ನಾಳೆ ಸಾಗರದಲ್ಲಿ ಶಕ್ತಿಸಾಗರ ಸಂಗಮ ಕಾರ್ಯಕ್ರಮ

KannadaprabhaNewsNetwork |  
Published : Mar 04, 2024, 01:15 AM ISTUpdated : Mar 04, 2024, 03:56 PM IST
ಸಾಗರ ಪಟ್ಟಣದಲ್ಲಿ ಮಾ.೫ರಂದು ನಡೆಯಲಿರುವ ಶಕ್ತಿ ಸಾಗರ ಸಂಗಮ ಕಾರ್ಯಕ್ರಮದ ಬೃಹತ್ ವೇದಿಕೆ | Kannada Prabha

ಸಾರಾಂಶ

ಪಟ್ಟಣದ ಗಣಪತಿ ಕೆರೆ ಮೇಲ್ಭಾಗದ ವಿಶಾಲವಾದ ಪ್ರದೇಶದಲ್ಲಿ ಮಾ.೫ರಂದು ಈಡಿಗ, ಬಿಲ್ಲವ, ನಾಮದಾರಿ ದೀವರು ಸೇರಿದಂತೆ ೨೬ ಪಂಗಡಗಳ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಜಿ ಸಚಿವ ಎಚ್.ಹಾಲಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ 

ಪಟ್ಟಣದ ಗಣಪತಿ ಕೆರೆ ಮೇಲ್ಭಾಗದ ವಿಶಾಲವಾದ ಪ್ರದೇಶದಲ್ಲಿ ಮಾ.೫ರಂದು ಈಡಿಗ, ಬಿಲ್ಲವ, ನಾಮದಾರಿ ದೀವರು ಸೇರಿದಂತೆ ೨೬ ಪಂಗಡಗಳ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಜಿ ಸಚಿವ ಎಚ್.ಹಾಲಪ್ಪ ಹೇಳಿದರು.

ಸಮಾವೇಶ ನಡೆಯುವ ಬೃಹತ್ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರು ತಾವು ಆಡಳಿತದಲ್ಲಿದ್ದಾಗ ಈಡಿಗ, ಬಿಲ್ಲವ, ನಾಮದಾರಿ ದೀವರು ಸೇರಿದಂತೆ ೨೬ ಪಂಗಡಗಳ ಸಂಘಟನೆಗೆ ಹಾಗೂ ಅಭಿವೃದ್ಧಿಗೆ ಭೂಮಿ ಮತ್ತು ಸಾಕಷ್ಟು ಅನುದಾನ ನೀಡಿ ಸಹಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಕ್ತಿಸಾಗರ ಸಂಗಮ ಹೆಸರಿನ ಅಪೂರ್ವವಾದ ಸಮಾವೇಶದಲ್ಲಿ ಅವರನ್ನು ಅಭಿಮಾನದಿಂದ ಸನ್ಮಾನಿಸಲಿದ್ದೇವೆ ಎಂದು ತಿಳಿಸಿದರು.

ಸಮಾಜ ಬಿಎಸ್‌ವೈ ಮರೆಯೋದಿಲ್ಲ: ತಮ್ಮ ರಾಜಕೀಯದ ಜೀವನದುದ್ದಕ್ಕೂ ಹಾಗೂ ಆಡಳಿತದಲ್ಲಿರುವಾಗ ಎಲ್ಲ ಸಂದರ್ಭದಲ್ಲಿಯೂ ಜಾತ್ಯತೀತವಾಗಿ ಎಲ್ಲರನ್ನು ಪ್ರೀತಿಯಿಂದ ನಡೆಸಿಕೊಂಡ ಯಡಿಯೂರಪ್ಪನವರು ನಮ್ಮ ಸಮುದಾಯಕ್ಕೆ ಕೊಟ್ಟ ಕೊಡುಗೆಯ ವಿವರ ಅತ್ಯಂತ ದೊಡ್ಡದಿದೆ. 

ಪ್ರಸ್ತುತ ಚುನಾವಣಾ ರಾಜಕೀಯದಿಂದ ನಿವೃತ್ತರಾಗಿರುವ ಅವರ ಕೊಡುಗೆಯನ್ನು ನಮ್ಮ ಸಮಾಜ ಎಂದೂ ಮರೆಯುವುದಿಲ್ಲ. ಸನ್ಮಾನದ ಮೂಲಕ ಯಡಿಯೂರಪ್ಪನವರಿಗೆ ಕೃತಜ್ಞತೆ ಸಲ್ಲಿಸುವುದು ಸಮಾವೇಶದ ಮುಖ್ಯ ಉದ್ದಾಶವಾಗಿದೆ ಎಂದರು.

