ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಹಿಳಾ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ವರದಿಯಾಗುತ್ತಿರುವ ಜೊತೆಗೆ ಸಖಿಯ ನೆರವು ಪಡೆದವವರ ಸಂಖ್ಯೆಯೂ ಹೆಚ್ಚಳಗೊಂಡಿದೆ.
ಕುಟುಂಬ, ಸಮುದಾಯ, ಕೆಲಸದ ಸ್ಥಳಗಳು, ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ನೆರವು ಒದಗಿಸಲು ಶಿವಮೊಗ್ಗದಲ್ಲಿ 24*7 ಕಾರ್ಯ ನಿರ್ವಹಿಸುತ್ತಿದೆ ‘ಸಖಿ’ ಒನ್ ಸ್ಟಾಪ್ ಸೆಂಟರ್.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ನಗರದ ಆಲ್ಕೋಳ ವೃತ್ತದ ಬಳಿ ಸರ್ಕಾರಿ ಬಾಲಕರ ಬಾಲ ಮಂದಿರದ ಆವರಣದಲ್ಲಿ ನೊಂದ ಮಹಿಳೆಯರಿಗಾಗಿ ‘ಸಖಿ’ ಒನ್ ಸ್ಟಾಪ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ.
1400 ಜನ ಮಹಿಳೆರಿಂದ ದೂರು: ಶಿವಮೊಗ್ಗ ಜಿಲ್ಲೆ ‘ಸಖಿ’ ಒನ್ ಸ್ಟಾಪ್ ಸೆಂಟರ್‌ನಲ್ಲಿ 2019 ರಿಂದ ಇಲ್ಲಿಯವರೆಗೂ 1400 ಜನ ಮಹಿಳೆಯರು-ಹೆಣ್ಣುಮಕ್ಕಳು ದೂರು ನೀಡಿದ್ದಾರೆ. ಈ ದೂರುಗಳ ಪೈಕಿ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ದೂರುಗಳ ಸಂಖ್ಯೆಯೇ ಹೆಚ್ಚಾಗಿದೆ.
ಈ ಪ್ರಕರಣಗಳಲ್ಲಿ ಈವರೆಗೆ 1179 ಸಂತ್ರಸ್ತರಿಗೆ ಕಾನೂನು ನೆರವು ಮತ್ತು ಸಮಾಲೋಚನೆ ನೀಡಲಾಗಿದ್ದು, 447 ವೈದ್ಯಕೀಯ ನೆರವು ನೀಡಲಾಗಿದೆ. ದೌರ್ಜನ್ಯ ಕ್ಕೊಳಗಾಗಿ ಮನೊರೋಗದಿಂದ ಬಳಲುತ್ತಿದ್ದ 1092 ಜನರನ್ನು ಸಮಾಲೋಚನೆಗೆ ಒಳಪಡಿಸಲಾಗಿದೆ. 476 ಜನರಿಗೆ ಪೋಲಿಸ್ ನೆರವು, 234 ಜನರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.
ಒಂದೇ ಸೂರಿನಡಿ 5 ಸೌಲಭ್ಯಗಳು: ನೊಂದವರಿಗೆ ತಾತ್ಕಾಲಿಕ ಆಶ್ರಯ, ಆಪ್ತ ಸಮಾಲೋಚನೆ, ವೈದ್ಯಕೀಯ ನೆರವು, ಪೊಲೀಸ್ ನೆರವು, ಕಾನೂನು ನೆರವು ಈ ಐದು ಸೌಲಭ್ಯಗಳ ಮೂಲಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ನೆರವು ನೀಡಲಾಗುತ್ತದೆ.ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ವೈದ್ಯಾಧಿಕಾರಿಗಳ ಮೂಲಕ ವೈದ್ಯಕೀಯ ಪರೀಕ್ಷೆ ಮಾಡಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ತಜ್ಞರಿಂದ ಅಗತ್ಯ ಆಪ್ತ ಸಮಾಲೋಚನೆ ಮಾಡಿಸುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ದೂರು ನೀಡಿದ ಬಳಿಕ ಪೊಲೀಸ್ ಮಹಾನಿರ್ದೇಶಕರಿಂದ ನಿಯೋಜಿಸ್ಪಟ್ಟ ಇನ್‍ಸ್ಪೆಕ್ಟರ್ ದರ್ಜೆಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕೇಂದ್ರಕ್ಕೆ ಭೇಟಿ ನೀಡಿ ಎಫ್‍ಐಆರ್ ದಾಖಲಿಸಿಕೊಳ್ಳುತ್ತಾರೆ. ಬಳಿಕ ಅದನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ. ಬಳಿಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೇಮಿಸಲ್ಪಟ್ಟ ಕಾನೂನು ಸಲಹೆಗಾರರಿಂದ ಅಗತ್ಯ ಕಾನೂನು ನೆರವು ಒದಗಿಸಲಾಗುತ್ತದೆ. ಅಲ್ಲದೆ, ದೌರ್ಜನ್ಯಕ್ಕೊಳಗಾದ ಮಹಿಳೆಯರು ಹಾಗೂ ಮಕ್ಕಳಿಗೆ ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಾ ಸಂಸ್ಥೆ ಅಥವಾ ಸರ್ಕಾರಿ ಗೃಹಗಳಲ್ಲಿ ಆಶ್ರಯ ಒದಗಿಸಿ ರಕ್ಷಣೆ ನೀಡಲಾಗುತ್ತದೆ. ಸಂತ್ರಸ್ತರು ನೇರವಾಗಿ ಕೇಂದ್ರಕ್ಕೆ ಬಂದು ದೂರು ನೀಡಬಹುದು.
ಸಂಪರ್ಕ ವಿಳಾಸ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರಿ ಬಾಲಕರ ಬಾಲಮಂದಿರ ಆವರಣ,100 ಅಡಿ ರಸ್ತೆ, ಆಲ್ಕೋಳ, ಶಿವಮೊಗ್ಗ, ಸಖಿ ದೂರವಾಣಿ-08187-223055, ಉಪ ನಿರ್ದೇಶಕರ ಕಛೇರಿ :08182-295514 ಜಿಲ್ಲಾ ಮಕ್ಕಳ ರಕ್ಷಣಾ ಘಟಕ:08182-295709,ಉಚಿತ ಮಕ್ಕಳ ಸಹಾಯವಾಣಿ-1098, ಉಚಿತ ಮಹಿಳಾ ಸಹಾಯವಾಣಿ-181. ಸಂಪರ್ಕಿಸಬಹುದಾಗಿದೆ.