ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

KannadaprabhaNewsNetwork | Published : Oct 5, 2024 1:39 AM

ಸಾರಾಂಶ

ಹೆಸರಾಂತ ಸಾಹಿತಿಗಳ ಪುಸ್ತಕಗಳು ಒಂದೇ ಸೂರಿನಡಿ ಲಭ್ಯ, ಶೇ. 15, 30 ಹಾಗೂ 50 ರವರೆಗೆ ರಿಯಾಯಿತಿ ಮಾರಾಟ

ಕನ್ನಡಪ್ರಭ ವಾರ್ತೆ ಮೈಸೂರು

ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ಹೇಳಿದಂತೆ ಪುಸ್ತಕ ಮೇಳ ಎಂಬುದು ವಾಗ್ದೇವಿಯ ಭಂಡಾರ, ಸರಸ್ವತಿಯ ಮಂದಿರ.., ಈ ಮಂದಿರಕ್ಕೆ ಪುಸ್ತಕ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು, ದಿನನಿತ್ಯ ಸಾವಿರಾರು ಮಂದಿ ಭೇಟಿ ನೀಡಿ ಹೆಚ್ಚಿನ ರಿಯಾಯಿತಿಯಲ್ಲಿ ದೊರೆಯುತ್ತಿರುವ ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ.

ಈ ಬಾರಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ವಿಶಾಲವಾದ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿಯಿಂದ ಈ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಈ ಸ್ಥಳದಲ್ಲಿ ಯಾವುದೇ ವಾಹನ ದಟ್ಟಣೆ ಇಲ್ಲದ ಕಾರಣ, ವಾಹನಗಳ ನಿಲುಗಡೆ ಜಾಗವಿರುವ ಕಾರಣ ಪುಸ್ತಕ ಪ್ರಿಯರು, ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಿ ಪುಸ್ತಕ ಮಳಿಗೆಗಳನ್ನು ವೀಕ್ಷಿಸಿ, ತಮಗೆ ಇಷ್ಟವಾದ ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ.

ಈ ಬಾರಿ 70 ಮಳಿಗೆ, 30 ಪ್ರಕಾಶಕರು ಭಾಗಿ

ಈ ಬಾರಿಯ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳದಲ್ಲಿ ಸುಮಾರು 70 ಮಳಿಗೆಗಳಿದ್ದು, 30 ಪ್ರಕಾಶಕರಿದ್ದು, ರಾಜ್ಯ ಹಲವಾರು ಜಿಲ್ಲೆಗಳಿಂದ ಪ್ರಕಾಶಕರು, ಮಾರಾಟಗಾರರು ಭಾಗವಹಿಸಿದ್ದಾರೆ.

ಈ ಮೇಳದಲ್ಲಿ ಕಥೆ, ಕಾದಂಬರಿ, ಮಕ್ಕಳ ಪುಸ್ತಕಗಳು ಮತ್ತಿತರ ಎಲ್ಲ ಪುಸ್ತಕಗಳು ಸಿಗುವ ಕಾರಣ ಹಿರಿಯರು, ಯುವಕರು, ಮಕ್ಕಳು ಭೇಟಿ ನೀಡುತ್ತಿದ್ದಾರೆ.

ಪ್ರಕಾಶಕರು, ಮಾರಾಟಗಾರರಿಗೆ ಮೆಚ್ಚುಗೆ

ರಾಜ್ಯ ಸರ್ಕಾರವು ಯಾವುದೇ ತೊಂದರೆಯಾಗದ ರೀತಿಯಲ್ಲಿ ಪುಸ್ತಕ ಮೇಳವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಿರುವುದರಿಂದ ಪ್ರಕಾಶಕರು, ಮಾರಾಟಗಾರರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಹೆಸರಾಂತ ಸಾಹಿತಿಗಳು ಬರೆದಿರುವ ಪುಸ್ತಕಗಳನ್ನು ಇಲ್ಲಿ ಪ್ರದರ್ಶಿಸಿದ್ದು, ಮೈಸೂರು ಹಾಗೂ ಪ್ರವಾಸಿಗರಿಗೆ ಕೈಗೆಟಕುವ ದರದಲ್ಲಿ ಓದುಗರು ಪುಸ್ತಕ ಕೊಂಡುಕೊಳ್ಳಲು ಒಂದೇ ಸೂರಿನಡಿಯಲ್ಲಿ ಅನುಕೂಲ ಕಲ್ಪಿಸಿದೆ.

