ಹೊಸಪೇಟೆ: ಭ್ರೂಣಹತ್ಯೆ ತಡೆಗೆ ಜಿಲ್ಲೆಯ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಡಿಎಚ್‌ಒ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ನಿಯಮ ಪಾಲನೆ ಕಡ್ಡಾಯವಾಗಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಹೇಳಿದರು.
ನಗರದಲ್ಲಿ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 72 ಸ್ಕ್ಯಾನಿಂಗ್ ಸೆಂಟರ್‌ಗಳಿವೆ. ಈ ಪೈಕಿ ಐದು ಸರ್ಕಾರಿ ಸೆಂಟರ್‌ಗಳಿದ್ದು, ಉಳಿದವು ಖಾಸಗಿ ಸೆಂಟರ್‌ಗಳಿವೆ. ಈಗಾಗಲೇ ಹರಪನಹಳ್ಳಿಯ ಎರಡು ಸೆಂಟರ್‌ಗಳ ವಿರುದ್ಧ ಕ್ರಮ ವಹಿಸಲು ಸೂಚಿಸಲಾಗಿದೆ. ಈಗಾಗಲೇ ಈ ಸೆಂಟರ್‌ಗಳನ್ನು ಸೀಜ್ ಕೂಡ ಮಾಡಲಾಗಿದೆ. ಇನ್ನು ಹೊಸಪೇಟೆಯ ಶ್ರೀಕರಿ, ಶ್ರೀಪತಿ, ಆರ್.ಎಂ. ಸೆಂಟರ್‌ಗಳಿಗೆ ನಿಯಮ ಪಾಲನೆಗಾಗಿ ನೋಟಿಸ್ ಜಾರಿಗೊಳಿಸಿ. ಸ್ಕ್ಯಾನಿಂಗ್ ಸೆಂಟರ್ ಒಳಗೆ ಸಿಸಿಕ್ಯಾಮೆರಾ ಅಳವಡಿಸಿಲ್ಲ. ಮಕ್ಕಳ ಹಕ್ಕುಗಳ ದಮನವಾಗಿದ್ದರೆ, ಪರಿಶೀಲಿಸಿ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.
ಅಕ್ರಮ ಕೋಚಿಂಗ್ ಸೆಂಟರ್ : ಜಿಲ್ಲೆಯಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್‌ಗಳು ತಲೆ ಎತ್ತಿವೆ. ಮಕ್ಕಳ ಶಿಕ್ಷಣ, ಸುರಕ್ಷೆಗೆ ಮಾರಕವಾದ ಈ ಕೇಂದ್ರಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ 30 ಅನಧಿಕೃತ ಸೆಂಟರ್‌ಗಳಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೂಡ್ಲಿಗಿಯಲ್ಲಿ 12, ಹರಪನಹಳ್ಳಿ-9, ಕೊಟ್ಟೂರು-7, ಹಡಗಲಿಯಲ್ಲಿ 2 ಸೆಂಟರ್‌ಗಳಿವೆ ಎಂದರು.
ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ಕೆಲಸ ಆಗಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯೂ ಕಡಿಮೆ ಇದೆ. ಈ ಬಾರಿ ಎಸ್ಸೆಸ್ಸೆಲ್ಸಿಫಲಿತಾಂಶ ಕಡಿಮೆ ಆಗಿದೆ. ಜಿಲ್ಲೆಯ ಉಪನಾಯಕನಹಳ್ಳಿ ಶಾಲೆಗೆ ಭೇಟಿ ನೀಡಿದಾಗ 21 ಮಕ್ಕಳು ಗೈರು ಹಾಜರಾಗಿದ್ದರು. ಇಂತಹ ಪ್ರಕರಣ ಕಂಡು ಬರುತ್ತಿವೆ. ಬಿಇಒ, ಡಿಡಿಪಿಐ ಈ ಬಗ್ಗೆ ನಿಗಾ ವಹಿಸಬೇಕು ಎಂದರು.
