ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಕೈಗೆಟುಕುವ ದರದಲ್ಲಿ ನಿವೇಶನ ಸಿಕ್ಕಿದೆ ಎಂದುಕೊಂಡಿದ್ದ ನಾಗರಿಕರಿಗೆ ಇದೀಗ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ದೊಡ್ಡ ಶಾಕ್ ಕೊಟ್ಟಿದೆ.
ನಗರದ ಬಾಕ್ಸೈಟ್ ರಸ್ತೆಯ ಪಕ್ಕದಲ್ಲಿರುವ ಎಚ್.ಡಿ.ಕುಮಾರಸ್ವಾಮಿ ಬಡಾವಣೆಯಲ್ಲಿ ನಿವೇಶನ ಖರೀದಿ ಮಾಡಿದ ನಾಗರಿಕರು ಹೆಚ್ಚುವರಿಯಾಗಿ ಹಣ ತುಂಬುವಂತೆ ಬುಡಾ ಸೂಚನೆ ನೀಡಿದೆ. ಬುಡಾದಿಂದ ನಿವೇಶನ ಖರೀದಿಸಿದರೆ ಎಲ್ಲ ಮೂಲಭೂತ ಸೌಲಭ್ಯ ದೊರೆಯುತ್ತವೆ. ಯಾವುದೇ ತಾಪತ್ರೇಯ ಇರುವುದಿಲ್ಲ. ಕೈಗೆಟುಕುವ ಬೆಲೆಗೆ ನಿವೇಶನ ಸಿಗುತ್ತದೆ ಎಂದು ನಂಬಿ ಇಲ್ಲಿ ನಿವೇಶನ ಖರೀದಿ ಮಾಡಿದರವರೆಗೆ ಮೊದಲು ಕಾಡಿದ್ದೇ ಮೂಲಭೂತ ಸೌಲಭ್ಯಗಳ ಕೊರತೆ. ಇದರ ಬೆನ್ನ ಹಿಂದೆಯೇ ಈಗ ಲಕ್ಷಾಂತರ ರುಪಾಯಿ ಪಾವತಿಸಿದರೆ ಮಾತ್ರ ಅಂತಿಮ ನಿವೇಶನ ಸೇಲ್ ಡೀಡ್ ಮಾಡಿಕೊಡಲಾಗುತ್ತಿದೆ.ಬುಡಾ ಅಧಿಕಾರಿಗಳು ಮಾಡಿದ ತಪ್ಪಿಗೆ ಈಗ ನಿವೇಶನ ಖರೀದಿದಾರರು ಪರಿತಪಿಸುವಂತಾಗಿದೆ. ಇದಕ್ಕೆ ಅಧಿಕಾರಿಗಳೇ ಹೊಣೆಯಾರರಾಗಿದ್ದಾರೆ. ಈ ಕುರಿತು ಹಲವಾರು ಬಾರಿ ಮನವಿ ಮಾಡಿದರೂ ಬುಡಾ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಬುಡಾ ನಿರ್ಮಿಸಿದ ಬಡಾವಣೆಗಳಲ್ಲಿನ ನಿವೇಶನ ಖರೀದಿ ಮಾಡಿದರೆ ಮೊದಲು ಲೀಸ್ ಕಂ ಸೇಲ್ ಡೀಡ್ ಮಾಡುವ ಪ್ರಕ್ರಿಯೆಯಿದೆ. 10 ವರ್ಷಗಳ ಅವಧಿಯೊಳಗೆ ತಾವು ಖರೀದಿಸಿದ ನಿವೇಶನದಲ್ಲಿ ಕಟ್ಟಡ ನಿರ್ಮಿಸಬೇಕು. ಇಲ್ಲಿ ಕಟ್ಟಡ ನಿರ್ಮಿಸದೇ ನಿವೇಶನವನ್ನು ಮಾರಾಟ ಮಾಡುವಂತಿಲ್ಲ. ವಾಸಕ್ಕೆ ಯೋಗ್ಯವಾದ ಕಟ್ಟಡ ನಿರ್ಮಿಸಿದ 10 ವರ್ಷಗಳ ಬಳಿಕ ಅಂತಿಮ ಸೇಲ್‌ಡೀಡ್ ಮಾಡಿಕೊಡಲಾಗುತ್ತಿದೆ. ಆದರೆ, ಎಚ್.