ಕನ್ನಡಪ್ರಭ ವಾರ್ತೆ ಸಕಲೇಶಪುರ
ಅರಣ್ಯ ಇಲಾಖೆಯ ಅಧಿಕಾರಿಗಳ ಕಟ್ಟುನಿಟ್ಟಿನ ಕಾನೂನು ಪಾಲನೆ ಮಲೆನಾಡಿಗರ ಕಿರಿಕಿರಿಗೆ ಕಾರಣವಾಗಿದೆ ಎಂಬುದು ತಾಲೂಕಿನ ಎಲ್ಲೆಡೆಯಿಂದ ಕೇಳಿ ಬರುತ್ತಿರುವ ಮಾತು.ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಎಂಬ ಮಾತು ತಾಲೂಕಿನಲ್ಲಿ ಚಾಲ್ತಿಯಲ್ಲಿದೆ. ಆದರೆ, ಅರಣ್ಯ ಇಲಾಖೆಯ ಕಾನೂನು ಮಲೆನಾಡಿಗರ ವಿರುದ್ಧವಾಗಿದ್ದು, ಈ ವಿರುದ್ಧವಾಗಿರುವ ಕಾನೂನನ್ನು ಈ ಅಧಿಕಾರಿ ಯಥಾವತ್ ಚಾಲ್ತಿಗೆ ತರುತ್ತಿರುವುದು ಸದ್ಯ ಜನರ ಸಂಕಷ್ಟಕ್ಕೆ ಕಾರಣವಾಗಿದೆ.
ಡೀಮ್ಡ್, ಸೆಕ್ಷನ್ ೪ ಹೆಸರಿನಲ್ಲಿ ಕಳೆದ ಒಂದು ದಶಕದಿಂದ ತಾಲೂಕಿನ ಜನರು ನೆಮ್ಮದಿ ಕಳೆದುಕೊಂಡಿದ್ದು, ತಾಲೂಕಿನ ಜನರು ಪೊಲೀಸರಿಗಿಂತ ಅರಣ್ಯ ಇಲಾಖೆ ಅಧಿಕಾರಿಗಳ ಕಂಡರೆ ಹೆಚ್ಚಿನ ಭಯ ಪಡುತ್ತಾರೆಂಬುದು ಹಾಸ್ಯವಾದರೂ ಸತ್ಯವಾದ ಮಾತು. ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಬಾರದು ಎಂಬ ನಿಯಮ ಹಿಂದಿನಿಂದಲೂ ಇದೆ. ಆದರೆ, ಅರಣ್ಯಕ್ಕೆ ಪ್ರವೇಶಿಸದೇ ಮಲೆನಾಡ ಹಳ್ಳಿಗರು ಜೀವನ ಮಾಡುವುದು ಅಸಾಧ್ಯವಾಗಿದೆ. ಇದುವರೆಗೆ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಜನರ ಹೊಂದಾಣಿಕೆಯಿಂದ ಯಾವುದೇ ಸಮಸ್ಯೆ ಕಂಡುಬರುತ್ತಿರಲಿಲ್ಲ. ಆದರೆ, ಪ್ರಸಕ್ತ ವಲಯ ಅರಣ್ಯಾಧಿಕಾರಿ ಬಿಗಿ ನಿಲುವು ಹೊಂದಾಣಿಕೆಗೆ ಹುಳಿಹಿಂಡಿದ್ದು ಅಕ್ರಮ ಅರಣ್ಯಪ್ರವೇಶದ ಹೆಸರಿನಲ್ಲಿ ಸಾಲುಸಾಲು ಪ್ರಕರಣಗಳು ದಾಖಲಾಗುತ್ತಿದ್ದರೆ, ಅರಣ್ಯ ಪ್ರದೇಶಕ್ಕೆ ಪ್ರವೇಶ ಮಾಡದಂತೆ ಅಲ್ಲಲ್ಲಿ ಅರಣ್ಯ ಇಲಾಖೆ ಕಂದಕಗಳನ್ನು ತೆಗೆಯುತ್ತಿರುವುದು ಮಲೆನಾಡಿಗರ ಕಿರಿಕಿರಿಗೆ ಕಾರಣವಾಗಿದೆ.ಮರ ಕಡಿದರೆ ದೂರು:
ಹಿಡುವಳಿ ಜಮೀನಿನಲ್ಲಿ ಹಿಂದಿನಿಂದಲೂ ಬುಡಸಹಿತ ಮರಕಡಿಯಲು ಅವಕಾಶವಿಲ್ಲ. ಮರ ಕಡಿಯಬೇಕಾದರೆ ಇಲಾಖೆಯ ಪರವಾನಗಿ ಪಡೆಯಲೇಬೇಕು. ಆದರೆ, ಕಾಫಿತೋಟದಲ್ಲಿ ತಮಗೆ ಬೇಡವಾದ ಹಾಗೂ ನೆರಳು ಹೆಚ್ಚು ಎಂಬ ಕಾರಣಕ್ಕೆ ಮರಗಳನ್ನು ಪ್ರತಿವರ್ಷ ತೆಗೆಯುವುದು ಸಾಮಾನ್ಯ. ಬೆಳೆಗಾರರು ಮರ ಕಡಿಯಲು ಇಲಾಖೆಯ ಪರವಾನಗಿ ಪಡೆಯುವುದು ದೂರದ ಮಾತಾಗಿತ್ತು. ಇಂತಹ ಪ್ರಕರಣಗಳು ಹಿಂದೆ ಅರಣ್ಯ ಇಲಾಖೆಯ ಗಮನಕ್ಕೆ ಬಂದರೂ ತಿಳಿದೂ ತಿಳಿಯದಂತೆ ಇದ್ದ ಕಾರಣ ಅರಣ್ಯ ಇಲಾಖೆ ಹಾಗೂ ಬೆಳೆಗಾರರ ನಡುವೆ ಹೊಂದಾಣಿಕೆ ಇತ್ತು. ಆದರೆ, ಈಗ ಬುಡ ಕಸಿ ಮಾಡಿರುವ ಪ್ರಕರಣಗಳು ಕಂಡಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಹಲವು ದೂರು ದಾಖಲು ಮಾಡಿರುವುದು ಒಂಡೆಡೆ ಬೆಳೆಗಾರರ ಕೋಪ ನೆತ್ತಿಗೇರುವಂತೆ ಮಾಡಿದೆ.ಇಟ್ಟಿಗೆ ಉದ್ಯಮ ಸ್ಥಗಿತ:
ನಿಯಮಾನುಸಾರವಾಗಿ ಮಾತ್ರ ಇಟ್ಟಿಗೆ ಭಟ್ಟಿಗಳಿಗೆ ಸೌದೆ ಪೊರೈಸಬಹುದು ಎಂಬ ನಿಯಮ ಇಟ್ಟಿಗೆ ಉದ್ಯಮದ ಮೇಲೆ ಪ್ರಹಾರ ನಡೆಸಿದೆ. ನಿಯಮದ ಪ್ರಕಾರ ಮರಗಸಿ ನಡೆಸಿದ ಹಾಗೂ ಒಣ ಸೌದೆಗಳನ್ನು ಪರವನಾಗಿ ಪಡೆದು ಸಾಗಿಸಲು ಅವಕಾಶ ಕಲ್ಪಿಸಲಾಗಿದೆ ಎಂಬುದು ಅರಣ್ಯ ಇಲಾಖೆಯ ಅಧಿಕಾರಿಗಳ ಮಾತು. ಆದರೆ, ಇಟ್ಟಿಗೆ ಭಟ್ಟಿಗಳಿಗೆ ಹಸಿಯಾದ ಹಾಗೂ ಬುಡಗಸಿ ಸೌದೆಗಳನ್ನು ಮಾತ್ರ ಬಳಸಲಾಗುತ್ತಿದ್ದು, ಮರಗಸಿ ಸೌದೆಗಳಿಂದ ಇಟ್ಟಿಗೆ ಸುಡಲು ಸಾಧ್ಯವಿಲ್ಲ ಎಂಬುದು ಇಟ್ಟಿಗೆ ಉದ್ಯಮಿಗಳ ಮಾತು. ಆದರೆ, ಬುಡಗಸಿ ಹಾಗೂ ಹಸಿ ಸೌದೆ ಸಾಗಟಕ್ಕೆ ಅವಕಾಶ ಇಲ್ಲದ ಪರಿಣಾಮ ಕಟ್ಟಿಗೆ ಕೊರತೆಯಿಂದ ಇಟ್ಟಿಗೆ ಉದ್ಯಮ ಸ್ಥಗಿತಗೊಂಡಿದ್ದು, ಸದ್ಯ ಸಾವಿರಾರು ಇಟ್ಟಿಗೆ ಕಾರ್ಮಿಕರಿಗೆ ಕೆಲಸವಿಲ್ಲವಾಗಿದ್ದರೆ, ಹತ್ತಾರು ಇಟ್ಟಿಗೆ ಉದ್ಯಮಿಗಳು ಕೋಟ್ಯಂತರ ರುಪಾಯಿ ನಷ್ಟ ಮಾಡಿಕೊಳ್ಳುವಂತಾಗಿದೆ.ನಾಯಕರ ಮಾತಿಗೂ ಕಿಮ್ಮತ್ತಿಲ್ಲ:
