ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಮತ್ತು ಬಳಕೆ ನಿಷೇಧವನ್ನು ಹಂತ ಹಂತವಾಗಿ ಜಾರಿಗೆ ತರಲು ಪಾಲಿಕೆ ಮುಂದಾಗಿದ್ದು, ‘ಸ್ವಚ್ಛ ಮಂಗಳೂರು’ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.ಮಂಗಳೂರು ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪಾಲಿಕೆಯಲ್ಲಿ ಮಂಗಳವಾರ ಉದ್ಯಮಿಗಳು ಸಹಿತ ವಿವಿಧ ವರ್ಗದವರಿಗೆ ಆಯೋಜಿಸಲಾದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಮೂಲಕ ಮಂಗಳೂರು ದೇಶಕ್ಕೆ ಮಾದರಿ ನಗರವಾಗವೇಕು. ಈ ನಿಟ್ಟಿನಲ್ಲಿ ಉತ್ಪಾದಕರು, ದಾಸ್ತಾನುದಾರರು, ಇ-ಕಾಮರ್ಸ್ ಕಂಪೆನಿಗಳು, ಬೀದಿ ಬದಿ ವ್ಯಾಪಾರಸ್ಥರು, ವಾಣಿಜ್ಯ ಸಂಸ್ಥೆಗಳು, ಶಾಲಾ-ಕಾಲೇಜುಗಳು ಸಹಿತ ಸಾರ್ವಜನಿಕರು ಕೈಜೋಡಿಸಬೇಕು. ಸ್ವಚ್ಛತೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆ ನಡೆಸುತ್ತಿದ್ದು, ಪ್ಲಾಸ್ಟಿಕ್ ಬಳಕೆ ನಿಷೇಧದ ಮೂಲಕ ಮುಂದಿನ ದಿನಗಳಲ್ಲಿ ಮಂಗಳೂರು ಪ್ರಥಮ ರ್‍ಯಾಂಕ್ ಪಡೆಯುವ ಗುರಿ ಹೊಂದಿದೆ ಎಂದರು.ಭಾರತ ಪ್ರಕೃತಿಯನ್ನು ಆರಾಧಿಸುವ ದೇಶ. ಪಂಚಭೂತಗಳನ್ನು ದೇವರು ಎಂದು ಪೂಜಿಸುತ್ತೇವೆ. ಪ್ಲಾಸ್ಟಿಕ್‌ನಿಂದಾಗಿ ಭೂ ಮಂಡಲಕ್ಕೆ ಬಹು ತೊಂದರೆಯಾಗುತ್ತಿದೆ. ಮಳೆ ನೀರು ಭೂಮಿಯಲ್ಲಿ ಇಂಗಲು ಪ್ಲಾಸ್ಟಿಕ್ ತಡೆ ಒಡ್ಡುತ್ತಿದೆ. ಪ್ಲಾಸ್ಟಿಕ್‌ನಿಂದ ಫಲವತ್ತು ಭೂಮಿಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗುತ್ತಿದೆ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಮಂಗಳೂರು ಹೆಸರು ಗಳಿಸಿದೆ. ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್, ಪ್ಲಾಸ್ಟಿಕ್ ಕಪ್‌ಗಳು, ಪ್ಲಾಸ್ಟಿಕ್ ಚಮಚ, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋಮಣಿಗಳಿಂದ ಮಾಡಿದ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಮಾರಾಟ ಮತ್ತು ಬಳಕೆಯನ್ನು ರಾಜ್ಯಾದ್ಯಂತ ಈಗಾಗಲೇ ನಿಷೇಧಿಸಲಾಗಿದೆ. ಆದರೂ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಜಾಗೃತಿ ಮೂಡಿಸಲು ಕಾರ್ಯಾಗಾರ ಆಯೋಜನೆ ಮಾಡಲಾಗಿದೆ ಎಂದರು. ಉಪ ಆಯುಕ್ತ ರವಿಕುಮಾರ್ ಮಾತನಾಡಿ, ಏಕ ಬಳಕೆ ಪ್ಲಾಸ್ಟಿಕ್ ನಗರವನ್ನಾಗಿ ಘೋಷಿಸುವ ಹಿನ್ನೆಲೆಯಲ್ಲಿ ನಿರ್ದಿಷ್ಟ ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯ ಎಂದರು.ಪ್ಲಾಸ್ಟಿಕ್ ಉತ್ಪಾದನೆಯಲ್ಲಿ 5ನೇ ಸ್ಥಾನ: ಕೇಂದ್ರ ಮಾಲಿನ್ಯ ನಿಯಂತ್ರ ಮಂಡಳಿಯ ಅಧಿಕಾರಿ ಮಹಿಮ ಮಾತನಾಡಿ, ಪ್ಲಾಸ್ಟಿಕ್ ಎಂದಿಗೂ ಸಂಸ್ಕರಣೆಯಾಗುವುದಿಲ್ಲ. ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಶೇ.43ರಷ್ಟುಪ್ಲಾಸ್ಟಿಕ್ ತ್ಯಾಜ್ಯಗಳು ಉತ್ಪತ್ತಿಯಾಗುತ್ತಿದೆ. ಪ್ಲಾಸ್ಟಿಕ್ ಗೊಬ್ಬರವಾಗಿ ಮಾರ್ಪಾಡಾಗುವುದಿಲ್ಲ ಪರಿಣಾಮ 5 ಎಂ.ಎಂ. ಮೈಕ್ರೋ ಕಣಗಳಾಗಿ ನಮ್ಮ ಆಹಾರದಲ್ಲಿ ಸೇರಿಕೊಳ್ಳುತ್ತದೆ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ವಿವರಿಸಿದರು.
ಉಪಮೇಯರ್ ಸುನೀತಾ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಭರತ್ ಕುಮಾರ್, ಗಣೇಶ್ ಕುಲಾಲ್, ಲೋಹಿತ್ ಅಮೀನ್, ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಹಿರಿಯ ಪರಿಸರ ಅಧಿಕಾರಿ ವಿಜಯ್ ಹೆಗ್ಡೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಂಜುಳ ಮತ್ತಿತರರಿದ್ದರು.