ಅಂದು ಬೆಳಗ್ಗೆ ೧೦ ಗಂಟೆಗೆ ಆರಂಭವಾಗಲಿರುವ ಸಮಾವೇಶದಲ್ಲಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಗೌರಿಗದ್ದೆಯ ಶ್ರೀ ವಿನಯ ಗುರೂಜಿ, ನಿಟ್ಟೂರಿನ ನಾರಾಯಣಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ, ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, 

ಚಿತ್ತಾಪುರ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ, ಶ್ರೀಕ್ಷೇತ್ರ ಕಾರ್ತಿಕೇಯ ಪೀಠದ ಯೋಗೇಂದ್ರ ಅವದೂತ ಶ್ರೀಗಳು, ನಿಪ್ಪಾಣಿಯ ಸದ್ಧರ್ಮ ಓಂಶಕ್ತಿ ಪೀಠದ ಶ್ರೀ ಅರುಣಾನಂದತೀರ್ಥ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ಸುನಿಲ್ ಕುಮಾರ್,

 ಮಾಲಿಕಯ್ಯ ಗುತ್ತೇದಾರ್, ಕುಮಾರ ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಬಿ.ಸ್ವಾಮಿರಾವ್, ಶಾಸಕರಾದ ಉಮಾನಾಥ ಕೋಟ್ಯಾನ್, ಸುನೀಲ್ ನಾಯ್ಕ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಿದ್ಧತೆ ಪೂರ್ಣ:

ಸಮಾವೇಶಕ್ಕೆ ಭರದ ಸಿದ್ಧತೆ ನಡೆದಿದ್ದು, ಬೃಹತ್ ಪೆಂಡಾಲ್ ಹಾಕಲಾಗಿದೆ. ಆಧುನಿಕ ವ್ಯವಸ್ಥೆಯ ವೇದಿಕೆ, ಆಸನದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಮೂವತ್ತು ಸಾವಿರದಷ್ಟು ಸಮಾಜ ಬಾಂಧವರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಎಲ್ಲರಿಗೂ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ದ್ವಿಚಕ್ರ ಹಾಗೂ ನಾಲ್ಕುಚಕ್ರದ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಎಲ್ಲಿಯೂ ಗೊಂದಲವಾಗದ ರೀತಿಯಲ್ಲಿ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಂಡಿದ್ದು ಭಾರಿ ಸಂಖ್ಯೆಯಲ್ಲಿ ಜನ ಸೇರುವುದರಿಂದ ಸಾರ್ವಜನಿಕರಿಗೆ ಸ್ವಲ್ಪ ಅಡಚಣೆ ಉಂಟಾಗಬಹುದು. ಅದಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ಸಮಾವೇಶಕ್ಕೆ ಬೆಂಬಲ: ಸಮಾಜದ ಜಿಲ್ಲಾಧ್ಯಕ್ಷ ಕೆ.ಎಸ್.ವೆಂಕಟೇಶ್‌ ನಾಯ್ಕ್‌ ಮಾತನಾಡಿ, ಶಕ್ತಿಸಾಗರ ಸಂಗಮ ಸಮಾವೇಶಕ್ಕೆ ನಮ್ಮ ನಾಮಧಾರಿ ಸಮಾಜ ಬೆಂಬಲಿಸಿ ಪಾಲ್ಗೊಳ್ಳುತ್ತಿದ್ದೇವೆ. ಜಿಲ್ಲೆ ಮತ್ತು ಹೊರ ಜಿಲ್ಲೆಯ ನಮ್ಮ ಸಮಾಜದವರು ಸ್ವಯಂಪ್ರೇರಿತರಾಗಿ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಡಾ.ರಾಜನಂದಿನಿ ಕಾಗೋಡು, ದೇವೇಂದ್ರಪ್ಪ, ಕೊಟ್ರಪ್ಪ, ಕೆ.ಜಿ.ಪ್ರಶಾಂತ, ಸುವರ್ಣ ಟೀಕಪ್ಪ, ಭೈರಪ್ಪ, ನಾಗರಾಜ್, ಬಿ.ಟಿ.ರವೀಂದ್ರ, ಕಾರ್ಯದರ್ಶಿ ರವಿವರ್ಮ ವೆಂಕಟೇಶ್, ಸೋಮಶೇಖರ್ ಮತ್ತಿತರರು ಹಾಜರಿದ್ದರು.

ಸಮಾವೇಶದ ಹಿಂದೆ ಪಕ್ಷ ರಾಜಕೀಯದ ಉದ್ದೇಶವಿಲ್ಲ. ಸಮಾಜದ ಅಭಿವೃದ್ಧಿಗೆ ಸಹಕರಿಸಿದ ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುವುದಷ್ಟೇ ನಮ್ಮ ಉದ್ದೇಶ. ಟೀಕೆ, ವಿರೋಧ ಸಹಜವಾದುದು. ಇದ್ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ. ಇದು ಅಭಿಮಾನದ ಸನ್ಮಾನ - ಹರತಾಳು ಹಾಲಪ್ಪ, ಮಾಜಿ ಸಚಿವ

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