ಇಟ್ಟಿಗೆ ಉದ್ಯಮ ಸಾಕಷ್ಟು ಸವಾಲುಗಳ ನಡುವೆ ನಡೆಯುತ್ತಿದ್ದು, ಸದ್ಯ ಸೌದೆ ಪೊರೈಕೆಗೆ ತಡೆ ಒಡ್ಡಿರುವುದರಿಂದ ಇಟ್ಟಿಗೆ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂಬ ಅಳಲಿನೊಂದಿಗೆ ಇಟ್ಟಿಗೆ ಉದ್ಯಮಿಗಳ ದಂಡು ಶಾಸಕರನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ತೋಡಿಕೊಂಡಿತ್ತು. ಈ ವೇಳೆ ವಲಯ ಅರಣ್ಯಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಕರೆಸಿಕೊಂಡು ಸೌದೆ ಪೊರೈಕೆಗೆ ತೊಂದರೆ ನೀಡದಂತೆ ಶಾಸಕರು ನಿರ್ದೇಶನ ನೀಡಿದ್ದರು. ಆದರೂ ಶಾಸಕರ ಮಾತಿಗೆ ಅಧಿಕಾರಿಗಳು ಗೌರವ ನೀಡದ ಪರಿಣಾಮ ಶಾಸಕರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಮತ್ತಷ್ಟು ಕೆರಳಿರುವ ಅಧಿಕಾರಿಗಳು ಕಣ್ತಪ್ಪಿಯೂ ಸೌದೆ ಸಾಗಾಟ ನಡೆಯದಂತೆ ನಿಗಾ ವಹಿಸಿದ್ದಾರೆ. ಅಧಿಕಾರಿಗಳ ಈ ನಡೆಯಿಂದ ಮತ್ತಷ್ಟು ಹತಾಶರಾಗಿರುವ ಇಟ್ಟಿಗೆ ಉದ್ಯಮಿಗಳು ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ಬಳಿ ತೆರಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದ ಮುರುಳಿ ಮೋಹನ್, ನಂತರದ ದಿನಗಳಲ್ಲಿ ಉದ್ಯಮಿಗಳ ವಿರುದ್ಧವೇ ತಿರುಗಿಬಿದ್ದಿದ್ದಾರೆ ಎಂಬುದು ಇಟ್ಟಿಗೆ ಉದ್ಯಮಿಗಳ ಹೇಳಿಕೆ. ಇದರಿಂದಾಗಿ ಲಕ್ಷಾಂತರ ಇಟ್ಟಿಗೆಗಳು ಬಿಸಿಲಿನಲ್ಲಿ ಒಣಗಿ ಹಾಳಾಗುವ ಮೂಲಕ ಕೋಟ್ಯಂತರ ರುಪಾಯಿ ನಷ್ಟಕ್ಕೆ ಕಾರಣವಾಗಿದೆ.ಪ್ರತಿಭಟನೆಗೆ ಸಜ್ಜು:
ಸದ್ಯ ಅರಣ್ಯ ಇಲಾಖೆಯ ಯಥಾವತ್ ಕಾನೂನು ಜಾರಿಯಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದ್ದು, ಬೆಳೆಗಾರರು, ಇಟ್ಟಿಗೆ ಉದ್ಯಮಿಗಳು ಜೊತೆಯಾಗಿ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆಗೆ ನಿರ್ಧರಿಸಿದ್ದು ಶೀಘ್ರವೇ ದಿನಾಂಕ ನಿಗದಿ ಮಾಡಲಿದ್ದಾರೆ.* ಬಾಕ್ಸ್‌ನ್ಯೂಸ್: ಸಂವಿಧಾನ ಏನು ಹೇಳುತ್ತದೆ?
