ಮುಂದಿನ 3-4 ತಿಂಗಳಲ್ಲಿ ಸಕಲೇಶಪುರದಿಂದ ಮಾರನಹಳ್ಳಿವರೆಗೆ ಹೆದ್ದಾರಿ-75ರ ನಾಲ್ಕುಪಥ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ಹಾಸನ : ಮುಂದಿನ 3-4 ತಿಂಗಳಲ್ಲಿ ಸಕಲೇಶಪುರದಿಂದ ಮಾರನಹಳ್ಳಿವರೆಗೆ ಹೆದ್ದಾರಿ-75ರ ನಾಲ್ಕುಪಥ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ತಾಲೂಕಿನ ದೋಣಿಗಾಲ್ ಹಾಗೂ ದೊಡ್ಡತಪ್ಪಲೆಯಲ್ಲಿ ಹೆದ್ದಾರಿ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕಲೇಶಪುರ-ಮಾರನಹಳ್ಳಿ ನಡುವಿನ ಚತುಷ್ಪಥ ಸಿಮೆಂಟ್ ರಸ್ತೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಕೆಲವು ಕಡೆಗಳಲ್ಲಿ ಭೂಕುಸಿತ ಸಮಸ್ಯೆ ಎದುರಾಗುತ್ತಿದೆ. ಇದನ್ನು ಗಮನಕ್ಕೆ ತೆಗೆದುಕೊಂಡ ಸಂಸದರು, ಎತ್ತರದ ತಡೆಗೋಡೆ ನಿರ್ಮಿಸಿ ಭೂಕುಸಿತ ತಡೆಯಬೇಕು ಎಂದು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು.
ರೈತರಿಗೆ ಸೂಕ್ತ ಪರಿಹಾರ ನೀಡಿ:
ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ರೈತರಿಂದ ಭೂಸ್ವಾಧೀನ ಮಾಡಿಕೊಳ್ಳಲಾಗಿದ್ದು, ಅದರಿಗಿಂತ ಹೆಚ್ಚು ಭೂಮಿಯನ್ನು ಕಾಮಗಾರಿಗೆ ಬಳಸಿಕೊಂಡಿರುವ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಪ್ರತಿನಿತ್ಯ 20,000ಕ್ಕೂ ಹೆಚ್ಚು ವಾಹನಗಳು ಸಂಚಾರ ನಡೆಸುವ ಹೆದ್ದಾರಿ-75ರ ಶಿರಾಡಿಘಾಟ್ ರಸ್ತೆಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲು ಶತಪ್ರಯತ್ನ ನಡೆಯುತ್ತಿದೆ. ಕಾಮಗಾರಿ ನಿರ್ವಹಣೆಗಾಗಿ ಒಂದು ತಿಂಗಳ ಕಾಲ ಸಕಲೇಶಪುರದಿಂದ ಮಾರನಹಳ್ಳಿವರೆಗೆ ರಸ್ತೆ ಬಂದ್ ಮಾಡಲಾಗುವುದು. ಈ ಅವಧಿಯಲ್ಲಿ ಬದಲೀ ಸಂಪರ್ಕ ಮಾರ್ಗ ವ್ಯವಸ್ಥೆ ಮಾಡಲಾಗುತ್ತಿದ್ದು, ರಸ್ತೆ ಬಂದ್ ಮಾಡುವ ಬಗ್ಗೆ ಒಂದು ವಾರ ಮುಂಚಿತವಾಗಿ ಸಾರ್ವಜನಿಕ ಪ್ರಕಟಣೆ ನೀಡಲಾಗುವುದು ಎಂದು ಹೇಳಿದರು.
ಪರಿಹಾರದ ಬಗ್ಗೆ ಅವಲೋಕನ:
ಮುಂದಿನ ೨-೩ ತಿಂಗಳಲ್ಲಿ ಮಳೆಗಾಲ ಶುರುವಾಗಲಿದೆ. ಹಿಂದೆ ಭೂ ಕುಸಿತ ಉಂಟಾಗಿದ್ದ ಕಡೆಗಳಲ್ಲಿ ಏನೆಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂಬುದರ ಬಗ್ಗೆ ಒಂದು ತಂಡವಾಗಿ ಪರಿಶೀಲನೆ ಮಾಡಿದ್ದೇವೆ ಎಂದರು. ಎಲ್ಲೆಲ್ಲಿ ಸಮಸ್ಯೆ ಇದೆ, ಪರಿಹಾರ ಏನು ಎಂಬುದರ ಬಗ್ಗೆ ಅವಲೋಕನ ಮಾಡಿದ್ದೇವೆ. ಬರುವ ಜೂನ್ ೩೦ ರೊಳಗೆ ಕಾಮಗಾರಿ ಮುಗಿಸುವ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶೇ.೧೦೦ರಷ್ಟು ಭರವಸೆ ನೀಡಿದ್ದಾರೆ. ಹೆಚ್ಚೆಂದರೆ ಮತ್ತೊಂದು ತಿಂಗಳು ಮುಂದಕ್ಕೆ ಹೋಗಬಹುದು. ಒಟ್ಟಿನಲ್ಲಿ ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ಹೆದ್ದಾರಿ ಸಂಪೂರ್ಣ ಸಂಚಾರ ಮುಕ್ತವಾಗಲಿದೆ ಎಂದು ತಿಳಿಸಿದರು.