ಡೆಂಘೀ ನಿಯಂತ್ರಣಕ್ಕೆ ಸೂಚನೆ : ಜಿಲ್ಲೆಯಲ್ಲಿ ಮಕ್ಕಳಲ್ಲಿ ಡೆಂಘೀ ಜ್ವರ ಕಾಣಿಸಿಕೊಳ್ಳುತ್ತಿದೆ. 84 ಶಂಕಿತ ಕೇಸು ಕಂಡು ಬಂದಿವೆ. 16 ಮಕ್ಕಳಲ್ಲಿ ಡೆಂಘೀ ದೃಢಪಟ್ಟಿದೆ. ಶಾಲೆ, ಅಂಗನವಾಡಿ, ಹಾಸ್ಟೆಲ್‌ಗಳಲ್ಲಿ ತಪಾಸಣೆಗೆ ಸೂಚಿಸಲಾಗಿದೆ. ಮಕ್ಕಳ ಆರೋಗ್ಯಕ್ಕೆ ಒತ್ತು ನೀಡಬೇಕು. ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ನಡೆಸಬೇಕು ಎಂದರು.
218 ಬಾಲ ಗರ್ಭಿಣಿಯರು: ಜಿಲ್ಲೆಯಲ್ಲಿ 218 ಬಾಲ ಗರ್ಭಿಣಿಯರ ಪ್ರಕರಣ ಬೆಳಕಿಗೆ ಬಂದಿದೆ. ಈ ಪೈಕಿ 53 ಪೋಕ್ಸೋ ಪ್ರಕರಣ ದಾಖಲಾಗಿವೆ. ಜಿಲ್ಲೆಯಲ್ಲಿ 2022ರಲ್ಲಿ 34 ಪೋಕ್ಸೋ ಕೇಸು ದಾಖಲಾದರೆ, 2023ರಲ್ಲಿ 59, 2024ರಲ್ಲಿ 18 ಪ್ರಕರಣ ದಾಖಲಾಗಿವೆ. ಮೂರು ವರ್ಷಗಳಲ್ಲಿ 111 ಪ್ರಕರಣಗಳ ಪೈಕಿ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿದೆ. ಪೊಲೀಸ್ ಇಲಾಖೆ ತ್ವರಿತ ತನಿಖೆ ನಡೆಸಿ, ಕ್ರಮ ವಹಿಸಲು ತಿಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 462 ಇದೆ. ಪೋಷಣ್ ಟ್ರ್ಯಾಕ್ ತಂಡ ಕಾರ್ಯಾಚರಣೆ ನಡೆಸಬೇಕು. ಮಕ್ಕಳನ್ನು ಅಪೌಷ್ಟಿಕತೆಯಿಂದ ಪಾರು ಮಾಡಲು ಕ್ರಮ ವಹಿಸಬೇಕು. ಕಳೆದ ಮೂರು ತಿಂಗಳಲ್ಲಿ 41 ಮಕ್ಕಳು ಜನನದ ವೇಳೆ ಮೃತಪಟ್ಟಿವೆ. ಈ ಬಗ್ಗೆ ಅಗತ್ಯ ಸುರಕ್ಷಾ ಕ್ರಮ ವಹಿಸಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 98 ಬಾಲ್ಯವಿವಾಹ ಪ್ರಕರಣಗಳಲ್ಲಿ 89 ಮದುವೆ ತಡೆಹಿಡಿಯಲಾಗಿದೆ. 9 ಪ್ರಕರಣಗಳಲ್ಲಿ ಎಫ್‌ಐಆರ್ ಆಗಿದೆ ಎಂದರು.
ವಸತಿ ಶಾಲೆಗಳಲ್ಲಿ ದೂರು, ಸಲಹಾಪೆಟ್ಟಿಗೆ ಇಡಬೇಕು. ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಕಂಡು ಬಂದರೆ ಕೂಡಲೇ ಸಂಬಂಧಿಸಿದ ಇಲಾಖೆ ಕಾನೂನು ಕ್ರಮ ವಹಿಸಬೇಕು ಎಂದರು.
ಮಕ್ಕಳ ದತ್ತು ಪಾಲನಾ ಕೇಂದ್ರ ತಪಾಸಣೆಗೆ ಕ್ರಮ ವಹಿಸಲಾಗುವುದು. ಬಾಲ್ಯವಿವಾಹ ತಡೆ ಸಂಬಂಧ ಬಂದ ಪ್ರಕರಣಗಳ ಪರಿಶೀಲನೆಗೆ ಮನೆಗಳ ಭೇಟಿ ನೀಡಿ ಕ್ರಮ ವಹಿಸಲು ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಂದೀಪ್ ಕುಮಾರ ಉಂಕ್ರಿ ಇದ್ದರು.