ಯಾವುದೇ ಕಾನೂನಿಂದ ಸ್ಥಳೀಯರ ಜೀವನಕ್ಕೆ ತೊಂದರೆಯಾಗುತ್ತದೆ ಎಂದಾದರೆ ಅಂತಹ ಕಾನೂನನ್ನೇ ರದ್ದುಗೊಳಿಸುವುದು ಅಥವಾ ಮಾರ್ಪಾಡು ಮಾಡುವುದು ಸೂಕ್ತ ಎಂದು ಸಂವಿಧಾನದಲ್ಲಿ ದಾಖಲಾಗಿದೆ. ಆದ್ದರಿಂದ ಸ್ಥಳೀಯರ ಜೀವನಕ್ಕೆ ತೊಂದರೆ ಒಡ್ಡುತ್ತಿರುವ ಅರಣ್ಯ ಇಲಾಖೆಯ ಕಾನೂನನ್ನು ಮಲೆನಾಡಿನಲ್ಲಿ ಮಾರ್ಪಾಡು ಮಾಡಬೇಕು ಎಂಬುದು ಬುದ್ಧಿಜೀವಿಗಳ ಅಭಿಪ್ರಾಯ. *ಹೇಳಿಕೆ1ತಾಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಪಾಲನೆ ನೆಪದಲ್ಲಿ ಸಾರ್ವಜನಿಕರಿಗೆ ಇಲ್ಲದ ಕಿರುಕುಳ ನೀಡುತ್ತಿದ್ದಾರೆ. ಮಲೆನಾಡಿನಲ್ಲಿರುವ ಎಲ್ಲಾ ಅರಣ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಹಾಸನದಲ್ಲಿ ಹಿರಿಯ ಅರಣ್ಯಾಧಿಕಾರಿಗಳ ಸಭೆಯನ್ನು ನಡೆಸಲಾಗುತ್ತಿದೆ.
- ಸಿಮೆಂಟ್ ಮಂಜು, ಶಾಸಕ*ಹೇಳಿಕೆ 2ಕಾನೂನು ಚೌಕಟ್ಟು ಹೊರುತುಪಡಿಸಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಹೇಳಲು ಸಾಧ್ಯವಿಲ್ಲ. ಇಟ್ಟಿಗೆ ಉದ್ಯಮಿಗಳಿಗೂ ನಮಗೂ ಯಾವುದೇ ಮನಸ್ತಾಪವಿಲ್ಲ.
- ಮುರುಳಿಮೋಹನ್, ಕಾಂಗ್ರೆಸ್ ಮುಖಂಡ* ಹೇಳಿಕೆ 3
ಇಟ್ಟಿಗೆ ಗೂಡುಗಳಿಗೆ ಸೌದೆ ಪೊರೈಕೆಗೆ ವಿಧಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಲು ಸಾಧ್ಯವಿಲ್ಲ. ತಾಲೂಕಿನ ಅರಣ್ಯ ಬೆಳೆಸಿರುವುದು ಅರಣ್ಯ ಇಲಾಖೆ ಎಂಬ ಮನಸ್ಥಿತಿ ಅಧಿಕಾರಿಗಳಲ್ಲಿದೆ. ಆದರೆ, ಇಲ್ಲಿ ಶತಮಾನಗಳಿಂದಲೂ ಅರಣ್ಯವಿದೆ. ಈ ಅರಣ್ಯದ ಅಳಿವು-ಉಳಿವು ಸ್ಥಳೀಯರನ್ನೇ ಅವಲಂಬಿಸಿದೆ.
-ಲೋಹಿತ್ ಜಂಭರಡಿ,ಇಟ್ಟಿಗೆ ಮಾಲೀಕರ ಸಂಘದ ಅಧ್ಯಕ್ಷ