ಕನ್ನಡಪ್ರಭ ವಾರ್ತೆ ಮೈಸೂರು
ಹಸಿರುಲೋಕ ವತಿಯಿಂದ ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ 113ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕೃಷ್ಣಮೂರ್ತಿಪುರಂ ಬಡಾವಣೆಯ ಗುಬ್ಬಚ್ಚಿ ಶಾಲೆಯಲ್ಲಿ ಮನೆಗೊಂದು ಗಿಡ ಆಯುರ್ವೇದ ಸಸಿ ವಿತರಣೆ ಅಭಿಯಾನ ನಡೆಯಿತು.ಲಕ್ಷ್ಮಿಪುರಂ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ರವಿಶಂಕರ್ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಆಯುರ್ವೇದ ಗಿಡಗಳನ್ನು ವಿತರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿ, ದೇಶ ಸಮೃದ್ಧಿಯಾಗಬೇಕಾದರೆ ಸಣ್ಣ ವಯಸ್ಸಿನಲ್ಲೇ ಮಕ್ಕಳು ಉತ್ತಮ ಶಿಕ್ಷಣ ಪಡೆದು ಮೌಲ್ಯಯುತವಾದ ಜೀವನ ನಡೆಸಬೇಕು ಮತ್ತು ಮನೆಗೊಂದು ಗಿಡ ನೆಟ್ಟು ಪೋಷಿಸುವಂತೆ ನಾಗರೀಕರು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು, ಇತ್ತೀಚಿನ ದಿನಗಳಲ್ಲಿ ತಾಪಮಾನ ಹೆಚ್ಚಾಗುತ್ತಿದೆ, ದುಶ್ಚಟ ಮತ್ತು ವ್ಯಸನದಿಂದ ಆಕರ್ಷಿತವಾಗದೇ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವತ್ತ ಯುವಪೀಳಿಗೆ ಮುಂದಾಗಬೇಕು ಎಂದು ಕರೆ ನೀಡಿದರು .
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾತನಾಡಿ, ಭಾರತದ ಪ್ರಧಾನಿ ಮೋದಿ ರವರು ಭಾರತೀಯರಿಗೆ ಜನ್ಮ ಕೊಟ್ಟ ತಾಯಿಯ ಹೆಸರಲ್ಲಿ ಒಂದು ಗಿಡ ನೆಡುವಂತೆ ಮನವಿ ಮಾಡಿದ್ದಾರೆ, ಅದರಂತೆಯೇ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮಕ್ಕ ಅವರ 113ನೇ ವರ್ಷದ ಹುಟ್ಟುಹಬ್ಬ ಮನೆಗೊಂದು ಗಿಡ ಸಸಿ ವಿತರಣೆ ಮೂಲಕ ಆಯೋಜಿಸುತ್ತಿರುವುದು ಶ್ಲಾಘನೀಯವಾದ ಕೆಲಸ ಎಂದರು.ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮಾತನಾಡಿದರು.
ನಂತರ ಗುಬ್ಬಚ್ಚಿ ಶಾಲಾ ಮಕ್ಕಳಿಗೆ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ ಪುಸ್ತಕ ಸಾಮಗ್ರಿಗಳನ್ನು ವಿತರಿಸಿದರು.ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷೆ ಸವಿತಾ ಘಾಟ್ಕೆ, ವಕೀಲರಾದ ಜಯಶ್ರೀ ಶಿವರಾಮ್, ಕಟ್ಟೆ ಬಳಗದ ಅಧ್ಯಕ್ಷ ಸತ್ಯನಾರಾಯಣ, ಅಗಸ್ತ್ಯ ಸೊಸೈಟಿ ನಿರ್ದೇಶಕ ವಿಕ್ರಂ ಅಯ್ಯಂಗಾರ್, ಹಸಿರುಲೋಕ ಸಂಚಾಲಕರಾದ ಅಜಯ್ ಶಾಸ್ತ್ರಿ, ಚೇತನ್ ಕಾಂತರಾಜು, ಸುಚೀಂದ್ರ, ಸಚಿನ್ ನಾಯಕ, ರಮಾ, ಶಾಲೆಯ ಮುಖ್ಯೋಪಾಧ್ಯಾಯ ಮೋಹನ್, ಶಿಕ್ಷಕಿ ಚಂಪಕ ಇದ್ದರು.