬೇರೆಯಾಗಿದ್ದರೂ ದೇಶಕ್ಕಾಗಿ ಅವರೊಂದಿಗೆ ಕೈಜೋಡಿಸಬೇಕಿದೆ. ಬಿಜೆಪಿ ಸೋಲಿಸಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಬೇಕೆ ಬೇಡವೇ ಎನ್ನುವ ಬಗ್ಗೆ ದೆಹಲಿ ಮಟ್ಟದಲ್ಲಿ ಅಂತಿಮ ತೀರ್ಮಾನವಾಗಿಲ್ಲ. ಒಟ್ಟಿಗೆ ಪ್ರಚಾರ ಮಾಡುವ ಬಗ್ಗೆ ವಾರದಲ್ಲಿ ತೀರ್ಮಾನ ಆಗುತ್ತದೆ. ಒಂದು ವೇಳೆ ಪ್ರಚಾರಕ್ಕೆ ಹೋಗಬೇಕಾದರೆ ನಮ್ಮ ಪಕ್ಷದ ಬಾವುಟ, ಚಿಹ್ನೆಯೊಂದಿಗೆ ತೆರಳುತ್ತೇವೆ ಎಂದರು.

ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಪ್ರಧಾನಿಯವರಿಗೆ ಅವರ ಪಕ್ಷದಲ್ಲಿ ಬಿ.ಎಸ್. ಯಡಿಯೂರಪ್ಪ ಒಳಗೊಂಡು ಹಲವರು ಕುಟುಂಬ ರಾಜಕಾರಣ ಮಾಡುತ್ತಿರುವುದು ಕಾಣುತ್ತಿಲ್ಲವೇ? ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡ ಜೆಡಿಎಸ್‌ನಲ್ಲಿ ಕೂಡಾ ಅಪ್ಪ- ಮಕ್ಕಳೇ ಅಧಿಕಾರ ನಡೆಸುತ್ತಿದ್ದಾರೆ. ಅದು ಕಾಣುವುದಿಲ್ಲವೇ? ನಿಮ್ಮ ಪರಿವಾರದವರೇ ಕುಟುಂಬ ರಾಜಕಾರಣ ಮಾಡಿ ದೇಶ ಲೂಟಿ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಅನಂತಕುಮಾರ ಬುಗಡಿ, ಲಿಯೋ ಲೂಯಿಸ್, ಬಾಲಕೃಷ್ಣ ನಾಯ್ಕ, ಗಣಪತಿ ಭಟ್ ಮೊದಲಾದವರು ಇದ್ದರು.ಅರಣ್ಯ ಅತಿಕ್ರಮಣ ಮಾಡಿರುವುದು ತಪ್ಪಾಗಿರಬಹುದು. ಆದರೆ ಅವರು ಅನಾದಿ ಕಾಲದಿಂದಲೂ ಮನೆ ಕಟ್ಟಿಕೊಂಡು ಬದುಕು ನಡೆಸುತ್ತಿದ್ದಾರೆ. ಸಾಗುವಳಿ ಮಾಡುತ್ತಿದ್ದಾರೆ. ಅಂಥವರನ್ನು ಒಕ್ಕಲೆಬ್ಬಿಸಬಾರದು. ಹಕ್ಕುಪತ್ರ ನೀಡಬೇಕು. ಮುಂದೆ ಅರಣ್ಯ ಅತಿಕ್ರಮಣ ಆಗದಂತೆ ನೋಡಿಕೊಳ್ಳಬೇಕು ಎಂದು ಆಮ್ ಆದ್ಮಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