ಫೆಬ್ರವರಿ 23 ರಿಂದ ಸಕಲೇಶಪುರ ಬೈಪಾಸ್‌ ಓಪನ್‌

KannadaprabhaNewsNetwork | Published : Feb 23, 2024 1:46 AM

ಸಾರಾಂಶ

ಫೆ.23ರಿಂದ ಮೂರು ದಿನಗಳ ಕಾಲ ಸಕಲೇಶಪುರ ಬೈಪಾಸ್ ರಸ್ತೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ೭೫ ಬೈಪಾಸ್ ರಸ್ತೆ ಕನಸು ೧೯೭೫ ರಲ್ಲಿ ಚಿಗುರೊಡೆದಿದ್ದು ೧೯೮೨-೮೩ರಲ್ಲಿ ಬೈಪಾಸ್ ರಸ್ತೆಗಾಗಿ ಭೂಮಿ ಸಹ ವಶಕ್ಕೆ ಪಡೆಯಲಾಗಿತ್ತು.

ವಾಹನ ಸಂಚಾರಕ್ಕೆ 3 ದಿನ ಅವಕಾಶ । ಅತಿವೇಗದಲ್ಲಿ ಬೈಪಾಸ್‌ ಪೂರ್ಣ । ಬಿರುಸಿನಿಂದ ನಡೆಯುತ್ತಿರುವ ಪ್ರವೇಶದ್ವಾರದ ಬಾಕಿ ಕಾಮಗಾರಿಕನ್ನಡಪ್ರಭ ವಾರ್ತೆ ಸಕಲೇಶಪುರ

ಫೆ.23ರಿಂದ ಮೂರು ದಿನಗಳ ಕಾಲ ಸಕಲೇಶಪುರ ಬೈಪಾಸ್ ರಸ್ತೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ೭೫ ಬೈಪಾಸ್ ರಸ್ತೆ ಕನಸು ೧೯೭೫ ರಲ್ಲಿ ಚಿಗುರೊಡೆದಿದ್ದು ೧೯೮೨-೮೩ರಲ್ಲಿ ಬೈಪಾಸ್ ರಸ್ತೆಗಾಗಿ ಭೂಮಿ ಸಹ ವಶಕ್ಕೆ ಪಡೆಯಲಾಗಿತ್ತು.

ಅಂದು ಸಕಲೇಶಪುರ ಪಟ್ಟಣದ ಆಗ್ರಹಾರ ಬಡಾವಣೆಯ ಸಮೀಪ ಕವಲೊಡೆದು ತೋಟದಗದ್ದೆ ಗ್ರಾಮ ಸಂದಿಸುತ್ತಿದ್ದ ನಾಲ್ಕು ಕಿಮೀ ಬೈಪಾಸ್ ರಸ್ತೆಗೆ ಪಟ್ಟಣದ ಬಾಳೆಗದ್ದೆ ಬಡಾವಣೆಯ ನಾಗರಿಕರು ವಿರೋದ ವ್ಯಕ್ತಪಡಿಸಿದ್ದರು. ಬೈಪಾಸ್ ರಸ್ತೆ ಪಟ್ಟಣದೊಳಗೆ ಹಾದುಹೋಗಲಿದೆ. ಇದರಿಂದ ಸಾಕಷ್ಟು ನಾಗರಿಕರು ಮನೆ, ಅಂಗಡಿಮುಂಗಟ್ಟುಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ದಾವಣಗೆರೆಯಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ ನಂತರ ಈ ಯೋಜನೆಯನ್ನು ಕೈಬಿಡಲಾಗಿತ್ತು.

೨೦೦೧ ರ ನಂತರ ಕೊಲ್ಲಹಳ್ಳಿ ಗ್ರಾಮ ಸಮೀಪ ಕವಲೊಡೆಯಲಿರುವ ಬೈಪಾಸ್ ರಸ್ತೆಗೆ ನೀಲನಕ್ಷೆ ಸಿದ್ದಪಡಿಸಿದ್ದು ಕೊಲ್ಲಹಳ್ಳಿ ಗ್ರಾಮ ಸಮೀಪದ ೨೧೪.೫ ನೇ ಕಿಮೀ ಸಮೀಪ ಕವಲೊಡೆಯುವ ಬೈಪಾಸ್ ರಸ್ತೆ ತೋಟದಗದ್ದೆ ಗ್ರಾಮ ಸಮೀಪದ ಕೊಲ್ಲಹಳ್ಳಿ ಗ್ರಾಮದ ಹೊರವಲಯದ ಮೂಲಕ ಮಳಲಿ ಗ್ರಾಮ ಸಂದಿಸುವ ಬೈಪಾಸ್ ರಸ್ತೆ ಕಾಮಗಾರಿ ೨೦೧೬ ರಲ್ಲಿ ಆರಂಭವಾಗಿತ್ತು. ಬೈಪಾಸ್ ಕಾಮಗಾರಿ ೨೦೨೨ ರ ನಂತರ ವೇಗ ಪಡೆದಿದ್ದು ೫.೫ ಕಿಮೀ ಕಾಂಕ್ರೀಟ್ ಕಾಮಗಾರಿ ಹಾಗೂ ೪೦೦ ಮೀಟರ್ ಉದ್ದದ ಎರಡು ಪಥದ ಹೇಮಾವತಿ ಸೇತುವೆ ಕೇವಲ ಒಂದು ವರ್ಷದಲ್ಲಿ ಮುಕ್ತಾಯಗೊಂಡಿದೆ. ಕಳೆದ ಒಂದು ತಿಂಗಳ ಹಿಂದೆ ಒಂದು ಪಥದ ಸೇತುವೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದರೆ, ಫೆಬ್ರವರಿ ೨೦ಕ್ಕೆ ಎರಡು ಪಥದ ಕಾಮಗಾರಿ ಸಹ ಮುಕ್ತಾಯಗೊಂಡಿದೆ.