ಡಿ.ಕುಮಾರಸ್ವಾಮಿ ಬಡಾವಣೆ ನಿರ್ಮಾಣವಾಗಿ ಎರಡು ದಶಕ ಗತಿಸಿಹೋಗಿವೆ. ಆದರೆ, ಬುಡಾ ನಿವೇಶನದಾರರಿಗೆ ಅಂತಿಮ ಕ್ರಮ ಪತ್ರ ಮಾಡಿಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
2005ರಲ್ಲಿ 63 ಎಕರೆ ಪ್ರದೇಶದಲ್ಲಿ ಎಚ್.ಡಿ.ಕುಮಾರಸ್ವಾಮಿ ಬಡಾವಣೆ ನಿರ್ಮಿಸಲಾಗಿದೆ. ಇಲ್ಲಿ ಒಟ್ಟು 775 ನಿವೇಶಗಳಿದ್ದು, ಅವುಗಳನ್ನು ಮಾರಾಟ ಮಾಡಲಾಗಿದೆ. 20-30 , 30-40, 40-60, 50-80 ಅಡಿ ಅಳತೆಯ ಒಟ್ಟು 775 ನಿವೇಶಗಳನ್ನು ನಿರ್ಮಿಸಲಾಗಿದೆ. 500ಕ್ಕೂ ಅಧಿಕ ನಿವೇಶಗಳನ್ನು ವಾಸಯೋಗ್ಯ ಕಟ್ಟಡ ನಿರ್ಮಿಸಿಕೊಂಡು ಕುಟುಂಬಗಳು ವಾಸವಾಗಿವೆ. ಸುಮಾರು 200 ನಿವೇಶಗಳು ಖಾಲಿ ಉಳಿದಿವೆ. ಕಮರ್ಷಿಯಲ್ ನಿವೇಶಗಳನ್ನು ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗಿದೆ.ಈಗೇಕೆ ಹೆಚ್ಚುವರಿ ಹಣ ತುಂಬಬೇಕು?:
ದುಡಿದು ತಿನ್ನುವರು ನಾವು. 20 ವರ್ಷಗಳ ಹಿಂದೆಯೇ ನಾವು ಬುಡಾಕ್ಕೆ ಅರ್ಜಿ ಸಲ್ಲಿಸಿ, ನಿಗದಿತ ದರ ಪಾವತಿಸಿಯೇ ನಿವೇಶನ ಖರೀದಿ ಮಾಡಿದ್ದೇವೆ. ಆದರೆ, ಅಂತಿಮ ಸೇಲ್ ಡೀಡ್ ಮಾಡಿಕೊಲು ಬುಡಾ ನಮ್ಮನ್ನು ಸತಾಯಿಸುತ್ತಿದೆ. 20-30 ಅಡಿ ಅಳತೆಯ ನಿವೇಶನಕ್ಕೆ ₹2.25 ಲಕ್ಷ ಹಣವನ್ನು ಹೆಚ್ಚುವರಿಯಾಗಿ ಪಾವತಿಸುವಂತೆ ಬುಡಾ ಅಧಿಕಾರಿಗಳು ಹೇಳುತ್ತಾರೆ. ನಾವು ಮೊದಲೇ ಆರ್ಥಿಕವಾಗಿ ತೊಂದರೆಯಲ್ಲಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಲಕ್ಷಾಂತರ ರುಪಾಯಿ ತುಂಬುವಂತೆ ಹೇಳಿದರೆ, ನಾವು ಏನು ಮಾಡಬೇಕು. ಬುಡಾ ನಮಗೆ ಅಂತಿಮ ಸೇಲ್ ಡೀಡ್ ಮಾಡಿಕೊಡುತ್ತಿಲ್ಲ. ಹೆಚ್ಚುವರಿ ಹಣ ಪಾವತಿಸಿದರೆ ಮಾತ್ರ ಅಂತಿಮ ಸೇಲ್‌ಡೀಡ್ ಮಾಡಿಕೊಡಲಾಗುತ್ತಿದೆ. ಇಲ್ಲದಿದ್ದರೆ ಸೇಲ್‌ಡೀಡ್ ಮಾಡಿಕೊಡುತ್ತಿಲ್ಲ. ಕುಮಾರಸ್ವಾಮಿ ಬಡಾವಣೆಯಲ್ಲಿ ನಿವೇಶನ ಖರೀದಿಸಿದರಿಗೆ ಇನ್ನೂ ತಾಪತ್ರೇಯ ತಪ್ಪಿಲ್ಲ.