ಲಕ್ಷ್ಮೇಶ್ವರ: ಕನ್ನಡ ಭಾಷೆ ತನ್ನದೇ ಆದ ಶ್ರೇಷ್ಠ, ಶ್ರೀಮಂತ ಇತಿಹಾಸ ಹೊಂದಿ ಶಾಸ್ತ್ರೀಯ ಭಾಷೆಯ ಮನ್ನಣೆ ಪಡೆದಿದೆ.ಇಂತಹ ಭಾಷೆಯ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಹಿರಿದಾಗಿದೆ. ಇದಕ್ಕೆ ಅನೇಕ ಮಹನೀಯರು ಕಾರಣರಾಗಿದ್ದಾರೆ. ಕನ್ನಡ ಭಾಷೆಯ ಉಳಿಸಿ ಬೆಳೆಸಲು ನಾವೆಲ್ಲರೂ ಕಡ್ಡಾಯವಾಗಿ ಬಳಸಿದರೆ ಮಾತ್ರ ಈ ಕಾರ್ಯವಾಗುತ್ತದೆ ಎಂದು ಹಿರಿಯ ಸಾಂಸ್ಕೃತಿಕ ಚಿಂತಕ ಡಿ.ಬಿ. ಬಳಿಗಾರ ಹೇಳಿದರು.
ಭಾನುವಾರ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ೧೧೦ನೇ ಸಂಸ್ಥಾಪನಾ ದಿನಾಚರಣೆ ಹಾಗೂ ವಿದ್ಯಾರ್ಥಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಲಕ್ಷ್ಮೇಶ್ವರ ತಾಲೂಕು ಕಸಾಪ ಘಟಕದ ವತಿಯಿಂದ ಅತ್ಯುತ್ತಮ ಕಾರ್ಯಚಟುವಟಿಕೆಗಳು ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ರಾಂತ ಪ್ರಾಚಾರ್ಯ ಎಸ್.ಎನ್. ಮಳಲಿ ಕಸಾಪ ಲಕ್ಷ್ಮೇಶ್ವರ ತಾಲೂಕು ಘಟಕ ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮ ಸಂಘಟಿಸುವುದರ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ಘಟಕವಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ.ರಾ.ವಿ.ಪ.ಜಿಲ್ಲಾ ಅಧ್ಯಕ್ಷ ರಮೇಶ ರಿತ್ತಿ, ಕಾರ್ಯಕಾರಿ ಸಮಿತಿ ಸದಸ್ಯ ಬಾಪುಗೌಡ್ರ ಭರಮಗೌಡ್ರ, ಗಂಗಾಧರ ಅರಳಿ ಮಾತನಾಡಿದರು.
ದಿನಾಚರಣೆಯ ಅಂಗವಾಗಿ ನಡೆದ ವಿದ್ಯಾರ್ಥಿ ವಿಚಾರ ಸಂಕಿರಣದಲ್ಲಿ ಶ್ರೀನಿಧಿ ಶಿಳ್ಳಿನ, ಪೂಜಾ ಆರಾಧ್ಯಮಠ, ರಕ್ಷಿತಾ ಸಂಗನಪೇಟ ಮತ್ತು ಸಹನಾ ಮೇಟಿ ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು ವಿಷಯದ ಕುರಿತು ಉತ್ತಮವಾಗಿ ವಿಷಯ ಮಂಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿಶ್ರಾಂತ ಮುಖ್ಯ ಶಿಕ್ಷಕಿ ಎ.ಎಸ್. ಸವದತ್ತಿ ಹಾಗೂ ವಿಶ್ರಾಂತ ಶಿಕ್ಷಕ ವಿ.ಎಂ.ಹೂಗಾರ ಕನ್ನಡದ ನಾಡಿನ ಶ್ರೀಮಂತಿಕೆಯ ಹಾಡುಗಳನ್ನು ಪ್ರಸ್ತುತ ಪಡಿಸಿದರು.ಕಾರ್ಯಕ್ರಮದ ಸಂಚಾಲಕ ಎಸ್.ಬಿ.ಅಣ್ಣಿಗೇರಿ, ಪಿ.ಎಚ್. ಕೊಂಡಾಬಿಂಗಿ, ಶಂಕ್ರಪ್ಪ ಶಿಳ್ಳಿನ ದಂಪತಿಗಳು, ಈರಣ್ಣ ಗಾಣಿಗೇರ ಉಪಸ್ಥಿತರಿದ್ದರು. ಶ್ರೀನಿಧಿ ಶಿಳ್ಳಿನ ಪ್ರಾರ್ಥಿಸಿದರು. ಕಾರ್ಯಕಾರಿ ಮಹಿಳಾ ಸದಸ್ಯ ನಿರ್ಮಲಾ ಅರಳಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ನಿರೂಪಿಸಿದರು. ಕನ್ನಡ ಉಪನ್ಯಾಸಕ ತಮ್ಮನಗೌಡ ಪಾಟೀಲ ವಂದಿಸಿದರು.