------ಅಂಶಿ ಪ್ರಸನ್ನಕುಮಾರ್‌ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ತಾಲೂಕು ನುಗ್ಗೆಹಳ್ಳಿಯ ಎಸ್. ರವಿಚಂದ್ರ ಪ್ರಗತಿಪರ ಯುವ ರೈತರಾಗಿದ್ದು, 3.17 ಎಕರೆ ಜಮೀನಿನಲ್ಲಿ ಕಳೆದ 8 ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ.ಮಳೆಯಾಶ್ರಿತ, ನೀರಾವರಿ ಹಾಗೂ ತೋಟಗಾರಿಕಾ ಜಮೀನನ್ನು ಹೊಂದಿದ್ದು, ಸಮಗ್ರ ಹಿಡುವಳಿ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ಭತ್ತ, ರಾಗಿ, ಅಲಸಂದೆ ಹಾಗೂ ತೋಟಗಾರಿಕಾ ಬೆಳೆಗಳಾದ ತೆಂಗು, ಬಾಳೆ, ಮಾವು, ಗುಲಾಬಿ ಮತ್ತು ಪಪ್ಪಾಯ ಬೆಳೆಯುತ್ತಿದ್ದಾರೆ. ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದು ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳಿಂದ ವಾರ್ಷಿಕವಾಗಿ 4 ಲಕ್ಷ ರು. ನಿವ್ವಳ ಆದಾಯ ಗಳಿಸುತ್ತಿದ್ದಾರೆ. ರೇಷ್ಮೆ ಕೃಷಿಯನ್ನೂ ಅನುಸರಿಸುತ್ತಿದ್ದು, ವಾರ್ಷಿಕವಾಗಿ 3 ಲಕ್ಷ ರು. ಆದಾಯ ಗಳಿಸುತ್ತಾರೆ. ಜಮೀನಿನ ಸುತ್ತಲೂ ತೇಗ, ಸಿಲ್ವರ್, ಬೇವಿನ ಮರಗಳನ್ನು ಬೆಳೆಸಿದ್ದಾರೆ. ಉಪಕಸುಬಾಗಿ ಹೈನುಗಾರಿಕೆಯಲ್ಲಿ 5 ಹಸು, 3 ಕುರಿ, 4 ಮೇಕೆ, 130 ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ ಇದರಿಂದ 1.25 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ. ಮೇವಿನ ಬೆಳೆಯಾಗಿ ನೇಪಿಯರ್ ಹುಲ್ಲನ್ನು ಬೆಳೆಯುತ್ತಿದ್ದಾರೆ. ಕೃಷಿ ಹೊಂಡದಲ್ಲಿ ಮೀನಿನ ನೂತನ ತಳಿಯಾದ ತಿಲಾಪಿಯಾವನ್ನು ಸಾಕಾಣಿಕೆ ಮಾಡುತ್ತಿದ್ದಾರೆ ಮತ್ತು ಮಳೆ ನಿರು ಸಂಗ್ರಹಣೆ, ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ರವಿಚಂದ್ರ ಅವರು ಕೃಷಿ ಮತ್ತು ಹೈನುಗಾರಿಕೆ ತ್ಯಾಜ್ಯ ಬಳಕೆಯಿಂದ ಸಾವಯವ ಗೊಬ್ಬರ ಉತ್ಪಾದಿಸಿ ಅದನ್ನು ತಮ್ಮ ಜಮೀನಿನಲ್ಲಿಯೇ ಬಳಸುತ್ತಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಯಾಗಿದ್ದು, ಇಲ್ಲಿ ಜರುಗುವ ವಿವಿಧ ಸಭೆಗಳಲ್ಲಿ ಭಾಗವಹಿಸಿ ರೈತರು ಹಾಲಿನ ಇಳುವರಿ ಹೆಚ್ಚಿಸಲು ಅನುಸರಿಬೇಕಾದ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಹಲವಾರು ಮಂದಿ ರೈತರು ಇವರ ಜಮೀನಿಗೆ ಕ್ಷೇತ್ರ ವೀಕ್ಷಣೆ ಮಾಡಿ ಮಾಹಿತಿ ಪಡೆದು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ. ತಮ್ಮ ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ತರಕಾರಿ ಮಾರುಕಟ್ಟೆ ಸಮಿತಿ, ತೋಟಗಾರಿಕಾ ಉತ್ಪನ್ನಗಳ ಮಾರಾಟ ಸಹಕಾರ ಸಂಘಗಳಿಂದ ಮಾಹಿತಿ ಪಡೆಯುತ್ತಾರೆ. ಇದಲ್ಲಿದೇ ಕೃಷಿ ತಂತ್ರಜ್ಞಾನ ನಿರ್ವಹಣೆಗೆ ಸಂಬಂಧಿಸಿದಂತೆ ಮಾಧ್ಯಮಗಳು, ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ಸಂಪರ್ಕ ಹೊಂದಿದ್ದು, ಕಾಲಕಾಲಕ್ಕೆ ಹೊರಬರುವ ನವೀನ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ನೂತನ ತಾಂತ್ರಿಕತೆಗಳನ್ನು ತಮ್ಮ ಜಮಿನಿನಲ್ಲಿ ಅಳವಡಿಸಿಕೊಂಡು ಯಶಸ್ವಿ ಪ್ರಗತಿಪರ ರೈತರೆನಿಸಿಕೊಂಡಿದ್ದಾರೆ. ಇವರು ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಲ್ಲಿ ಕೈಗೊಳ್ಳಲಾಗುವ ಮುಂಚೂಣಿ ಪ್ರಾತ್ಯಕ್ಷಿಕೆ ಹಾಗೂ ಆ ತಾಂತ್ರಿಕತೆಗಳನ್ನು ರೈತರುಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಒಟ್ಟಾರೆ ಖರ್ಚು-ವೆಚ್ಚ ಕಳೆದು ವಾರ್ಷಿಕ 5.25 ಲಕ್ಷ ರು. ನಿವ್ವಳ ಆದಾಯ ಗಳಿಸುತ್ತಿದ್ದಾರೆ.ಸಂಪರ್ಕ ವಿಳಾಸಃ ಎಸ್. ರವಿಚಂದ್ರ ಬಿನ್ ಶಿವಣ್ಣ, ನುಗ್ಗೆಹಳ್ಳಿ ಇಲವಾಲ ಹೋಬಳಿ, ಮೈಸೂರು ತಾಲೂಕು,ಮೊ. 98806 88523---ಕೋಟ್ ನಮ್ಮ ಬಹುತೇಕ ಉತ್ಪನ್ನಗಳನ್ನು ಜಮೀನು ಬಳಿಯೆ, ಮಾರಾಟ ಮಾಡುತ್ತೇನೆ. ಮಾರುಕಟ್ಟೆ ದರಕ್ಕಿಂತ 10- 20 ರು. ಕಡಿಮೆಗೆ ಕೊಡುತ್ತೇನೆ. ಸಗಟಾಗಿ ಮಾರುವುದರಿಂದ ನಮಗೆ ನಷ್ಟವಾಗುವುದಿಲ್ಲ. ಜೊತೆಗೆ ಸಾಗಣೆ ವೆಚ್ಚ ಉಳಿಯುತ್ತದೆ.- ರವಿಚಂದ್ರ, ನುಗ್ಗೆಹಳ್ಳಿ