ಮೇಳದಲ್ಲಿರುವ ಎಲ್ಲ ಪ್ರಕಾಶಕರು ಪುಸ್ತಕಗಳಿಗೆ ಶೇ. 15 ರಿಂದ 50 ರವರೆಗೆ ಭಾರಿ ರಿಯಾಯಿತಿ ನೀಡಿದ್ದು, ಇದು ಸಹ ಓದುಗರಿಗೆ ಅನುಕೂಲವಾಗಿದೆ.

ಹಾಗಾಗಿ ಈ ಬಾರಿಯ ಪುಸ್ತಕ ಮೇಳವು ಸಾಹಿತ್ಯ ಪ್ರಿಯರಿಗೆ ಓದಲು ಅಥವಾ ಉಡುಗೊರೆ ನೀಡಲು ಸದಾವಕಾಶವಾಗಿದೆ ಎಂದರು.

ಈ ಮೇಳದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿಯೇ ವೇದಿಕೆ ನಿರ್ಮಿಸಿದ್ದು, ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿದೆ.

ಈ ಬಾರಿಯ ಪುಸ್ತಕ ಮೇಳದಲ್ಲಿ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ, ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಂಗ, ಸಂವಹನ : ಪ್ರಕಾಶನ, ರೂಪ ಪ್ರಕಾಶನ, ಅಭಿರುಚಿ ಪ್ರಕಾಶನ, ಸಾಗರಿ ಪ್ರಕಾಶನ, ವೇದ ಬುಕ್ ಹೌಸ್, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಚಿಂತನ ಚಿತ್ತಾರ, ಸ್ವಪ್ನ ಬುಕ್ ಹೌಸ್ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕದಂಬ ಪ್ರಕಾಶನ ಭಾರತೀ ಪ್ರಕಾಶನ, ಕೇಂದ್ರ ಸಾಹಿತ್ಯ ಅಕಾಡೆಮಿ ಬೆಂಗಳೂರು, ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪ ವಿಶ್ವವಿದ್ಯಾನಿಲಯ, ನವ ಕರ್ನಾಟಕ ಪಬ್ಲಿಕೇಶನ್, ಸಾಹಿತ್ಯ ಸ್ಥಂಬ, ಸಾಹಿತ್ಯ ಅಕಾಡೆಮಿ, ಶ್ರೀರಂಗಪಟ್ಟಣದ ಗೋಸಾಯಿ ಪಬ್ಲಿಷರ್ಸ್, ಶ್ರೀ ಕನಕ ಪುಸ್ತಕ ಬಂಡಾರ ಬೆಂಗಳೂರು, ಜನನಿ ಪಬ್ಲಿಕೇಷನ್‌, ರಾಮಕೃಷ್ಣ-ವಿವೇಕಾನಂದ ಮತ್ತು ವೇದಾಂತ ಸಾಹಿತ್ಯ ಭಂಡಾರ, ಜೆಎಸ್‌ಎಸ್‌ಗ್ರಂಥಮಾಲೆ, ಧಾತ್ರಿ ಪ್ರಕಾಶನ ಮೈಸೂರು ಸೇರಿದಂತೆ ಹಲವು ಪ್ರಾಧಿಕಾರದ ಮಳಿಗೆಗಳನ್ನು ತೆರೆಯಲಾಗಿದೆ.