ಮುಖ್ಯವಾಗಿ ಮಳೆಗಾಲದಲ್ಲಿ ದೊಡ್ಡತಪ್ಪಲು ಸೇರಿದಂತೆ ಕೆಲವು ಕಡೆ, ಭೂ ಕುಸಿತ ತಡೆಯಲು ಒತ್ತು ನೀಡಿದ್ದೇವೆ. ಹಿಂದೆ ಭೂ ಸ್ವಾಧೀನ ಮಾಡಿದವರ ಅವೈಜ್ಞಾನಿಕ ಕ್ರಮ ಹಾಗೂ ತಪ್ಪಿನಿಂದಾಗಿ ನೇರವಾಗಿ ಗುಡ್ಡ ಕಡಿದಿರುವುದರಿಂದ ಕೆಲವೆಡೆ ಕುಸಿತಕ್ಕೆ ಕಾರಣವಾಗಿದೆ. ಇದನ್ನು ತಡೆಯಲು ಇಳಿಜಾರಾಗಿ ಗುಡ್ಡ ಕತ್ತರಿಸಲು ಮತ್ತಷ್ಟು ಭೂ ಸ್ವಾಧೀನ ಮಾಡಬೇಕಿದೆ. ಅದಕ್ಕೂ ಮುನ್ನ ಕಾಫಿಗಿಡ, ಮರಗಳಿಗೆ ಪರಿಹಾರ ಕೊಡಬೇಕಿದೆ. ಇನ್ನೂ ಎಷ್ಟು ಮೀಟರ್ ಭೂಮಿ ಬೇಕು ಎಂಬುದರ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗಿ ವರದಿ ಸಿದ್ಧಪಡಿಸಲು ಸೂಚಿಸಿದ್ದೇನೆ ಎಂದರು.
ಈ ಮಾರ್ಗದಲ್ಲಿ ಆಗಬೇಕಿರುವ ಫ್ಲೈ ಓವರ್ ಕಾಮಗಾರಿಗೆ ಹಾಸನದ ಚನ್ನಪಟ್ಟಣ ಸರ್ಕಲ್, ರಾಜೀವ್ ಕಾಲೇಜು ಹಾಗೂ ಬಿಟ್ಟಗೋಡನಹಳ್ಳಿ ಬಳಿ ತಾಂತ್ರಿಕ ಸಮಸ್ಯೆ ಇದ್ದು, ಅದನ್ನು ಬಗೆಹರಿಸಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದ ಸಂಸದರು, ಅಣಚಿಹಳ್ಳಿ ಫ್ಲೈ ಓವರ್ ೧ ತಿಂಗಳಲ್ಲಿ, ಬೂವನಹಳ್ಳಿ ಬಳಿಯ ಫ್ಲೈ ಓವರ್ 3 ತಿಂಗಳಲ್ಲಿ ಸಂಚಾರಕ್ಕೆ ಲಭ್ಯವಾಗಲಿದೆ ಎಂದರು. ಸಕಲೇಶಪುರ ಬಳಿಯ ದೋಣಿಗಾಲ್ ಕ್ರಾಸ್‌ನಲ್ಲಿ ಕಾಂಕ್ರೀಟ್ ರಸ್ತೆ ಮಾಡಲು ರಸ್ತೆ ಬಂದ್ ಮಾಡಲು ಕೇಳಿದ್ದಾರೆ. ಬಂದ್ ಮಾಡುವ ಮುಂಚೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಸಂಬಂಧಪಟ್ಟ ಮಂತ್ರಿ ಅವರಿಗೆ ಸಲ್ಲಿಸಿ 1 3 ಕೋಟಿ ರು. ಹಣ ಬಿಡುಗಡೆಗೆ ಮನವಿ ಮಾಡುವುದಾಗಿ ತಿಳಿಸಿದರು.