ಅಂತಿಮ ಕ್ರಮ ಪತ್ರದ ವಿಚಾರದಲ್ಲಿ ನಿವೇಶನ ಖರೀದಿದಾರರು ಮತ್ತು ಬುಡಾ ಅಧಿಕಾರಿಗಳ ನಡುವೆ ಹಗ್ಗಜಗ್ಗಾಟ ಮುಂದುವರೆದಿದೆ. ಕಳೆದ ವರ್ಷ ಕುಮಾರಸ್ವಾಮಿ ಬಡಾವಣೆಯನ್ನು ಬೆಳಗಾವಿ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಬುಡಾ ಅಧಿಕಾರಿಗಳ ನಿಲುವಿಗೆ ನಿವೇಶನದಾರರು ಹಿಡಿಶಾಪ ಹಾಕುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಲು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಲಭ್ಯವಾಗಲಿಲ್ಲ. ದೂರವಾಣಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.
ಲೇಔಟ್ ನಿರ್ಮಾಣಗಾಗಿ 18 ವರ್ಷ ಕಳೆದರೂ ಬುಡಾ ಅಂತಿಮ ಕ್ರಯಪತ್ರ ಮಾಡಿ ಕೊಡುತ್ತಿಲ್ಲ. ಆದರೆ, ಹೆಚ್ಚಿಗೆ ಹಣ ತುಂಬಿಸಿಕೊಂಡು ಕ್ರಯಪತ್ರ ಮಾಡಿಕೊಡುವುದಾಗಿ ಹೇಳಲಾಗುತ್ತಿದ್ದು, ಇದು ಅವೈಜ್ಞಾನಿಕ. ಎಷ್ಟೇ ಮನವಿ ನೀಡಿದರೂ ಸ್ಪಂದನೆ ಸಿಕ್ಕಿಲ್ಲ. ಇನ್ನಾದರೂ ಸಮಸ್ಯೆ ಪರಿಹರಿಸಬೇಕು. ರುದ್ರಣ್ಣ ಚಂದರಗಿ, ಅಧ್ಯಕ್ಷ, ಕುಮಾರಸ್ವಾಮಿ ಬಡಾವಣೆ ರಹವಾಸಿಗಳ ಸಂಘಕುಮಾರಸ್ವಾಮಿ ಬಡಾವಣೆಯಲ್ಲಿ ನಾನು ಕೂಡ ನಿವೇಶನ ಖರೀದಿಸಿದ್ದೇನೆ. ಆದರೆ, ಬುಡಾ ಅಧಿಕಾರಿಗಳು ಅಂತಿಮ ಕ್ರಯ ಪತ್ರ ಮಾಡಿಕೊಡುತ್ತಿಲ್ಲ. ಈ ಕುರಿತು ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೆಚ್ಚುವರಿ ಹಣ ತುಂಬುವಂತೆ ಅಧಿಕಾರಿಗಳು ಹೇಳುತ್ತಾರೆ. ಇದು ಅವೈಜ್ಞಾನಿಕವಗಿದೆ. ಬಿ.ಐ.ಪಾಟೀಲ, ಶಿವಾಲಯ ಸೇವಾ ಕಮೀಟಿ ಅಧ್ಯಕ್ಷ, ಕುಮಾರಸ್ವಾಮಿ ಬಡಾವಣೆ