ಸದ್ಯ ಕೊಲ್ಲಹಳ್ಳಿ ಗ್ರಾಮ ಸಮೀಪ ಕವಲೊಡೆಯುವ ಬೈಪಾಸ್ ಪ್ರವೇಶದ್ವಾರದಲ್ಲಿ ಬಾಕಿ ಉಳಿದಿದ್ದ ಕಾಮಗಾರಿ ಕಳೆದ ಎರಡು ದಿನಗಳಿಂದ ಬಿರುಸಿನಿಂದ ನಡೆಯುತ್ತಿದೆ. ಸೇತುವೆಯ ಎರಡು ಬದಿಯ ಪಾದಚಾರಿ ರಸ್ತೆ ಕಾಮಗಾರಿ ಸಹ ವೇಗದಲ್ಲಿ ಸಾಗಿದೆ. ಉಳಿದಂತೆ ಹಳೇ ಬೇಲೂರು ರಸ್ತೆ ಸಮೀಪ ಒಂದು ಬದಿಯ ಕಾಮಗಾರಿಗೆ ಹೈಟೆನ್ಷನ್ ವಿದ್ಯುತ್ ಟವರ್ ಅಡ್ಡಿಯಾಗಿರುವುದರಿಂದ ಒಂದು ಬದಿಯ ಬೈಪಾಸ್‌ನ ನೂರು ಮೀಟರ್ ಕಾಮಗಾರಿ ಬಾಕಿಯಿದೆ. ಅದನ್ನು ಹೊರತುಪಡಿಸಿ ಬಹುತೇಕ ೫.೫ ಕಿ.ಮಿ ಬೈಪಾಸ್ ಕಾಮಗಾರಿ ಮುಕ್ತಾಯಗೊಂಡಿದೆ. ನೂರು ಮೀಟರ್ ಕಾಮಗಾರಿ ಬಾಕಿ ಉಳಿದಿರುವುದರಿಂದ ಬೈಪಾಸ್‌ನಲ್ಲಿ ಏಕಪಥದ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತಿದೆ.

ಸದ್ಯ ಫೆ.೨೩ ರಿಂದ ೨೬ರ ವರಗೆ ಮೂರು ದಿನಗಳ ಕಾಲ ಬೈಪಾಸ್ ರಸ್ತೆಯನ್ನು ಸಂಚಾರಕ್ಕೆ ಪ್ರಯೋಗಿಕವಾಗಿ ಮುಕ್ತಗೊಳಿಸುತ್ತಿದ್ದು ಅಧಿಕೃತವಾಗಿ ಮಾರ್ಚ ಅಂತ್ಯದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಸಚಿವರ ಸಮ್ಮುಖದಲ್ಲಿ ಸಂಚಾರ ಆರಂಭವಾಗಲಿದೆ.

ಇಲ್ಲ ಟ್ರಾಫಿಕ್:

ಸದ್ಯ ಸಕಲೇಶ್ವರಸ್ವಾಮಿ ಜಾತ್ರೆ ರಥೋತ್ಸವ ಫೆ.೨೪ ಹಾಗೂ ೨೫ ರಂದು ಜರುಗಲಿದ್ದು ಸಕಲೇಶ್ವರಸ್ವಾಮಿ ರಥೋತ್ಸವದ ವೇಳೆ ಬೈಪಾಸ್ ಸಂಚಾರವನ್ನು ಪ್ರಯೋಗಿಕವಾಗಿ ಆರಂಭಿಸಲಾಗುತ್ತಿರುವುದರಿಂದ ಈ ಬಾರಿ ರಥೋತ್ಸವದ ವೇಳೆ ಪಟ್ಟಣ ವಾಹನ ದಟ್ಟಣೆಯಿಂದ ಮುಕ್ತಗೊಳ್ಳಲಿದೆ.

ಬೈಪಾಸ್ ಸಂಚಾರವನ್ನು ಪ್ರಯೋಗಿಕವಾಗಿ ಆರಂಭಿಸುವ ಯೋಜನೆಯನ್ನು ಮಾರ್ಚ್‌ನಲ್ಲಿ ನಡೆಯಲಿದೆ. ಆದರೆ, ಸಕಲೇಶ್ವರಸ್ವಾಮಿ ರಥೋತ್ಸವ ದಿನ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ಪ್ರಾಯೋಗಿಕ ಸಂಚಾರ ಆರಂಭಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಿಮೆಂಟ್ ಮಂಜು, ಶಾಸಕ.

ಬಹುವರ್ಷದ ಕನಸು ಈಗ ಈಡೇರುತ್ತಿದೆ. ಪಟ್ಟಣದ ಸಾಮಾನ್ಯ ಜನರಿಗೆ ಬೈಪಾಸ್ ರಸ್ತೆ ಸಂಚಾರಕ್ಕೆ ಮುಕ್ತಗೊಳ್ಳುತ್ತಿರುವುದರಿಂದ ಸಂತಸವಿದ್ದರೆ ವರ್ತಕರಲ್ಲಿ ಆತಂಕವಿದೆ.

ಧಾರೇಶ್, ವರ್ತಕ.ಸಕಲೇಶಪುರ ಬೈಪಾಸ್ ರಸ್ತೆ.

Share this article