ಪ್ರತಿಭಟನೆ ಪರಿಹಾರವಲ್ಲ:
ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದರಲ್ಲಿ ರಾಜಕೀಯ ಬೇಡ, ಎಲ್ಲರೂ ಪಕ್ಷಾತೀತವಾಗಿ ಒಗ್ಗೂಡಿ ಕೆಲಸ ಮಾಡಬೇಕು. ಬಂದ್ ಅಥವಾ ಪ್ರತಿಭಟನೆ ಮಾಡುವುದು ಪರಿಹಾರವಲ್ಲ ಎಂದರು. ಪಕ್ಷಾತೀತವಾಗಿ ಎಲ್ಲರೂ ಕೇಂದ್ರದ ಬಳಿಗೆ ಹೋಗೋಣ, ಪ್ರಯತ್ನ ಎಲ್ಲರ ಕಡೆಯಿಂದ ಶೇ.೧೦೦ ರಷ್ಟು ಇರಬೇಕು. ಇದಕ್ಕಾಗಿ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು. ಹಾಗೆಯೇ ಮೃತರ ಕುಟುಂಬಕ್ಕೆ ಹಾಲಿ ನೀಡುತ್ತಿರುವ ೧೫ ಲಕ್ಷ ಪರಿಹಾರವನ್ನು ೨೫ ಲಕ್ಷ ರು. ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದರು.
ಗುಜ್ಜನಹಳ್ಳಿಗೆ ಭೇಟಿ ನೀಡಿದಾಗ ಸ್ಥಳೀಯರು ಅನೇಕ ಸಮಸ್ಯೆ ಹೇಳಿಕೊಂಡಿದ್ದು, ನೂರು ಇನ್ನೂರು ಎಕರೆ ಜಮೀನಿನಲ್ಲಿ ಬೆಳೆ ಮಾಡಿರುವ ಬೆಳೆಗಾರರು ಅರಣ್ಯ ಟಾಸ್ಕ್‌ಫೋರ್ಸ್ ಗುಂಪಿನಲ್ಲಿದ್ದಾರೆ, ಅವರು ದಯಮಾಡಿ ಆನೆಗಳು ಬರುತ್ತಿರುವುದು ತಿಳಿದ ತಕ್ಷಣ ತಮ್ಮ ಕಾರ್ಮಿಕರಿಗೆ ಹೇಳಬೇಕು. ಕಾರ್ಮಿಕರ ಕರೆದುಕೊಂಡು ಹೋಗಿ ಬರಬೇಕು, ಕೆಲಸದ ಸಮಯ ಬದಲಾಯಿಸಬೇಕು, ಪ್ಲಾಂಟರ್ಸ್ ಕೂಡಾ ಇದಕ್ಕೆ ಕೈ ಜೋಡಿಸಬೇಕು ಎಂದರು.
ಉಪವಿಭಾಗಾಧಿಕಾರಿ ಡಾ. ಶೃತಿ, ಎನ್‌ಎಚ್‌ಎಐ ಯೋಜನಾ ನಿರ್ದೇಶಕರಾದ ಪ್ರವೀಣ ಕುಮಾರ್, ಮತ್ತಿತರರು ಹಾಜರಿದ್ದರು.* ಬಾಕ್ಸ್ ನ್ಯೂಸ್: ಕಾಡಾನೆ ಸಮಸ್ಯೆ: ಆನೆಧಾಮ ನಿರ್ಮಾಣಕ್ಕೆ ಪ್ರಸ್ತಾಪನೆ ಸಿದ್ಧ
ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಹೆಚ್ಚಾಗಿದೆ. 10 ದಿನದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಸಾವಿಗೆ ನಾವು ಕೊಡುವ ಪರಿಹಾರ ಶಾಶ್ವತ ಅಲ್ಲ, ಅದು ಕ್ಷಣಿಕ, ಬದಲಾಗಿ ಶಾಶ್ವತ ಪರಿಹಾರ ಆಗಬೇಕು. ಅದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಸೇರಿ ಮಾಡಬೇಕು ಎಂದು ಹೇಳಿದರು.
ಈ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜವಾಬ್ದಾರಿ ಇದೆ. ಸರ್ಕಾರ, ಜನಪ್ರತಿನಿಧಿಗಳು, ಸಚಿವರು ಒಟ್ಟುಗೂಡಿ ಕೆಲಸ ಮಾಡಬೇಕಿದೆ. ಪರಸ್ಪರ ಕುಳಿತು ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಬೇಕಿದೆ ಎಂದರು.
ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ನಾನು ಮನವಿ ಮಾಡಿದ್ದೇನೆ. ಅಧಿವೇಶನದಲ್ಲೂ ಧ್ವನಿ ಎತ್ತಿದ್ದೇನೆ. ಆನೆಧಾಮ ನಿರ್ಮಾಣಕ್ಕೆ ಪ್ರಸ್ತಾಪನೆ ಸಿದ್ಧವಾಗಿದೆ. ಇದಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಎಷ್ಟು ಅನುದಾನ ನಿಗದಿ ಮಾಡುತ್ತಾರೋ ಎಂಬುದನ್ನು ನೋಡಿಕೊಂಡು ಕೇಂದ್ರಕ್ಕೂ ಒತ್ತಡ ಹಾಕುವುದಾಗಿ ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.