ಪುಸ್ತಕ ಮೇಳಕ್ಕೆ ನಿಗದಿತ ನೀಡಿ

ಪ್ರತಿ ಬಾರಿಯು ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವನ್ನು ಸ್ಥಳಾಂತರಿಸಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ, ಓದುಗರಿಗೆ ತುಂಬಾ ತೊಂದರೆಯಾಗುತ್ತದೆ. ಹಲವಾರು ವರ್ಷ ಕಾಡಾ ಕಚೇರಿ ಆವರಣದಲ್ಲಿ ಆಯೋಜಿಸಲಾಗುತ್ತಿತ್ತು. ಕಳೆದ ವರ್ಷ ಮೈಸೂರು ವಿವಿಗೆ ಸೇರಿದ ಓವಲ್‌ ಮೈದಾನದಲ್ಲಿ ಆಯೋಜಿಸಿತ್ತು, ಈ ಭಾರಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ನಲ್ಲಿ ಆಯೋಜಿಸಲಾಗಿದೆ. ಆದ್ದರಿಂದ ಈ ಮೇಳಕ್ಕೆ ನಿಗದಿತ ಸ್ಥಳವನ್ನು ನೀಡಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಆದ್ದರಿಂದ ದಸರಾ ಮಹೋತ್ಸವ ಸಮಿತಿಯವರು ಸ್ಥಳ ಬದಲಾವಣೆ ಮಾಡದಂತೆ ಪ್ರಕಾಶಕರು, ಮಾರಾಟಗಾರರು ಒತ್ತಾಯಿಸಿದ್ದಾರೆ.

ಒಟ್ಟಾರೆ ದಸರಾ ಮಹೋತ್ಸವದ ಅಂಗವಾಗಿ ಪುಸ್ತಕ ಪ್ರೇಮಿಗಳಿಗಾಗಿ ಒಂದೇ ಸೂರಿನಡಿಯಲ್ಲಿ ಎಲ್ಲ ಪುಸ್ತಕಗಳನ್ನು ಕೊಂಡುಕೊಳ್ಳಲು ಅನುವು ಮಾಡಿಕೊಟ್ಟಿರುವುದಕ್ಕೆ ಪ್ರಕಾಶಕರು ಮತ್ತು ಓದುಗರು ಅಭಿನಂದಿಸಿದ್ದಾರೆ.

ಪುಸ್ತಕ ಪ್ರೇಮಿಗಳು, ಸ್ಥಳೀಯರು, ಪ್ರವಾಸಿಗರು ಈ ಪುಸ್ತಕ ಮೇಳಕ್ಕೆ ಭೇಟಿ ನೀಡಿ ಪ್ರೋತ್ಸಾಹಿಸುವಂತೆ ಪ್ರಕಾಶಕರು, ಮಾರಾಟಗಾರರು ಮನವಿ ಮಾಡಿದ್ದಾರೆ.

ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವು ಅ. 11ರವರೆಗೆ ಪ್ರದರ್ಶನವಿರುತ್ತದೆ. ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 8.30ರವರೆಗೆ ತೆರೆದಿರುತ್ತದೆ.

------

ಮೂರು ದಿನ ಮುಂಚಿತವಾಗಿ ಆರಂಭವಾಗಲಿ

---------

ಫೋಟೋ- 4ಎಂವೈಎಸ್‌ 83

-------

ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವನ್ನು ದಸರಾ ಉದ್ಘಾಟನೆ ಮುನ್ನಾ ಮೂರು ದಿನದ ಮುಂಚಿತವಾಗಿ ಆರಂಭಿಸಿದರೆ ಇನ್ನೂ ಹೆಚ್ಚು ಅನುಕೂಲವಾಗಲಿದೆ. ಕಾರಣ ದಸರಾ ಮಹೋತ್ಸವದಲ್ಲಿ 10 ದಿನಗಳ ಕಾಲ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ ಇನ್ನೀತರ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಾಗಿ ತೆರಳುತ್ತಾರೆ. ಆದ್ದರಿಂದ ಮೂರು ದಿನಗಳ ಕಾಲ ಮುಂಚಿತವಾಗಿ ಆರಂಭಿಸಿದರೆ ಉತ್ತಮ.

- ಮಹೇಶ್‌, ರೂಪ ಪ್ರಕಾಶನ, ಮೈಸೂರು.

Share this article